ಮುಂಬಯಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿರುವ ಟೀಮ್ ಇಂಡಿಯಾದ ಎಡಗೈ ಬ್ಯಾಟರ್ ಶಿಖರ್ ಧವನ್(Shikhar Dhawan) ಅವರು ನವೆಂಬರ್ 30ರಿಂದ ಆರಂಭವಾಗಲಿರುವ ಚೊಚ್ಚಲ ನೇಪಾಳ ಪ್ರೀಮಿಯರ್ ಲೀಗ್ನಲ್ಲಿ (NPL 2024) ಆಡಲಿದ್ದಾರೆ. ಧವನ್ ಕರ್ನಾಲಿ ಯಾಕ್ಸ್(Karnali Yaks) ಫ್ರಾಂಚೈಸಿ ಜತೆ ಧವನ್ ಒಪ್ಪಂದ ಮಾಡಿಕೊಂಡಿದ್ದಾರೆ.
ಚೊಚ್ಚಲ ನೇಪಾಳ ಪ್ರೀಮಿಯರ್ ಲೀಗ್ನಲ್ಲಿ(Nepal Premier League) ಒಟ್ಟು 8 ತಂಡಗಳು ಕಾಣಿಸಿಕೊಳ್ಳಲಿವೆ. ನ.30 ರಿಂದ ಪಂದ್ಯಾವಳಿ ಆರಂಭಗೊಂಡು ಡಿಸೆಂಬರ್ 21 ರಂದು ಮುಕ್ತಾಯಗೊಳ್ಳಲಿದೆ. ಒಟ್ಟು 32 ಪಂದ್ಯಗಳು ನಡೆಯಲಿವೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತೆಯೇ ನಾಕೌಟ್ ಹಂತಗಳನ್ನು ಈ ಟೂರ್ನಿಯೂ ಒಳಗೊಂಡಿದೆ. ಒಂದು ಎಲಿಮಿನೇಟರ್, ಎರಡು ಅರ್ಹತಾ ಪಂದ್ಯಗಳು ಮತ್ತು ಫೈನಲ್‌ನೊಂದಿಗೆ ಪ್ಲೇಆಫ್‌ಗಳನ್ನು ಒಳಗೊಂಡಿದೆ.
ಈಗಾಗಲೇ ಫ್ರಾಂಚೈಸಿಗಳ ಹರಾಜು ಪ್ರಕ್ರಿಯೆ ಮುಗಿದಿದ್ದು, ಅದರಂತೆ ಬಿರಾಟ್‌ನಗರ ಕಿಂಗ್ಸ್, ಚಿಟ್ವಾನ್ ರೈನೋಸ್, ಜನಕ್‌ಪುರ್ ಬೋಲ್ಟ್ಸ್, ಕಠ್ಮಂಡು ಗೂರ್ಖಾಸ್, ಲುಂಬಿನಿ ಲಯನ್ಸ್, ಪೋಖರಾ ಅವೆಂಜರ್ಸ್, ಕರ್ನಾಲಿ ಯಾಕ್ಸ್ ಮತ್ತು ಸುದುರ್ಪಶ್ಚಿಮ್ ರಾಯಲ್ಸ್ ತಂಡಗಳು ಕಣಕ್ಕಿಳಿಯಲಿವೆ.
ಬಿಸಿಸಿಐ ಕೂಲಿಂಗ್ ಆಫ್ ಪೀರಿಯಡ್ ನಿಯಮದ ಪ್ರಕಾರ ಯಾವುದೇ ಆಟಗಾರ ರಾಷ್ಟ್ರೀಯ ತಂಡದಿಂದ ನಿವೃತ್ತಿ ಹೇಳಿದ ಬಳಿಕ ತಕ್ಷಣ ಅಥವಾ ಐಪಿಎಲ್ ಆಡುತ್ತಿದ್ದರೆ ವಿದೇಶಿ ಲೀಗ್‌ಗಳಲ್ಲಿ ಆಡಬಾರದು. ಆದರೆ ಧವನ್ ಬಿಸಿಸಿಐನಿಂದ ಅನುಮತಿ ಪಡೆದಿದ್ದಾರೆ. ಬಿಸಿಸಿಐ ಕೂಡ ಅವರಿಗೆ ಆಡುವ ಅವಕಾಶ ನೀಡಿದೆ.
ಇದನ್ನೂ ಓದಿ Mohammed Shami: 34ನೇ ವಸಂತಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಧವನ್ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದರು. ಈ ಬಾರಿ ಅವರನ್ನು ತಂಡ ಕೈಬಿಟ್ಟಿದೆ. ಒಟ್ಟು 222 ಐಪಿಎಲ್ ಪಂದ್ಯವನ್ನಾಡಿರುವ ಧವನ್ 2 ಶತಕ ಹಾಗೂ 51 ಅರ್ಧಶತಕಗಳೊಂದಿಗೆ ಒಟ್ಟು 6768 ರನ್ ಕಲೆಹಾಕಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಶಿಖರ್ ಧವನ್ ದ್ವಿತೀಯ ಸ್ಥಾನದಲ್ಲಿದ್ದಾರೆ.
ಧವನ್ ಅವರು ಭಾರತ ಪರ ಒಟ್ಟು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್ ಬಾರಿಸಿದ್ದಾರೆ. ಇದರಲ್ಲಿ 39 ಅಧರ್ಶತಕ ಮತ್ತು 17 ಶತಕ ಒಳಗೊಂಡಿದೆ. 143 ರನ್ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 34 ಪಂದ್ಯ ಆಡಿ 2315 ಗಳಿಸಿದ್ದಾರೆ. 7 ಶತಕ ಮತ್ತು 5 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿರುವ ಧವನ್ 68 ಪಂದ್ಯ ಆಡಿ 1759 ರನ್ ಕಲೆಹಾಕಿದ್ದಾರೆ. 11 ಅರ್ಧಶತಕ ಬಾರಿಸಿದ್ದಾರೆ.