ವಾರದ ತಾರೆ : ರಿಷಭ್ ಪಂತ್
ಲೇಖನ: ವಿರಾಜ್ ಕೆ.ಅಣಜಿ
‘ಗಾಯಗೊಂಡಿದ್ದು ಭಾರತದ ಆಟಗಾರರಷ್ಟೇ. ಆದರೆ, ಊನವಾಗಿದ್ದು ಮಾತ್ರ ಆಸ್ಟ್ರೇಲಿಯ ಕ್ರಿಕೆಟಿಗ ರಿಗಿದ್ದ ದಿಮಾಕು. ಇದಕ್ಕೆ ಕಾರಣ ರಿಷಭ್ ಪಂತ್, ವೆಲ್ಡನ್ ಚಾಂಪ್’ ಇದು ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರು ಭಾರತ-ಆಸ್ಟ್ರೇಲಿಯಾ
ಸರಣಿಯನ್ನು ಗೆದ್ದ ಬಳಿಕ ಮಾಡಿದ್ದ ಟ್ವೀಟ್.
ವರ್ಷದ ಕ್ರಿಕೆಟಿಗ ಪ್ರಶಸ್ತಿ ನೀಡುವಂತೆ, ಇದೇ ಫೆಬ್ರವರಿಯಿಂದ ಪ್ರತಿ ತಿಂಗಳು ಪ್ಲೇಯರ್ ಆಫ್ ದ ಮಂತ್ ಗೌರವ ನೀಡಲು ಐಸಿಸಿ ಆರಂಭಿಸಿದೆ. ಇದಕ್ಕೆ ಐಸಿಸಿ ಸ್ವತಃ ಪಂತ್ ಅವರನ್ನು ನಾಮಿನೇಟ್ ಮಾಡಿತು. ಆಸೀಸ್ ನೆಲದಲ್ಲಿ ಐತಿಹಾಸಿಕ ಸರಣಿ ಗೆಲ್ಲಲು ಬಹುದೊಡ್ಡ ಕೊಡುಗೆ ನೀಡಿದ ಪಂತ್ ಬಹುಮತ ಪಡೆದು ಚೊಚ್ಚಲ ಪ್ಲೇಯರ್ ಆಫ್ ದಿ ಮಂತ್ ಗೌರವಕ್ಕೂ ಭಾಜನರಾದರು.
ಆಸೀಸ್ ಸರಣಿ ಮುಗಿದ ನಂತರ ಐಸಿಸಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಕವರ್ ಪೇಜ್ನಲ್ಲಿ ಸ್ಪೈಡರ್ ಮ್ಯಾನ್ ರೀತಿ ಪಂತ್ ಫೋಟೋ ಹಾಕಿ, ವಾಟ್ ನಾಟ್ ಹೀ ಕ್ಯಾನ್ ಡೂ ಎಂದು ಅಪರೂಪದ ಗೌರವ ನೀಡಿತ್ತು. ಆಸೀಸ್ ಸರಣಿ ಗೆದ್ದ ನಂತರ, ಗಬ್ಬಾ ಸ್ಟೇಡಿಯಂನಲ್ಲಿ ಪಂತ್ ಭಾರತದ ಧ್ವಜ ಹಿಡಿದು ಹೆಜ್ಜೆ ಹಾಕಿದಾಗ ಭಾರತೀಯರು ಹುಚ್ಚೆದ್ದು ಕುಣಿದಿದ್ದು ಸುಲಭದಲ್ಲಿ
ಮರೆಯಲಾಗದು.
ಸದ್ಯ ಪಂತ್ ಜನಪ್ರಿಯತೆ, ಹಿರೋಯಿಸಂ ಅನುಭವಿಸುತ್ತಿದ್ದಾರೆ. ಆದರೆ, ಪಂತ್ ಹಿಂದಿನ ಕತೆ? ಅದು 2017ರ ಸಮಯ. ತನ್ನ ಆರಂಭಿಕ ತ್ಯಾಗ, ಕಷ್ಟದ ದಿನಗಳ ನಂತರ ನಿಧಾನವಾಗಿ ಭಾರತೀಯ ಕ್ರಿಕೆಟ್ ಲೋಕದಲ್ಲಿ ಸದ್ದು ಮಾಡಲು ಆರಂಭಿಸಿದ್ದ ಪಂತ್ಗೆ ಜೀವನ ಒಂದು ದೊಡ್ಡ ಗುದ್ದು ನೀಡಿತ್ತು. ವಿರಾಟ್ ಕೊಹ್ಲಿ ಮತ್ತವರ ತಂದೆ ನಿಧನದ ಎಲ್ಲರಿಗೂ ಗೊತ್ತಿರುವುದೆ.
