Thursday, 12th December 2024

PAK vs ENG: ಆಂಗ್ಲರಿಗೆ ಸೋಲುಣಿಸಿದ ಪಾಕ್‌

ಮುಲ್ತಾನ್‌: ಇಂಗ್ಲೆಂಡ್‌(PAK vs ENG) ವಿರುದ್ಧದ ತವರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಹೀನಾಯವಾಗಿ ಸೋತು ಭಾರೀ ಟೀಕೆ ಎದುರಿಸಿದ್ದ ಪಾಕಿಸ್ತಾನ ದ್ವಿತೀಯ ಟೆಸ್ಟ್‌ನಲ್ಲಿ(Pakistan vs England 2nd Test) ತಿರುಗಿ ಬಿದ್ದಿದೆ. ಅಮೋಘ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಪ್ರದರ್ಶನ ತೋರುವ ಮೂಲಕ 152 ರನ್‌ಗಳಿಂದ ಗೆಲುವು ಸಾಧಿಸಿ ಸರಣಿಯಲ್ಲಿ ಹಿಡಿತ ಸಾಧಿಸಿದೆ. 261 ರನ್‌ಗಳ ಗೆಲುವಿನ ಗುರಿಯೊಂದಿಗೆ ನಾಲ್ಕನೇ ದಿನದಾಟದಲ್ಲಿ ಆಡಲಿಳಿದ ಇಂಗ್ಲೆಂಡ್‌ 144 ರನ್‌ಗೆ ಸರ್ವಪತಕ ಕಂಡು ಸೋಲಿಗೆ ತುತ್ತಾಯಿತು. ಪಾಕ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಬೌಲರ್‌ಗಳಾದ ಸಾಜಿದ್‌ ಮತ್ತು ನೋಮನ್‌. ಉಭಯ ಆಟಗಾರರು ಸೇರಿಕೊಂಡು ಒಟ್ಟು 20 ವಿಕೆಟ್‌ ಬೇಟೆಯಾಡಿದರು.

ಮಂಗಳವಾರ(ಅ.15) ಆರಂಭಗೊಂಡಿದ್ದ ಈ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಪಾಕಿಸ್ತಾನ 366 ರನ್‌ ಬಾರಿಸಿದರೆ, ಇಂಗ್ಲೆಂಡ್‌ 291 ರನ್‌ ಬಾರಿಸಿತು. ಮೊದಲ ಇನಿಂಗ್ಸ್‌ನಲ್ಲಿ ಪಾಕ್‌ ಪರ ಕಮ್ರಾನ್ ಗುಲಾಮ್(118) ರನ್‌ ಬಾರಿಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣವಾಗಿದ್ದರು. ಇಂಗ್ಲೆಂಡ್‌ ಪರ ಬೆನ್ ಡಕೆಟ್(114) ಶತಕ ಬಾರಿಸಿದ್ದರು. ಈ ಇನಿಂಗ್ಸ್‌ನಲ್ಲಿ ಪಾಕ್‌ ಸ್ಪಿನ್ನರ್‌ ಸಾಜಿದ್‌ ಖಾನ್‌ 7 ವಿಕೆಟ್‌ ಕಿತ್ತರೆ, ನೋಮನ್‌ ಅಲಿ 3 ವಿಕೆಟ್‌ ಉರುಳಿಸಿದ್ದರು.

ಇದನ್ನೂ ಓದಿ IND vs NZ: ಭಾರತ ತಂಡವನ್ನು ಗೇಲಿ ಮಾಡಿದ ಮೈಕಲ್‌ ವಾನ್‌

ದ್ವಿತೀಯ ಇನಿಂಗ್ಸ್‌ನಲ್ಲಿ ಆಘಾ ಸಲ್ಮಾನ್(63) ಬಾರಿಸಿದ ಅರ್ಧಶತಕದ ನೆರವಿನಿಂದ ಪಾಕ್‌ 221 ರನ್‌ ಬಾರಿಸಿ ಇಂಗ್ಲೆಂಡ್‌ಗೆ 297ರನ್‌ಗಳ ಗೆಲುವಿನ ಗುರಿ ನೀಡಿತ್ತು. ಎರಡುವರೆ ದಿನಗಳ ಆಟ ಬಾಕಿ ಇದ್ದ ಕಾರಣ ಇಂಗ್ಲೆಂಡ್‌ ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಎಲ್ಲ ನಿರೀಕ್ಷೆಯನ್ನು ಪಾಕ್‌ ಬೌಲರ್‌ಗಳಾದ ಸಾಜಿದ್‌ ಮತ್ತು ನೋಮನ್‌ ಹುಸಿಗೊಳಿಸಿದರು. ದ್ವಿತೀಯ ಇನಿಂಗ್ಸ್‌ನಲ್ಲಿ ನೋಮನ್‌ ಕೇವಲ 46 ರನ್‌ ವೆಚ್ಚದಲ್ಲಿ8 ವಿಕೆಟ್‌ ಕೆಡವಿದರೆ, ಸಾಜಿದ್‌ 2 ವಿಕೆಟ್‌ ಪಡೆದರು. ಮೊದಲ ಇನಿಂಗ್ಸ್‌ನ ಶತಕ ವೀರ ಡಕೆಟ್‌ ದ್ವಿತೀಯ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದರು. ನಂಬಿಕಸ್ಥ ಬ್ಯಾಟರ್‌ಗಳಾದ ಜೋ ರೂಟ್‌(18), ಗ್ಯಾರಿ ಬ್ರೂಕ್‌(16), ಜಾಕ್‌ ಕ್ರಾಲಿ(3) ಅಗ್ಗಕ್ಕೆ ವಿಕೆಟ್‌ ಕೈಚೆಲ್ಲಿದ್ದು ತಂಡದ ಸೋಲಿಗೆ ಪ್ರಮುಖ ಕಾರಣ. ನಾಯಕ ಬೆನ್‌ ಸ್ಟೋಕ್‌ ಬಾರಿಸಿದ 37 ರನ್‌ ತಂಡದ ಪರ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಮೊದಲ ಟೆಸ್ಟ್‌ ಪಂದ್ಯದಲ್ಲಿ ಪಾಕ್‌ ತಂಡ ಇನಿಂಗ್ಸ್‌ ಮತ್ತು 47 ರನ್‌ ಅಂತರದ ಸೋಲು ಕಂಡಿತ್ತು. ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ್ದ ಅನುಭವಿ ಆಟಗಾರರಾದ ಬಾಬರ್‌ ಅಜಂ ಮತ್ತು ವೇಗಿ ಶಾಹೀನ್ ಶಾ ಆಫ್ರಿದಿಯನ್ನು ದ್ವಿತೀಯ ಟೆಸ್ಟ್‌ನಿಂದ ಕೈಬಿಟ್ಟು ನೂತನ ಆಯ್ಕೆ ಸಮಿತಿ ಯುವ ಆಟಗಾರರಿಗೆ ಮಣೆ ಹಾಕಿತ್ತು. ಈ ಪ್ರಯೋಗ ಫ‌ಲಪ್ರದವಾಗಿದೆ. ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದೆ. ಮೂರನೇ ಹಾಗೂ ಅಂತಿಮ ಪಂದ್ಯ ಅಕ್ಟೋಬರ್‌ 24ರಿಂದ ಆರಂಭಗೊಳ್ಳಲಿದೆ.