ನವದೆಹಲಿ: ನಿಗದಿತ ವೇಳಾಪಟ್ಟಿಯ ಪ್ರಕಾರವೇ ಒಲಿಂಪಿಕ್ಸ್ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ (ಐಒಸಿ) ಮುಖ್ಯಸ್ಥ ಥಾಮಸ್ ಬಾಕ್ ಶನಿವಾರ ಹೇಳಿದ್ದಾರೆ.
‘2020ರ ಟೋಕಿಯೊ ಕೂಟವನ್ನು ಕೋವಿಡ್ ಹಿನ್ನೆಲೆಯಲ್ಲಿ ಈಗಾಗಲೇ ಒಂದು ವರ್ಷ ಮುಂದೂಡಲಾಗಿದೆ.
ಆನ್‌ಲೈನ್ ಮೂಲಕ ನಡೆದ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್‌ಐಎಚ್) 47ನೇ ಅಧಿವೇಶನವನ್ನುದ್ದೇಶಿ ಮಾತನಾಡಿ, ಟೋಕಿಯೊ ಒಲಿಂಪಿಕ್ಸ್‌ಗೆ ಕ್ಷಣಗಣನೆ ಆರಂಭವಾಗಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ಥಿರತೆಯ ಬಲವಾದ ಸಂದೇಶಗಳನ್ನು ಕಳುಹಿಸಬೇಕಿದೆ. ಟೋಕಿಯೊ ಕೂಟ ಕತ್ತಲಿನಾಚೆಯೂ ಬೆಳಕಿದೆ ಎಂಬುದನ್ನು ತೋರಿಸಲಿದೆ’ ಎಂದು ಬಾಕ್ ಹೇಳಿದ್ದಾರೆ.
ಟೋಕಿಯೊ ಮತ್ತು ಜಪಾನಿನ ಕೆಲವು ನಗರಗಳಲ್ಲಿ ಕೋವಿಡ್ ತುರ್ತು ಪರಿಸ್ಥಿತಿ ಇದ್ದರೂ ಒಲಿಂಪಿಕ್ಸ್ ಆಯೋಜಿಸಲಾಗುವುದು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಪ್ರಭಾರಿ ಉಪಾಧ್ಯಕ್ಷ ಜಾನ್ ಕೋಟ್ಸ್ ಶುಕ್ರವಾರ ಹೇಳಿದ್ದರು.
ಜಪಾನ್‌ನ ಬಹುತೇಕ ಜನತೆ ಒಲಿಂಪಿಕ್ಸ್ ಆಯೋಜನೆಯ ಪರವಾಗಿ ಇಲ್ಲ. ಆದರೆ ಕೂಟ ಆಯೋಜನೆಯ ವಿಷಯದಲ್ಲಿ ಐಒಸಿ ಅಚಲವಾಗಿದೆ.