Thursday, 12th December 2024

ಕಳಪೆ ಪ್ರದರ್ಶನ: ಪಾಕಿಸ್ತಾನ ಆಟಗಾರರ ವಾರ್ಷಿಕ ಸಂಭಾವನೆಗೂ ಕತ್ತರಿ…!

ಸ್ಲಾಮಾಬಾದ್‌: ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರುವ ಮೂಲಕ ಟೂರ್ನಿಯಿಂದ ಹೊರಬಿದ್ದು ಆಘಾತ ಕಂಡಿರುವ ಪಾಕಿಸ್ತಾನ ಆಟಗಾರರ ವಾರ್ಷಿಕ ಸಂಭಾವನೆಯಲ್ಲಿ ಕಡಿತ ಮಾಡಲು ಪಾಕ್​ ಕ್ರಿಕೆಟ್​ ಮಂಡಳಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಮೂರು ಪಂದ್ಯಗಳನ್ನು ಆಡಿರುವ ಪಾಕಿಸ್ತಾನವು ಅಮೆರಿಕ ಹಾಗೂ ಭಾರತದ ವಿರುದ್ಧ ಹೀನಾಯವಾಗಿ ಸೋಲನುಭವಿಸಿದೆ. ಕೆನಡಾ ವಿರುದ್ಧ ಮಾತ್ರ ಗೆದ್ದಿರುವ ಕಾರಣ 2 ಪಾಯಿಂಟ್‌ಗಳನ್ನು ಪಡೆದಿದೆ. ಅಮೆರಿಕ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯವು ಮಳೆಯಿಂದ ರದ್ದಾದ ಕಾರಣ ಅಮೆರಿಕದ ಅಂಕ 5ಕ್ಕೆ ಏರಿಕೆಯಾಯಿತು. ಟೂರ್ನಿಯಿಂದ ಹೊರಬಿದ್ದ ಪಾಕ್​ ತಂಡದ ವಿರುದ್ಧ ಮಾಜಿ ಆಟಗಾರರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ. ಈ ರೀತಿ ಪ್ರದರ್ಶನ ತೋರುದಕ್ಕಿಂತ ಟೂರ್ನಿಯಲ್ಲಿ ಪಾಲ್ಗೊಳ್ಳದೇ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

ವರದಿಗಳ ಪ್ರಕಾರ ಮಾಜಿ ಆಟಗಾರರು ಹಾಗೂ ಪಿಸಿಬಿ ಸದಸ್ಯರು ಆಟಗಾರರ ಸಂಬಳ ಕಡಿತಗೊಳಿಸಲು ಪಾಕ್​ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಮೊಹ್ಸಿನ್​ ನಖ್ವಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ವೇತನ ಮಾತ್ರವಲ್ಲದೆ ನಿರಾಕ್ಷೇಪಣಾ ಪ್ರಮಾಣಪತ್ರ ನಿಯಮವನ್ನು ಜಾರಿಗೆ ತೆರಲಿದೆ ಎಂದು ತಿಳಿದುಬಂದಿದೆ. ಈ ನಿಯಮದ ಪ್ರಕಾರ ದೇಶಿ ಕ್ರಿಕೆಟ್‌ ಹಾಗೂ ಕೇಂದ್ರೀಯ ಗುತ್ತಿಗೆಗೆ ಸಹಿ ಮಾಡಿರುವ ಎಲ್ಲ ಪಾಕ್​ ಆಟಗಾರರು ವರ್ಷವೊಂದರಲ್ಲಿ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಹೊರತು ಪಡಿಸಿ, ವಿದೇಶಗಳಲ್ಲಿ ನಡೆಯುವ ಎರಡು ಟಿ20 ಲೀಗ್‌ಗಳಲ್ಲಿ ಮಾತ್ರ ಭಾಗವಹಿಸಬಹುದಾಗಿದೆ.

ನಿರಾಸದಾಯಕ ಪ್ರದರ್ಶನ ತೋರಿರುವ ಪಾಕಿಸ್ತಾನ ತಂಡದ ವಿರುದ್ಧ ಪಾಕ್‌ನ ಗುಜ್ರಾನ್ವಾಲಾ ನಗರದ ವಕೀಲರೊಬ್ಬರು ದೇಶದ್ರೋಹ ಕೇಸ್‌ ದಾಖಲಿಸಿದ್ದಾರೆ. ಪಾಕ್‌ ತಂಡದ ಕಳಪೆ ಪ್ರದರ್ಶನದಿಂದ ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಉಂಟಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅರ್ಜಿದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಗಿ ವರದಿಯಾಗಿದೆ.