Monday, 25th November 2024

P. T. Usha: ಪಿ.ಟಿ. ಉಷಾ ವಿರುದ್ಧ ಅವಿಶ್ವಾಸ ನಿರ್ಣಯ!

ನವದೆಹಲಿ: ಭಾರತೀಯ ಒಲಿಂಪಿಕ್ ಸಂಸ್ಥೆ(Indian Olympic Association)ಯ ಅಧ್ಯಕ್ಷೆ ಪಿ.ಟಿ. ಉಷಾ(P. T. Usha) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ನಡುವಿನ ಮುಸುಕಿನ ಗುದ್ದಾಟ ಈಗ ಮತ್ತೊಂದು ಹಂತ ತಲುಪಿದೆ. ಉಷಾ ವಿರುದ್ಧ ಅ.25ರಂದು ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವಿಶ್ವಾಸ ನಿರ್ಣಯ(no-confidence motion) ಮಂಡಿಸಲು ಸಮಿತಿ ಸದಸ್ಯರು ನಿರ್ಧರಿಸಿದ್ದಾರೆ.

ಪಿ.ಟಿ ಉಷಾ ಅವರು 2022,ಡಿಸೆಂಬರ್​ 10 ರಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದರೊಂದಿಗೆ ಐಒಎಯ 95 ವರ್ಷಗಳ ಇತಿಹಾಸದಲ್ಲಿ ಅಧ್ಯಕ್ಷ ಹುದ್ದೆ ವಹಿಸಿದ ಮೊದಲ ಒಲಿಂಪಿಯನ್‌ ಮತ್ತು ಅಂತಾರಾಷ್ಟ್ರೀಯ ಪದಕ ವಿಜೇತೆ ಎಂಬ ಗೌರವಕ್ಕೆ ಉಷಾ ಪಾತ್ರರಾಗಿದ್ದರು. ಸುಪ್ರೀಂ ಕೋರ್ಟ್ ನೇಮಿಸಿದ ನಿವೃತ್ತ ನ್ಯಾಯಾಧೀಶ ಎಲ್. ನಾಗೇಶ್ವರ ರಾವ್ ಮೇಲ್ವಿಚಾರಣೆಯಲ್ಲಿ ನಡೆದ ಚುನಾವಣೆಯಲ್ಲಿ ಉನ್ನತ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಇದೀಗ ಅವಿಶ್ವಾಸ ನಿರ್ಣಯ ಎದುರಿಸುತ್ತಿರುವ ಮೊದಲ ಮಹಿಳಾ ಅಧ್ಯಕ್ಷೆ ಎನಿಸಿಕೊಳ್ಳಲಿದ್ದಾರೆ.

ಈಗಾಗಲೇ ಕಾರ್ಯಕಾರಿ ಸಮಿತಿಯು ಸಭೆಯ 26 ಅಜೆಂಡಾಗಳಲ್ಲಿ ಅವಿಶ್ವಾಸ ನಿರ್ಣಯವನ್ನೂ ಸೇರಿಸಿದೆ. ಉಷಾ ಸಾಂವಿಧಾನಿಕ ನಿಮಯಗಳ ಉಲ್ಲಂಘಿಸುತ್ತಿದ್ದಾರೆ ಮತ್ತು ಭಾರತೀಯ ಕ್ರೀಡೆಗೆ ಹಾನಿಯುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಈ ಅಜೆಂಡಾವನ್ನು ಸೇರಿಸಲಾಗಿದೆ. ಹಲವು ದಿನಗಳಿಂದಲೂ ಸಮಿತಿ ಸದಸ್ಯರು ಹಾಗೂ ಉಷಾ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ. ಅಧ್ಯಕ್ಷರಾಗಿ ಆಯ್ಕೆಯಾದ ಆರಂಭದಿಂದಲೂ ಕೂಡ ಉಷಾ ಅವರು ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಲೇ ಬಂದಿದ್ದಾರೆ.

ರಿಯಲನ್ಸ್‌ ಇಂಡಸ್ಟ್ರೀಸ್ ಜತೆ ಮಾಡಿಕೊಂಡ ಪ್ರಾಯೋಜಕತ್ವ ಒಪ್ಪಂದದಿಂದ ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ)ಗೆ 24 ಕೋಟಿ ನಷ್ಟವಾಗಿದೆ ಎಂದು ಸಿಎಜಿ ವರದಿಯಲ್ಲಿ ಸಂಸ್ಥೆಯ ಖಜಾಂಚಿ ಸಹದೇವ್ ಯಾದವ್ ಇತ್ತೀಚೆಗೆ ಆರೋಪ ಮಾಡಿದ್ದರು. ಆದರೆ, ಈ ಆರೋಪವನ್ನು ಅಧ್ಯಕ್ಷೆ ಪಿ.ಟಿ.ಉಷಾ ತಳ್ಳಿಹಾಕಿದ್ದರು. ʼಇದು ತಮ್ಮ ವ್ಯಕ್ತಿತ್ವಕ್ಕೆ ಕಳಂಕ ತರಲು ರೂಪಿಸಿರುವ ಸಂಚು ಆಗಿದೆ. ತ‍ಪ್ಪುದಾರಿಗೆಳೆಯುವ ಇಂಥ ಮಾಹಿತಿ ನೀಡಿದ ಯಾರೇ ಆಗಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ’ ಉಷಾ ಹೇಳಿಕೆಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ Vinesh Phogat: ಪಿ.ಟಿ. ಉಷಾ ವಿರುದ್ಧ ಗಂಭೀರ ಆರೋಪ ಮಾಡಿದ ವಿನೇಶ್‌

ಅವಿಶ್ವಾಸ ನಿರ್ಣಯ ಮಂಡಿಸುವ ಸಮಿತಿ ನಿರ್ಧಾರ ವನ್ನು ಉಷಾ ವಿರೋಧಿಸಿದ್ದು, ಇದು ಕಾನೂನುಬಾಹಿರ ಹಾಗೂ ಅನಧಿಕೃತ ಎಂದಿದ್ದಾರೆ. ಸಂಸ್ಥೆಗೆ ರಘುರಾಮ್ ಅಯ್ಯರ್ ಸಿಎಒ ಆಗಿದ್ದಾರೆ. ಆ ಹುದ್ದೆಗೆ ಬೇರೆ ಯಾರನ್ನೂ ನೇಮಿಸಿಲ್ಲ. ಈಗ ಕಲ್ಯಾಣ್ ಚೌಬೆ ಸಿಎಒ ಎಂದು ಅವಿಶ್ವಾಸ ನಿರ್ಣಯದ ನೋಟಿಸ್ ನೀಡಿದ್ದ ಕಾನೂನುಬಾಹಿರ’ ಎಂದಿದ್ದಾರೆ.