Thursday, 19th September 2024

NZ vs AFG: ವಿಕ್ರಮ್ ರಾಥೋರ್ ನ್ಯೂಜಿಲ್ಯಾಂಡ್‌ ತಂಡಕ್ಕೆ ಸಹಾಯಕ ಬ್ಯಾಟಿಂಗ್‌ ಕೋಚ್‌

NZ vs AFG

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್(Vikram Rathour) ಮತ್ತು ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ರಂಗನಾ ಹೆರಾತ್(Rangana Herath) ಅವರು ಏಷ್ಯಾದಲ್ಲಿ ಮುಂಬರುವ ಟೆಸ್ಟ್‌ಗೆ ಸಿದ್ಧರಾಗಲು ನ್ಯೂಜಿಲ್ಯಾಂಡ್‌(New Zealand) ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ನ್ಯೂಜಿಲ್ಯಾಂಡ್‌(NZ vs AFG) ತಂಡ ಸೆಪ್ಟೆಂಬರ್ 9 ರಿಂದ ಆರಂಭಗೊಳ್ಳಲಿರುವ ಅಫಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯವನ್ನಾಡಲು ಶುಕ್ರವಾರ ಭಾರತಕ್ಕೆ ಬಂದಿಳಿದಿದೆ. ಇತ್ತಂಡಗಳ ಈ ಟೆಸ್ಟ್‌ ಪಂದ್ಯ ಭಾರತದ ಗ್ರೇಟರ್ ನೋಯ್ಡಾದಲ್ಲಿ ನಡೆಯಲಿದೆ.

ವಿಕ್ರಮ್‌ ಅವರು ಮಾಜಿ ಕೋಚ್‌ ರಾಹುಲ್‌ ದ್ರಾವಿಡ್ ಅಧಿಕಾರವಧಿಯಲ್ಲಿ ತಂಡದ ಬ್ಯಾಟಿಂಗ್ ಕೋಚ್‌ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಭಾರತದ ಟಿ20 ವಿಶ್ವಕಪ್‌ ಗೆಲುವಿನಲ್ಲಿಯೂ ವಿಕ್ರಮ್‌ ಅವರ ಮಾರ್ಗದರ್ಶನ ಪ್ರಮುಖ ಪಾತ್ರವಹಿಸಿತ್ತು. ರಾಥೋಡ್ 90 ರ ದಶಕದಲ್ಲಿ ಭಾರತದ ಪರ 6 ​​ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ನ್ಯೂಜಿಲ್ಯಾಂಡ್‌ ತಂಡ ಅಫಘಾನಿಸ್ತಾನ ವಿರುದ್ಧದ ಸರಣಿ ಬಳಿಕ ಶ್ರೀಲಂಕಾ ಮತ್ತು ಭಾರತ ವಿರುದ್ಧ ಟೆಸ್ಟ್‌ ಸರಣಿ ಆಡಲಿದೆ. ಏಷ್ಯಾದ ಪಿಚ್‌ಗಳು ಸ್ಪಿನ್‌ ಟ್ರ್ಯಾಕ್‌ ಆಗಿರುವ ಕಾರಣ ಇದನ್ನು ಸಮರ್ಥವಾಗಿ ಎದುರಿಸಿ ಆಡುವ ನಿಟ್ಟಿನಲ್ಲಿ ಕಿವೀಸ್‌ ಕ್ರಿಕೆಟ್‌ ಮಂಡಳಿ ವಿಕ್ರಮ್‌ ಮತ್ತು ಹೆರಾತ್ ಅವರ ನೆರವು ಪಡೆದಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ದಿನಾಂಕ ಈಗಾಗಲೇ ಐಸಿಸಿ ಪ್ರಕಟಿಸಿದೆ. ನ್ಯೂಜಿಲ್ಯಾಂಡ್ ಇದುವರೆಗೆ​ 6 ಪಂದ್ಯಗಳಲ್ಲಿ 3 ರಲ್ಲಿ ಗೆದ್ದು 36 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದೆ. ಫೈನಲ್‌ ಪ್ರವೇಶಿಸುವ ನಿಟ್ಟಿನಲ್ಲಿ ಕಿವೀಸ್‌ಗೆ ಮುಂದಿನ ಸರಣಿಯಲ್ಲಿ ಗೆಲುವು ಅತ್ಯಗತ್ಯ. ಮೊದಲ ಆವೃತ್ತಿಯಲ್ಲೇ ಕಿವೀಸ್‌ ಭಾರತ ತಂಡವನ್ನು ಮಣಿಸಿ ಚೊಚ್ಚಲ ಟ್ರೋಫೊ ಗೆದ್ದ ಸಾಧನೆ ಮಾಡಿತ್ತು. ನ್ಯೂಜಿಲ್ಯಾಂಡ್‌ ಶ್ರೀಲಂಕಾ ವಿರುದ್ಧ 2 ಟೆಸ್ಟ್‌, ಭಾರತ ವಿರುದ್ಧ 3 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

ಇದನ್ನೂ ಓದಿ Women’s T20 World Cup: ಇಂದು ಬೆಂಗಳೂರಿಗೆ ಬರಲಿದೆ ಮಹಿಳಾ ವಿಶ್ವಕಪ್ ಟ್ರೋಫಿ

ಅಫಘಾನಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ವಿಕ್ರಮ್ ರಾಥೋರ್ ನ್ಯೂಜಿಲ್ಯಾಂಡ್‌ ತಂಡದ ಸಹಾಯಕ ಬ್ಯಾಟಿಂಗ್‌ ಕೋಚ್‌ ಆಗಿ, ಶ್ರೀಲಂಕಾದ ರಂಗನಾ ಹೆರಾತ್ ಸ್ಪಿನ್‌ ಬೌಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ರಂಗನಾ ಹೆರಾತ್‌ ಭಾರತದ ನೆಲದಲ್ಲಿ ಆಡಿದ ಅಪಾರ ಅನುಭವ ಹೊಂದಿದ್ದಾರೆ. ಅವರು ಲಂಕಾ ಪರ 93 ಟೆಸ್ಟ್‌ ಪಂದ್ಯಗಳಿಂದ 433 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. ಒಟ್ಟಾರೆ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 525 ವಿಕೆಟ್‌ ಕಲೆಹಾಕಿದ್ದಾರೆ. 2016 ರಲ್ಲಿ ಏಕದಿನ ಮತ್ತು ಟಿ20 ಕ್ರಿಕೆಟ್‌ ಹೇಳಿದ್ದ ಹೆರಾತ್, 2018ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದರು.