ದುಬೈ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದ, ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ(Shaheen Afridi) ನೂತನ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ(ODI Bowling Rankings) 696 ರೇಟಿಂಗ್ ಪಡೆದು ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇದಕ್ಕೂ ಮುನ್ನ ಅಗ್ರಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್(674) ಎರಡು ಸ್ಥಾನಗಳ ನಷ್ಟದೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಭಾರತ ತಂಡದ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ(645) ಮತ್ತು ಮೊಹಮ್ಮದ್ ಸಿರಾಜ್(643) ಯಾವುದೇ ಏಕದಿನ ಪಂದ್ಯವನ್ನಾಡದಿದ್ದರೂ ತಲಾ 2 ಸ್ಥಾನಗಳ ಪ್ರಗತಿಯೊಂದಿಗೆ ಕ್ರಮವಾಗಿ 6 ಮತ್ತು7 ನೇ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಕುಲ್‌ದೀಪ್ ಯಾದವ್(665) ಒಂದು ಸ್ಥಾನ ಕುಸಿತ ಕಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಅಗ್ರಸ್ಥಾನಕ್ಕೇರಿರುವ ಶಾಹೀನ್ ಶಾ ಅಫ್ರಿದಿ ಆಸೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಒಟ್ಟು 8 ವಿಕೆಟ್ ಕಿತ್ತು ಮಿಂಚಿದ್ದರು. ಈ ಅಮೋಘ ಪ್ರದರ್ಶನದ ಕಾರಣ 3 ಸ್ಥಾನಗಳ ಪ್ರತಿಯೊಂದಿಗೆ ಅಗ್ರಸ್ಥಾನ ಅಲಂಕರಿಸಿದರು.
ಸಂಜು 27 ಸ್ಥಾನಗಳ ಜಿಗಿತ
ದಕ್ಷಿಣ ಆಫ್ರಿಕಾ ವಿರುದ್ಧ ಸಾಗುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ಬಾರಿಸಿದ್ದ ಭಾರತೀಯ ವಿಕೆಟ್ ಕೀಪರ್&ಬ್ಯಾಟರ್ ಸಂಜು ಸ್ಯಾಮ್ಸನ್(Sanju Samson) ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಬರೋಬ್ಬರಿ 27 ಸ್ಥಾನಗಳ ಪ್ರಗತಿಯೊಂದಿಗೆ ತನ್ನ ಜೀವನಶ್ರೇಷ್ಠ 39 ನೇ ಸ್ಥಾನವನ್ನು ಪಡೆದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಇಂಗೆಂಡ್‌ನ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್(841) ಒಂದು ಸ್ಥಾನದ ಏರಿಕೆ ಕಂಡು ದ್ವಿತೀಯ ಸ್ಥಾನಕ್ಕೇರಿದ್ದಾರೆ. ಈ ಹಿಂದೆ 2ನೇ ಸ್ಥಾನಿಯಾಗಿದ್ದ ಸೂರ್ಯಕುಮಾರ್ ಯಾದವ್(803) ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್(881) ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.
ಟಾಪ್-5 ಏಕದಿನ ಬೌಲರ್
1. ಶಾಹೀನ್ ಶಾ ಅಫ್ರಿದಿ-696
2. ರಶೀದ್ ಖಾನ್-687
3. ಕೇಶವ್ ಮಹಾರಾಜ್-674
4. ಕುಲ್‌ದೀಪ್ ಯಾದವ್-665
5. ಬರ್ನಾರ್ಡ್ ಸ್ಕೋಲ್ಟ್ಜ್-654
ಟಿ20 ಬ್ಯಾಟಿಂಗ್ ಶ್ರೇಯಾಂಕ
1. ಟ್ರಾವಿಸ್ ಹೆಡ್-881
2. ಫಿಲ್ ಸಾಲ್ಟ್-841
3. ಸೂರ್ಯಕುಮಾರ್ ಯಾದವ್-803
4. ಬಾಬರ್ ಅಜಂ-755
5. ಮೊಹಮ್ಮದ್ ರಿಜ್ವಾನ್-746