Saturday, 23rd November 2024

Pakistan Cricket Board: ಪಾಕ್‌ ಆಯ್ಕೆ ಸಮಿತಿಗೆ ಮಾಜಿ ಅಂಪೈರ್‌ ಅಲೀಂ ದಾರ್ ಆಯ್ಕೆ

ಕರಾಚಿ: ಕಳೆದ ವರ್ಷ ಐಸಿಸಿ ಅಂಪೈರ್‌ ಪ್ಯಾನೆಲ್‌ಗೆ ವಿದಾಯ ಹೇಳಿದ್ದ ಪಾಕಿಸ್ತಾನದ ಅಲೀಂ ದಾರ್(Aleem Dar) ಅವರನ್ನು ಪಾಕ್‌ ಕ್ರಿಕೆಟ್‌ ಮಂಡಳಿ(Pakistan Cricket Board) ಪರಿಷ್ಕೃತ ಆಯ್ಕೆ ಸಮಿತಿಗೆ ಆಯ್ಕೆ ಮಾಡಿದೆ. ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ ಇನಿಂಗ್ಸ್‌ ಮತ್ತು 47ರನ್‌ಗಳ ಸೋಲು ಕಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ದಾಖಲೆ ದಾರ್​ ಹೆಸರಿನಲ್ಲಿದೆ. 144 ಟೆಸ್ಟ್, 222 ಏಕ ದಿನ ಹಾಗೂ 69 ಟಿ20 ಪಂದ್ಯಗಳಲ್ಲಿ ಅವರು ಅಂಪೈರ್​ ಆಗಿ ಕಾರ್ಯನಿರ್ವಹಿಸಿದ್ದಾರೆ. ಪುರುಷರ ಕ್ರಿಕೆಟ್‌ನಲ್ಲಿ ಒಟ್ಟು 435 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಎಲೈಟ್​ ಅಂಪೈರ್‌ ಆಗಿ ಅವರು 19 ವರ್ಷ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ IND vs AUS Test: ರೋಹಿತ್‌ ಗೈರು; ನಾಯಕತ್ವ ರೇಸ್‌ನಲ್ಲಿ ಕೊಹ್ಲಿ, ಪಂತ್‌

ಮಾಜಿ ಟೆಸ್ಟ್ ಆಟಗಾರರಾದ ಆಕೀಬ್ ಜಾವೇದ್ ಮತ್ತು ಅಜರ್ ಅಲಿ, ಪಾಕಿಸ್ತಾನದ ಸೂಪರ್ ಲೀಗ್‌ನಲ್ಲಿ ಫ್ರಾಂಚೈಸಿಯ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ ಪ್ರಸಿದ್ಧ ಕ್ರೀಡಾ ಪ್ರಸಾರಕ ವಿಶ್ಲೇಷಕ ಹಸನ್ ಚೀಮಾ ಅವರನ್ನೂ ಸಮಿತಿಯಲ್ಲಿ ಹೆಸರಿಸಲಾಗಿದೆ. ಪಿಸಿಬಿ ಕಳೆದ ವರ್ಷದಿಂದ ಎರಡು ವಿಭಿನ್ನ ಮಂಡಳಿಯ ಅಧ್ಯಕ್ಷರ ಅಡಿಯಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಹಲವಾರು ಬಾರಿ ಬದಲಾಯಿಸಿದೆ. ಆದರೂ ಕೂಡ ಪಾಕ್‌ ತಂಡದ ಪ್ರಗತಿ ಮಾತ್ರ ಶೂನ್ಯ. ತವರಿನಲ್ಲಿಯೇ ವೈಟ್‌ವಾಶ್‌ ಮುಖಭಂಗ ಎದುರಿಸುತ್ತಿದೆ. ನೂತನವಾಗಿ ಆಯ್ಕೆಯಾದ ಈ ಸಮಿತಿ ಕೂಡೆ ಎಷ್ಟು ದಿನದವರೆಗೆ ಎನ್ನುವುದು ಖಚಿತವಿಲ್ಲ. ಇಂಗ್ಲೆಂಡ್‌ ವಿರುದ್ಧ ಸರಣಿ ಸೋತರೆ ಮತ್ತೆ ನೂತನ ಸಮಿತಿ ಆಯ್ಕೆಯಾಗಬಹುದು. ಒಟ್ಟಾರೆ ಪಾಕ್‌ ಕ್ರಿಕೆಟ್‌ ಮಂಡಳಿ ಅತಂತ್ರವಾಗಿದೆ.

ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನ ಸೋಲು ಕಾಣುವ ಮೂಲಕ 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಮೊದಲ ಇನ್ನಿಂಗ್ಸ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ನಂತರವೂ ಇನ್ನಿಂಗ್ಸ್‌ ಸೋಲು ಎದುರಿಸಿದ ಮೊದಲ ತಂಡ ಎಂಬ ಕೆಟ್ಟ ದಾಖಲೆ ತನ್ನ ಹೆಸರಿಗೆ ಸೇರಿಸಿಕೊಂಡಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನ 556 ರನ್‌ ಬಾರಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್, ಆತಿಥೇಯ ತಂಡದ ಬೌಲರ್‌ಗಳನ್ನು ಚೆಂಡಾಡಿತು. ಜೋ ರೂಟ್ 375 ಎಸೆತಗಳಲ್ಲಿ 17 ಬೌಂಡರಿಗಳೊಂದಿಗೆ 262 ರನ್ ಚಚ್ಚಿದರೆ, ಹ್ಯಾರಿ ಬೂಕ್ 322 ಎಸೆತಗಳಲ್ಲಿ 29 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 317 ರನ್ ಸಿಡಿಸಿ ಔಟಾದರು. ಒಟ್ಟಾರೆ 150 ಓವರ್‌ಗಳಲ್ಲಿ 7 ವಿಕೆಟ್‌ಗೆ 823 ರನ್ ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿ ಮೊದಲ ಇನ್ನಿಂಗ್ಸ್‌ನಲ್ಲಿ 267 ರನ್ ಮುನ್ನಡೆ ಪಡೆಯಿತು. 2ನೇ ಇನ್ನಿಂಗ್ಸ್‌ನಲ್ಲಿ 4ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 152 ರನ್ ಗಳಿಸಿದ್ದ ಪಾಕಿಸ್ತಾನ ಅಂತಿಮ ದಿನವಾದ ಶುಕ್ರವಾರ 220 ರನ್‌ಗೆ ಸರ್ವಪತನ ಕಂಡು ತವರಿನಲ್ಲಿಯೇ ಭಾರೀ ಮುಖಭಂಗಕ್ಕೆ ಒಳಗಾಯಿತು.