ಆದರೆ, ಪಂತ್ ಅವರ ಜೀವನದಲ್ಲೂ ಇಂತಹದ್ದೇ ಕಹಿ ಘಟನೆ ನಡೆದಿದೆ ಎಂಬುದು ತಿಳಿದವರು ವಿರಳ.
ಪಂತ್ ಕ್ರಿಕೆಟ್ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದ ತಂದೆ, ಒಮ್ಮೆ ಇದ್ದಕ್ಕಿದ್ದಂತೆ ಎದೆ ಹಿಡಿದು ಕುಸಿದು ಬಿದ್ದವರು ಮತ್ತೆ ಮೇಲೇಳ ಲಿಲ್ಲ. ಅತ್ಯಂತ ಭಾವುಕ ಮನಸ್ಸಿನ, ಇಪ್ಪತ್ತರ ಹರೆಯದ ಪಂತ್ ಹೃದಯ ತಂದೆ ನಿಧನರಾದ ಸುದ್ದಿ ಕೇಳಿ ವಿಲವಿಲ ಒದ್ದಾಡಿತ್ತು. ಆಗ ಐಪಿಎಲ್ ನಡೆಯುತ್ತಿದ್ದ ಸಮಯ, ತಂದೆ ನಿಧನರಾಗಿದ್ದಾರೆ. ತಾಯಿ ಆರೋಗ್ಯವೂ ಸರಿಯಿಲ್ಲ. ಇಂತಹ ಸಂದರ್ಭದಲ್ಲಿ ತಾನೇನು ಮಾಡಬೇಕು ಎಂಬ ಜಿಜ್ಞಾಸೆ ಪಂತ್ಗೆ ಕಾಡಿತ್ತು.
ರಾತ್ರಿಯಿಡೀ ಕೂತು ಅತ್ತು, ತನ್ನನ್ನು ಸಮಾಧಾನಿಸಿಕೊಂಡಿದ್ದರು. ಹೇಗೆ ಸಚಿನ್, ಕೊಹ್ಲಿಯಂತಹ ದಿಗ್ಗಜರು ತಮ್ಮ ಜೀವನ ದಲ್ಲಾದ ಇಂತಹದ್ದೇ ನೋವನ್ನು ನುಂಗಿ ಸಾಧನೆ ಮಾಡಿದ್ದರೋ, ಹಾಗೇ ತಾನೂ ಸಾಧಿಸಬೇಕು, ಅದರ ಮೂಲಕ ತನ್ನ ಹೆತ್ತ ಜೀವಗಳಿಗೆ ಗೌರವ ತೋರಿಸಬೇಕು ಎಂದು ‘ಲಿಟಲ್ ರಿಷಭ್ ಪಂತ್’ ನಿರ್ಧರಿಸಿ, ನಂತರ ದೆಹಲಿಯಿಂದ ಬೆಂಗಳೂರಿಗೆ ಬಂದು ಇಳಿದಿದ್ದರು. ತಂಡಕ್ಕಾಗಿ ತನ್ನ ಜವಾಬ್ದಾರಿ ನಿರ್ವಹಿಸುವ ‘ದೊಡ್ಡತನ’ ತೋರಿದ್ದರು.
