ಗಾಲೆ: ನ್ಯೂಜಿಲ್ಯಾಂಡ್(NZ vs SL) ವಿರುದ್ಧದ ತವರಿನ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದ ಶ್ರೀಲಂಕಾ ಇದೀಗ ದ್ವಿತೀಯ ಟೆಸ್ಟ್ನಲ್ಲಿಯೂ ಹಿಡಿತ ಸಾಧಿಸಿದೆ. ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 602 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ. ಬೃಹತ್ ಮೊತ್ತವನ್ನು ಬೆನ್ನಟ್ಟುತ್ತಿರುವ ಕಿವೀಸ್ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಈ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ ಯುವ ಬ್ಯಾಟರ್ ಕಮಿಂದು ಮೆಂಡಿಸ್ ಈ ಶತಕದ ಮೂಲಕ ನೂತನ ಇತಿಹಾಸ ರಚಿಸಿದ್ದಾರೆ. ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಆಡಿದ ಮೊದಲ 8 ಪಂದ್ಯಗಳಲ್ಲಿ 50 ಪ್ಲಸ್ ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ಟೆಸ್ಟ್ನಲ್ಲಿ ಆಡಿದ ಮೊದಲ 13 ಇನಿಂಗ್ಸ್ಗಳಲ್ಲೇ ಟೆಸ್ಟ್ ಶತಕ ಬಾರಿಸಿ, ಅತಿ ವೇಗವಾಗಿ 5 ಶತಕಗಳನ್ನು ಬಾರಿಸಿದ ಶ್ರೀಲಂಕಾದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಜತೆಗೆ ದಿಗ್ಗಜ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ್ದಾರೆ. ಬ್ರಾಡ್ಮನ್ ಮತ್ತು ಜಾರ್ಜ್ ಹೆಡ್ಲಿ ತಮ್ಮ ಮೊದಲ 13 ಇನ್ನಿಂಗ್ಸ್ಗಳಲ್ಲಿ 5 ಶತಕಗಳನ್ನು ಪೂರ್ಣಗೊಳಿಸಿದ್ದರು. ಇದೀಗ ಮೆಂಡಿಸ್ ಕೂಡ ತಮ್ಮ 8ನೇ ಟೆಸ್ಟ್ ಪಂದ್ಯದ 13ನೇ ಇನ್ನಿಂಗ್ಸ್ನಲ್ಲಿ 5ನೇ ಶತಕ ಪೂರೈಸಿ ದಿಗ್ಗಜರ ಜತೆ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಮೊದಲ ಪಂದ್ಯದಲ್ಲಿಯೂ ಮೆಂಡಿಸ್ ಶತಕ ಬಾರಿಸಿ ಮಿಂಚಿದ್ದರು.
ಇದನ್ನೂ ಓದಿ IND vs BAN: ಬುಮ್ರಾ ಬೌಲಿಂಗ್ ಶೈಲಿ ಹೇಗೆಂದು ತೋರಿಸಿಕೊಟ್ಟ ಕೊಹ್ಲಿ, ಜಡೇಜಾ; ವಿಡಿಯೊ ವೈರಲ್
ಎರಡನೇ ದಿನವಾದ ಶುಕ್ರವಾರ ಏಂಜಲೋ ಮ್ಯಾಥ್ಯೂಸ್ 185 ಎಸೆತಗಳಲ್ಲಿ 7 ಫೋರ್ಗಳೊಂದಿಗೆ 88 ರನ್ ಬಾರಿಸಿ ವಿಕೆಟ್ ಕೈಚೆಲ್ಲಿದರೆ, ನಾಯಕ ಧನಂಜಯ ಡಿʼಸಿಲ್ವಾ 80 ಎಸೆತಗಳಲ್ಲಿ 44 ರನ್ಗಳ ಮಹತ್ವದ ಕೊಡುಗೆ ಕೊಟ್ಟರು. ಮೆಂಡಿಸ್ 250 ಎಸೆತ ಎದುರಿಸಿ 16 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ ಅಜೇಯ 182 ರನ್ ಬಾರಿಸಿದರು.
2022ರಲ್ಲಿ ಆಸ್ಟ್ರೇಲಿಯಾ ಎದುರು ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟ ಕಮಿಂದು ಮೆಂಡಿಸ್, ಕಾಂಗರೂಗಳ ಎದುರು ಶ್ರೀಲಂಕಾ ತಂಡದ ಐತಿಹಾಸಿಕ ಗೆಲುವಿನಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಟೆಸ್ಟ್ ಕ್ರಿಕೆಟ್ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ 25 ವರ್ಷದ ಮೆಂಡೀಸ್ ಅತಿ ವೇಗವಾಗಿ 1000 ರನ್ ಪೂರೈಸಿದ ದಾಖಲೆಯನ್ನು ನಿರ್ಮಿಸಿದ್ದಾರೆ.