Friday, 15th November 2024

OTD 1989: ಕ್ರಿಕೆಟ್ ದೇವರು ಸಚಿನ್‌ ಮೊದಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಇಂದಿಗೆ 35 ವರ್ಷ

ಬೆಂಗಳೂರು: ಕ್ರಿಕೆಟ್ ದೇವರು ಎಂದೇ ಖ್ಯಾತಿ ಗಳಿಸಿರುವ ಭಾರತ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್(Sachin Tendulkar) ಅವರು ಹಲವು ದಾಖಲೆಗಳ ಸರದಾರ ಎನಿಸಿಕೊಂಡಿರುವುದು ನಮಗೆಲ್ಲ ತಿಳಿದೇ ಇದೆ. ಇಂದಿಗೂ ಅವರು ಯುವ ಆಟಗಾರರಿಗೆ ಸ್ಫೂತಿಯಾಗಿದ್ದಾರೆ. ಶತಕಕಗಳ ಶತಕ ಬಾರಿಸಿರುವ ಸಚಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿಮೊದಲ ಪಂದ್ಯವನ್ನಾಡಿದ ದಿನವಿದು(OTD 1989). 1989 ನ.15 ರಂದು ಕರಾಚಿಯಲ್ಲಿ ನಡೆದಿದ್ದ ಪಾಕಿಸ್ತಾನ(Sachin debut against Pakistan) ವಿರುದ್ಧದ ಟೆಸ್ಟ್‌ ಪಂದ್ಯವನ್ನಾಡುವ ಮೂಲಕ ಸಚಿನ್‌ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆಗ ಅವರಿಗೆ ಕೇವಲ 15 ವರ್ಷವಾಗಿತ್ತು. ಸಚಿನ್‌ ಪದಾರ್ಪಣ ಪಂದ್ಯಕ್ಕೆ ಇಂದಿಗೆ 35 ವರ್ಷಗಳ ಸಂಭ್ರಮ. ಈ ಸ್ಮರಣೀಯ ದಿನವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಸಚಿನ್​ ಅವರ ಅಂದಿನ ಫೊಟೋ ಹಂಚಿಕೊಂಡು ನೆನಪಿಸಿಕೊಂಡಿದೆ.

ಸಚಿನ್‌ ತಮ್ಮ ಚೊಚ್ಚಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 2 ಬೌಂಡರಿಗಳ ನೆರವಿನಿಂದ 15 ರನ್‌ ಬಾರಿಸಿ ವಕಾರ್ ಯೂನಿಸ್ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆಗಿದ್ದರು. ಆಗ ಸಚಿನ್‌ 6ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು. ಸ್ಯಾರಸ್ಯವೆಂದರೆ ಪಾಕ್‌ ವಿರುದ್ಧ ಟೆಸ್ಟ್‌ ಪದಾರ್ಪಣ ಪಂದ್ಯವನ್ನಾಡಿದ ಸಚಿನ್‌‌ ಚೊಚ್ಚಲ ಮತ್ತು ಕೊನೆಯ ಏಕದಿನ ಪಂದ್ಯವನ್ನಾಡಿದ್ದು ಕೂಡ ಪಾಕಿಸ್ತಾನ ವಿರುದ್ಧವೇ ಎನ್ನುವುದು ಕಾಕತಾಳಿಯ. ಸಚಿನ್‌ ತಮ್ಮ ವಿದಾಯ ಪಂದ್ಯವನ್ನಾಡಿದ್ದು 2013ರಲ್ಲಿ. ಮುಂಬೈಯಲ್ಲಿ ವಿಂಡೀಸ್‌ ವಿರುದ್ಧದ ಟೆಸ್ಟ್‌ ಪಂದ್ಯವನ್ನಾಡುವ ಮೂಲಕ.

17 ವರ್ಷದಲ್ಲಿ ಶತಕ

ಸಚಿನ್‌ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದು 17 ವರ್ಷವಿದ್ದಾಗ. 1990 ಆಗಸ್ಟ್ 14ರಂದು ಸಚಿನ್ ತೆಂಡೂಲ್ಕರ್ ಮೊದಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್(Old Trafford) ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಚಿನ್​ ಈ ಸಾಧನೆ ಮಾಡಿದ್ದರು. ಇದೇ ವೇಳೆ ಟೆಸ್ಟ್ ಮಾದರಿಯಲ್ಲಿ ಶತಕ ದಾಖಲಿಸಿದ ಮೂರನೇ-ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಅಂದು 189 ಎಸೆತ ಎದುರಿಸಿದ್ದ ಸಚಿನ್ ಅಜೇಯ 119 ರನ್ ಗಳಿಸಿದ್ದರು. 1989ರ ನವೆಂಬರ್​ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದ ಸಚಿನ್ ಎಂಟು ಟೆಸ್ಟ್ ಪಂದ್ಯಗಳ ಬಳಿಕ ಶತಕ ಬಾರಿಸಿದ್ದರು. ಓಲ್ಡ್ ಟ್ರಾಫರ್ಡ್ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್​ನಲ್ಲಿ ಸಚಿನ್​ ಈ ಶತಕದ ಆಟವಾಡಿದ್ದರು.

ಇದನ್ನೂ ಓದಿ Virat Kohli injured: ರಾಹುಲ್‌ ಬೆನ್ನಲ್ಲೇ ಕೊಹ್ಲಿಗೂ ಗಾಯ!

ಸಚಿನ್​ ಅವರು 24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.