Sunday, 24th November 2024

Pakistan Cricket: 4 ತಿಂಗಳಿನಿಂದ ವೇತನವಿಲ್ಲದೆ ಪಾಕ್‌ ಆಟಗಾರರ ಪರದಾಟ

Pakistan Cricket team

ಲಾಹೋರ್​: ಆರ್ಥಿಕವಾಗಿ ದಿವಾಳಿ ಅಂಚಿನಲ್ಲಿರುವ ಪಾಕಿಸ್ತಾನ ಆಡಳಿತಾತ್ಮಕ ವೆಚ್ಚಗಳನ್ನು ಕಡಿಮೆ ಮಾಡಲೆಂದು ಸರ್ಕಾರವು ಐಎಂಎಫ್‌ನೊಂದಿಗೆ ಮಾಡಿಕೊಂಡಿರುವ 7ಶತಕೋಟಿ ಡಾಲರ್‌ ಸಾಲದ ಒಪ್ಪಂದದ ಭಾಗವಾಗಿ ಸರಕಾರಿ ಹುದ್ದೆಗಳನ್ನು ಕಡಿತಗೊಳಿಸಿದೆ. ಅತ್ತ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯೂ (PCB) ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ. ಈ ಪರಿಣಾಮ ಕಳೆದ 4 ತಿಂಗಳಿನಿಂದ ತನ್ನ ರಾಷ್ಟ್ರೀಯ ತಂಡದ ಆಟಗಾರರಿಗೆ ವೇತನವನ್ನೇ ನೀಡಿಲ್ಲ ಎಂದು ವರದಿಯಾಗಿದೆ.

ಜುಲೈನಿಂದ ಅಕ್ಟೋಬರ್​ವರೆಗಿನ ವೇತನವನ್ನು ಪಿಸಿಬಿ ಆಟಗಾರರಿಗೆ ನೀಡಿಲ್ಲ ಹೀಗಾಗಿ ಪಾಕ್‌ ಆಟಗಾರರು ಪಿಸಿಬಿ ವಿರುದ್ಧ ಗರಂ ಆಗಿದ್ದಾರೆ ಎನ್ನಲಾಗಿದೆ. ವೇತನ ಸಿಗುವ ತನಕ ಆಡಿದ ಎಲ್ಲ ಸರಣಿಯಲ್ಲಿಯೂ ಕಳಪೆ ಪ್ರದರ್ಶನ ನೀಡುವುದಾಗಿ ಆಟಗಾರರು ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಪಾಕಿಸ್ತಾನ ಆಡಿದ ಎಲ್ಲ ಸರಣಿಯಲ್ಲಿಯೂ ಸೋಲು ಕಾಣುತ್ತಿರುವುದನ್ನು ನೋಡುವಾಗ ಇದು ಸತ್ಯ ಎನ್ನುವಂತಿದೆ. ಈ ನಡುವೆ ಬಾಬರ್​ ಅಜಂ​ ಸೀಮಿತ ಓವರ್​ ತಂಡದ ನಾಯಕತ್ವ ಕೂಡ ತ್ಯಜಿಸಿದ್ದಾರೆ.

ಇದನ್ನೂ ಓದಿ ಭದ್ರತಾ ವ್ಯವಸ್ಥೆಗೆ ಐಸಿಸಿ ತೃಪ್ತಿ; ಪಾಕ್‌ ನೆಲದಲ್ಲೇ ಚಾಂಪಿಯನ್ಸ್‌ ಟ್ರೋಫಿ

ಕರಾಚಿ ಹಾಗೂ ಲಾಹೋರ್‌ನಲ್ಲಿ ಈಗಾಗಲೇ ಇರುವ ಫ್ಲಡ್‌ಲೈಟ್‌ಗಳು ಹಳೆಯದಾಗಿವೆ. ಹೀಗಾಗಿ ಅಲ್ಲಿನ ಫ್ಲಡ್‌ಲೈಟ್‌ಗಳನ್ನು ಹಣ ಉಳಿತಾಯಕ್ಕಾಗಿ ಕ್ವೆಟ್ಟಾ ಹಾಗೂ ರಾವಲ್ಪಿಂಡಿ ಕ್ರೀಡಾಂಗಣಗಳಿಗೆ ಸ್ಥಳಾಂತರ ಮಾಡಿ, ಕರಾಚಿ ಹಾಗೂ ಲಾಹೋರ್‌ಗೆ ಬೇಕಾದ ಫ್ಲಡ್‌ಲೈಟ್‌ಗಳನ್ನು ಬಾಡಿಗೆಗೆ ಪಡೆಯಲು ಪಿಸಿಬಿ ಈಗಾಗಲೇ ಟೆಂಡರ್‌ ಕೂಡಾ ಆಹ್ವಾನಿಸಿದೆ ಎನ್ನಲಾಗಿದೆ.

ಮುಂದುನ ವರ್ಷ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದೆ. ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾಗೆ ಇರುವ ಕ್ರೇಜ್ ಮತ್ತು ಬೇಡಿಕೆ​ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿ ಲಾಭವಾಗಲಿದೆ .

ಸದ್ಯದ ಮಾಹಿತಿ ಪ್ರಕಾರ ಈ ಕೂಟದಲ್ಲಿ ಭಾರತೀಯ ತಂಡ ಭಾಗವಹಿಸುವ ಸಾಧ್ಯತೆಯಿದೆ ಮತ್ತು ಭಾರತ ಆಡುವ ಎಲ್ಲ ಪಂದ್ಯಗಳು ಲಾಹೋರ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಒಂದು ವೇಳೆ ಭಾರತ ಸರಕಾರ ಭಾರತೀಯ ತಂಡವನ್ನು ಪಾಕಿಸ್ಥಾನಕ್ಕೆ ಕಳುಹಿಸಲು ಅವಕಾಶ ನೀಡದಿದ್ದರೆ ಏನು ಮಾಡಬಹುದು ಎನ್ನುವುದು ತಿಳಿದುಬಂದಿಲ್ಲ.

ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಿಗೆ ಮಾಡಲಾದ ವ್ಯವಸ್ಥೆಗಳ ಬಗ್ಗೆ ಮತ್ತು ಭದ್ರತಾ ಕ್ರಮಗಳ ಬಗ್ಗೆ ಐಸಿಸಿ ನಿಯೋಗವು ತೃಪ್ತಿ ವ್ಯಕ್ತಪಡಿಸಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ವಿಶ್ವ ದರ್ಜೆಯ ವ್ಯವಸ್ಥೆಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ.