ಮುಂಬೈ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಮಿಂಚಲು ಸಿದ್ದರಾಗಿದ್ದ ಮೂವರು ಆಟಗಾರರಿಗೆ ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿ ಅಡ್ಡಿಯಾಗಿದೆ.
ನವೀನ್ ಉಲ್ ಹಖ್, ಮುಜೀಬ್ ಉರ್ ರಹಮಾನ್ ಮತ್ತು ಫಜಲಕ್ ಫರೂಖಿ ಅವರಿಗೆ ಐಪಿಎಲ್ ಆಡಲು ನಿರಾಕ್ಷೇಪಣಾ ಪತ್ರ ನೀಡಲು ಮಂಡಳಿ ನಿರಾಕರಿಸಿದೆ. ಎರಡು ವರ್ಷ ಕಾಲ ಮೂವರಿಗೆ ಐಪಿಎಲ್ ಸೇರಿ ಯಾವುದೇ ಟಿ20 ಲೀಗ್ ಆಡಲು ಅನುಮತಿ ನೀಡದಿರಲು ನಿರ್ಧರಿಸಿದೆ.
ಆಟಗಾರರು ತಮ್ಮ ವಾರ್ಷಿಕ ಕೇಂದ್ರೀಯ ಒಪ್ಪಂದಗಳಿಂದ ಬಿಡುಗಡೆ ಹೊಂದಲು ಬಯಸಿದ ಹಿನ್ನೆಲೆಯಲ್ಲಿ ಈ ನಿರ್ಧಾರಗಳು ಬಂದಿವೆ. ರಾಷ್ಟ್ರೀಯ ಕರ್ತವ್ಯಕ್ಕಿಂತ ವೈಯಕ್ತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡಲು ಈ ಮೂವರು ಮುಂದಾದ ಕಾರಣ ಎಸಿಬಿ ಈ ನಿರ್ಧಾರ ಕೈಗೊಂಡಿದೆ.
ಅಫ್ಘಾನಿಸ್ತಾನದ ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯು ಆಟಗಾರರ ವಿರುದ್ಧ “ಶಿಸ್ತು ಕ್ರಮ” ತೆಗೆದುಕೊಂಡಿದೆ ಎಂದು ಹೇಳಿದೆ.
ಮುಂದಿನ ಮಾರ್ಚ್‌ನಲ್ಲಿ ಐಪಿಎಲ್‌ನ 2024 ರ ಸೀಸನ್ ಪ್ರಾರಂಭವಾಗಲಿದ್ದು, ಮೂವರು ಅಫ್ಘಾನ್ ಆಟಗಾರರ ಭವಿಷ್ಯವು ಅನುಮಾನಾಸ್ಪದವಾಗಿದೆ. ಐಪಿಎಲ್ 2024 ರ ಹರಾಜಿನಲ್ಲಿ ಮುಜೀಬ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ರೂ 2 ಕೋಟಿಗೆ ಆಯ್ಕೆ ಮಾಡಿಕೊಂಡರೆ, ನವೀನ್ ಮತ್ತು ಫಜಲ್ಫಾಕ್ ಅವರನ್ನು ಕ್ರಮವಾಗಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು.