Friday, 22nd November 2024

ಆಸ್ಟ್ರೇಲಿಯಾ ಓಪನ್: ಸರ್ಬಿಯಾ ಸಂಜಾತನಿಗೆ 17ನೇ ಗ್ರಾನ್‌ ಸ್ಲಾಂ ಮುಕುಟ

ಸದ್ಯದ ಮಟ್ಟಿಗೆ ಪುರುಷ ಟೆನಿಸ್‌ನ ಅನಭಿಷಿಕ್ತ ದೊರೆಯಾಗಿರುವ ಸರ್ಬಿಯಾದ ನೋವಾಕ್ ಜೋಕೋವಿಚ್‌, ಆಸ್ಟ್ರೇಲಿಯನ್‌ ಓಪನ್‌ನ ತಮ್ಮ ದಾಖಲೆಯನ್ನು ಎಂಟನೇ ಪ್ರಶಸ್ತಿಗೆ ಮುಂದುವರೆಸಿದ್ದಾರೆ.

ಕಳೆದ ವರ್ಷ ಏಳನೇ ಪ್ರಶಸ್ತಿ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದ ಜೋಕೋವಿಚ್‌, ಈ ಬಾರಿಯೂ ಗೆದ್ದಿದ್ದಾರೆ. ಅಲ್ಲದೇ, ಮೂರು ವಿವಿಧ ದಶಕಗಳಲ್ಲಿ ವರ್ಷದ ಮೊದಲ ಗ್ರಾನ್ ಸ್ಲಾಂ ಕಿರೀಟಕ್ಕೆ ಮುತ್ತಿಕ್ಕಿದ ವಿಶೇಷ ದಾಖಲೆಯೊಂದನ್ನು ಜೋಕೋವಿಚ್‌ ತಮ್ಮದಾಗಿಸಿಕೊಂಡಿದ್ದಾರೆ.

ಫೆಡರರ್‌, ನಡಾಲ್‌, ಜೋಕೋವಿಚ್‌ ತ್ರಿವಳಿಯ ನಾಗಾಲೋಟಕ್ಕೆ ಬ್ರೇಕ್ ಹಾಕಿಬಿಡುವರೆಂಬ ಭರವಸೆ ಮೂಡಿಸಿದ್ದ ಡೊಮಿನಿಕ್ ಥೀಮ್‌, ಪುರುಷರ ಟೆನಿಸ್‌ನ ಮುಂದಿನ ಬಿಗ್‌ ನೇಮ್ ಆಗುವ ಎಲ್ಲಾ ಲಕ್ಷಣಗಳನ್ನೂ ತೋರಿದ್ದಾರೆ.

ಮೆಲ್ಬರ್ನ್‌‌ನ ರಾಡ್‌ ಲೆವರ್‌ ಅರೆನಾದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಈ ಬಾರಿ ಡೊಮಿನಿಕ್ ಥೀಮ್‌ ಗೆಲ್ಲಬಹುದು ಎಂಬ ಲೆಕ್ಕಾಚಾರಗಳು ಮೂರು ಸೆಟ್‌ಗಳ ಬಳಿಕ ಬಲಗೊಂಡಿದ್ದವು. ಆಸ್ಟ್ರಿಯಾದ 26ರ ಹರೆಯದ ಥೀಮ್‌, 4-6, 6-4 & 6-2 ರಲ್ಲಿ ಮೊದಲ ಮೂರು ಸೆಟ್‌ಗಳ ಅಂತ್ಯಕ್ಕೆ ಲೀಡ್ ಕಾಯ್ದುಕೊಂಡಿದ್ದರು. ಆದರೆ, ಇದೇ ಅಂಗಳಲ್ಲಿ ತಾವಾಡಿದ ಎಲ್ಲ ಫೈನಲ್‌ಗಳಲ್ಲೂ ಗೆದ್ದು ಬೀಗಿರುವ ಜೋಕೋವಿಚ್‌, ತಾವೇಕೆ 16 ಗ್ರಾನ್ ಸ್ಲಾಮ್‌ಗಳನ್ನು ಗೆದ್ದಿರುವ ಚಾಂಪಿಯನ್‌ ಎಂದು ತೋರುವ ಆಟವನ್ನಾಡಿದರು.

ಮಿಕ್ಕ ಎರಡು ಸೆಟ್‌ಗಳಲ್ಲಿ ಅದ್ಭುತ ಕಮ್‌ ಬ್ಯಾಕ್ ಮಾಡಿದ ನೋವಾಕ್‌, 6-3, 6-4ರಲ್ಲಿ ಗೆಲ್ಲುವ ಮೂಲಕ, 5 ಸೆಟ್‌ಗಳ ಪಂದ್ಯವನ್ನು ರೋಚಕವಾಗಿ ತಮ್ಮದಾಗಿಸಿಕೊಂಡಿದ್ದಾರೆ. ನಾಲ್ಕು ಗಂಟೆಗಳ ಕಾಲ ಇಬ್ಬರೂ ಆಗಾರರ ಸ್ಟಾಮಿನಾ ಹಾಗೂ ಫೋಕಸ್‌ಗಳನ್ನು ಪರೀಕ್ಷಿಸಿದ ಈ ಪಂದ್ಯದಲ್ಲಿ ಅಂತಿಮ ನಗೆ ಚೆಲ್ಲುವ ಮೂಲಕ 17ನೇ ಗ್ರಾನ್ ಸ್ಲಾಂ ಗೆದ್ದ ಜೋಕೋವಿಚ್‌, ಸ್ಪೇನ್‌ನ ರಾಫೆಲ್‌ ನಡಾಲ್‌ರನ್ನು ಹಿಂದಿಕ್ಕಿ ಪುರುಷರ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಿಯಾಗಿದ್ದಾರೆ.

20 ಗ್ರಾನ್‌ ಸ್ಲಾಂಗಳನ್ನು ಗೆದ್ದಿರುವ ಸ್ವಿಸ್‌ ಸ್ಟಾರ್‌ ರೋಜರ್‌ ಫೆಡರರ್‌‌ ದಾಖಲೆಯನ್ನು ಸರಿಗಟ್ಟಲು ಜೋಕೋವಿಚ್‌ಗೆ ಇನ್ನು ಮೂರು ಪ್ರಶಸ್ತಿಗಳು ಬೇಕಿವೆ. ಕಳೆದ 13 ಗ್ರಾನ್‌ ಸ್ಲಾಂಗಳ ಪುರುಷರ ವಿಭಾಗದಲ್ಲಿ ಜೋಕೋವಿಚ್‌, ಫೆಡರರ್‌ ಹಾಗೂ ನಡಾಲ್‌‌ರೇ ಗೆದ್ದುಕೊಂಡಿದ್ದಾರೆ.

ಫೈನಲ್‌ ಹಾದಿಯಲ್ಲಿ ರಾಫೇಲ್ ನಡಾಲ್ ಹಾಗೂ ಅಲೆಕ್ಸಾಂಡರ್‌ ಝ್ವರೆವ್‌ರನ್ನು ಮಣಿಸಿ ಬಂದಿದ್ದ ಡೊಮಿನಿಕ್ ಥೀಮ್‌ ಪ್ರಶಸ್ತಿ ಸುತ್ತಿನಲ್ಲಿ ಎಡವಿದರೂ ಸಾಕಷ್ಟು ಭರವಸೆ ಮೂಡಿಸಿದ್ದು, ಮುಂದಿನ ಪೀಳಿಗೆಯ ಸೂಪರ್‌ ಸ್ಟಾರ್‌ ಆಗುವ ಎಲ್ಲ ಲಕ್ಷಣಗಳನ್ನೂ ತೋರಿದ್ದಾರೆ. ಥೀಮ್ ಹಾಗೂ ಜರ್ಮನಿಯ ಸೆನ್ಸೇಷನ್‌ ಅಲೆಕ್ಸಾಂಡರ್‌ ಝ್ವರೇವ್‌‌, ಈ ಚಾಂಪಿಯನ್‌ ತ್ರಿವಳಿಗಳ ನಾಗಾಲೋಟಕ್ಕೆ ಬ್ರೇಕ್‌ ಹಾಕಬಹುದು ಎಂಬ ಲೆಕ್ಕಾಚಾರ ಟೆನ್ನಿಸ್‌ ಲೋಕದಲ್ಲಿ ಕೇಳಿ ಬರುತ್ತಿದೆ.