ರಾವಲ್ಪಿಂಡಿ: ಸ್ವಿನ್‌ದ್ವಯರಾದ ಸಜಿದ್ ಖಾನ್ ಮತ್ತು ನೋಮನ್ ಅಲಿ ಅವರ ಮಾರಕ ದಾಳಿಯ ನೆರವಿನಿಂದ ಪಾಕಿಸ್ತಾನ ತಂಡವು(PAK vs ENG) ಪ್ರವಾಸಿ ಇಂಗ್ಲೆಂಡ್ ತಂಡ ವಿರುದ್ಧದ ಅಂತಿಮ ಹಾಗೂ ಮೂರನೇ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಅಂತರದ ಗೆಲುವು ಸಾಧಿಸಿ 2021 ರ ನಂತರ ತವರಿನಲ್ಲಿ ಮೊದಲ ಸರಣಿ ಗೆದ್ದ ಸಾಧನೆ ಮಾಡಿತು. ಜತೆಗೆ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಸೋತು ಸರಣಿ ಜಯಿಸಿದ್ದು 2ನೇ ಬಾರಿ. ಇದಕ್ಕೂ ಮುನ್ನ 1995 ರಲ್ಲಿ ಜಿಂಬಾಬ್ವೆ ವಿರುದ್ಧ ಮೊದಲ ಪಂದ್ಯ ಕಳೆದುಕೊಂಡು ಸರಣಿ ಜಯಿಸಿತ್ತು. 2015 ರ ನಂತರ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ ಒಲಿದ ಮೊದಲ ಟೆಸ್ಟ್ ಸರಣಿ ಗೆಲುವು ಇದಾಗಿದೆ.
ಇದು ನಾಯಕರಾಗಿ ಆಯ್ಕೆಯಾದ ಬಳಿಕ ಶಾನ್ ಮಸೂದ್ ಪಾಲಿಗೆ ಚೊಚ್ಚಲ ಸರಣಿ ಗೆಲುವಿನ ಸಂಭ್ರಮವಾಗಿದೆ. ಕಳೆದ ವರ್ಷ ಅವರು ಟೆಸ್ಟ್ ತಂಡದ ನಾಯಕರಾಗಿ ನೇಮಕಗೊಂಡ ಬಳಿಕ ಆಡಿದ 6 ಪಂದ್ಯಗಳಲ್ಲಿ ಪಾಕಿಸ್ಥಾನ ಸೋಲನ್ನು ಕಂಡಿತ್ತು. ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯ ಸಹಿತ ತವರಿನಲ್ಲಿ ಸತತ 11 ಪಂದ್ಯಗಳಲ್ಲಿ ಸೋತ ಬಳಿಕ ಇದು ಪಾಕ್‌ನ 2ನೇ ಗೆಲುವು ಆಗಿದೆ. ಮೊದಲ ಪಂದ್ಯದಲ್ಲಿ ಸೋಲು ಕಂಡ ಕಾರಣ ಪಾಕ್ ತನ್ನ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡಿತ್ತು. ಅನುಭವಿ ಬಾಬರ್ ಅಜಂ, ಶಾಹೀನ್ ಶಾ ಅಫ್ರೀದಿ ಅವರನ್ನು ಕೈಬಿಟ್ಟಿತ್ತು. ಈ ವೇಳೆ ಆಯ್ಕೆ ಸಮಿತಿ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ ಪಾಕ್ ಸರಣಿ ಗೆದ್ದು ಎಲ್ಲ ಟೀಕಾಕಾರರ ಬಾಯಿ ಮುಚ್ಚಿಸುವಂತೆ ಮಾಡಿದೆ.
ಇದನ್ನೂ ಓದಿ IND vs NZ 2nd Test: ಐತಿಹಾಸಿಕ ಸರಣಿ ಗೆದ್ದ ನ್ಯೂಜಿಲೆಂಡ್; ಭಾರತಕ್ಕೆ ತವರಿನಲ್ಲೇ ಮುಖಭಂಗ
ಮೊದಲ ಇನಿಂಗ್ಸ್ನಲ್ಲಿ 77 ರನ್ಗಳ ಮುನ್ನಡೆ ಪಡೆದಿದ್ದ ಪಾಕಿಸ್ತಾನ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 36 ರನ್ಗಳ ಗುರಿ ಪಡೆಯಿತು. ಈ ಗುರಿಯನ್ನು ಕೇವಲ 3.1 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಪಾಕಿಸ್ತಾನ್ ತಂಡವು 9 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು. ಪಾಕ್ ಪರ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ ಪಡೆದಿದ್ದ ಸಾಜಿದ್ ಖಾನ್ ದ್ವಿತೀಯ ಇನಿಂಗ್ಸ್ನಲ್ಲಿ 4 ವಿಕೆಟ್ ಕಬಳಿಸಿದರು. ಹಾಗೆಯೇ ಪ್ರಥಮ ಇನಿಂಗ್ಸ್ನಲ್ಲಿ 3 ವಿಕೆಟ್ ಕಬಳಿಸಿದ್ದ ನೊಮಾನ್ ಅಲಿ 2ನೇ ಇನಿಂಗ್ಸ್ನಲ್ಲಿ 6 ವಿಕೆಟ್ ಉರುಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 267 ರನ್ಗಳಿಸಿ ಆಲೌಟ್ ಆಯಿತು. ಪಾಕಿಸ್ತಾನ ಸೌದ್ ಶಕೀಲ್ (134) ಭರ್ಜರಿ ಶತಕ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 344 ರನ್ ಕಲೆಹಾಕಿತು. 77 ರನ್ ಮುನ್ನಡೆ ಸಾಧಿಸಿತು. ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಕೇವಲ 112ಗೆ ಸರ್ವಪತನ ಕಂಡಿತ್ತು.