ಉತ್ತರಾಖಂಡದ ರೋರ್ಕೆ ಎಂಬಲ್ಲಿ ಸಾಧಾರಣ ಕುಟುಂಬದಲ್ಲಿ ಪಂತ್ ಜನಿಸಿದರು. ಬಾಲ್ಯದಿಂದಲೇ ಕ್ರಿಕೆಟ್ ಹುಚ್ಚಿತ್ತು. ಆಡಮ್ ಗಿಲ್ಕ್ರಿಸ್ಟ್ರನ್ನು ಆರಾಧ್ಯದೈವದಂತೆ ಕಂಡರು. ಆದರೆ, ಪಂತ್ ಊರಿನಲ್ಲಿ ಕ್ರಿಕೆಟ್ ಕಲಿಯಲು ಬೇಕಾದ ಯಾವ
ಸೌಕರ್ಯಗಳೂ ಇರಲಿಲ್ಲ. ಅದಕ್ಕಾಗಿ ತನ್ನ ತಾಯಿಯೊಂದಿಗೆ ಪ್ರತಿ ವಾರಾಂತ್ಯ 200 ಕಿಮೀ ದೂರದ ದೆಹಲಿಗೆ ಪಂತ್ ಬರು ತ್ತಿದ್ದರು. ಅಲ್ಲಿನ ಸೋನೆಟ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂತ್ ಕ್ರಿಕೆಟ್ ಅಭ್ಯಾಸ ನಡೆಯುತ್ತಿತ್ತು. ಲಾಡ್ಜ್ ಬಾಡಿಗೆ ನೀಡುವಷ್ಟು
ಹಣವಿರದ ಕಾರಣ, ಅಭ್ಯಾಸದ ಬಳಿಕ ಸಮೀಪದಲ್ಲಿದ್ದ ಗುರುದ್ವಾರದಲ್ಲಿ ತಾಯಿ-ಮಗ ರಾತ್ರಿ ದೂಡುತ್ತಿದ್ದರು.
ಮತ್ತೆ ಭಾನುವಾರ ಬೆಳಗ್ಗೆಯಿಂದಲೇ ಅಭ್ಯಾಸ ಮಾಡಿ, ಸಂಜೆ ತನಕ ಸ್ಟೇಡಿಯಂನಲ್ಲಿ ಬೆವರು ಬಸಿದು ತನ್ನೂರಿಗೆ ಹಿಂತಿರುಗು ತ್ತಿದ್ದರು. ಸೋಮವಾರದಿಂದ ಶಾಲೆ, ಸಂಜೆ ಬಂದ ನಂತರ ಮತ್ತೆ ಕ್ರಿಕೆಟ್ ಅಭ್ಯಾಸ, ಶುಕ್ರವಾರ ರಾತ್ರಿ ಮತ್ತೆ ದೆಹಲಿಗೆ ಪ್ರಯಾಣ. ಇದು ಕ್ರಿಕೆಟ್ಗಾಗಿ ತನ್ನ 12ನೇ ವಯಸ್ಸಿನಿಂದಲೇ ಸವೆಸಿದ ಹಾದಿ, ದೊಡ್ಡ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಬೇಕು ಎಂಬ ಕನಸನ್ನು ಬೆನ್ನತ್ತಿ ಪಂತ್ ನಡೆದಿದ್ದ ದಾರಿ.
ರಾಜಸ್ತಾನದ ಪರವಾಗಿ ಆಡಲು ಅವಕಾಶವಿದ್ದರೂ ಅದಕ್ಕೆ ಪಂತ್ ಮನಸ್ಸು ಮಾಡುತ್ತಿರಲಿಲ್ಲ. ತನ್ನ ಅಭ್ಯಾಸಕ್ಕೆ ಅವಕಾಶ ನೀಡುತ್ತಿರುವ ದೆಹಲಿ ಪರ ಆಡುವ ಅಭಿಲಾಷೆ. ಅದರಂತೆ ಅಂಡರ್-19 ಮತ್ತು ರಣಜಿಯಲ್ಲಿ ಪಂತ್ ದೆಹಲಿ ಪರ ಆಡಿದ್ದರು.
ಐಪಿಎಲ್ನಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ತಂಡದ ಮುಖ್ಯಆಟಗಾರನೂ ಹೌದು. ಆದರೂ ಪಂತ್ಗೆ ಕ್ರಿಕೆಟ್ ಬಗ್ಗೆ ಗಂಭೀರತೆ ಇಲ್ಲ. ಮಹೇಂದ್ರ ಸಿಂಗ್ ಧೋನಿಯ ಎಡಬಲಕ್ಕೂ ಸಮನಾಗದ ಎಳಸು, ಬ್ಯಾಟಿಂಗ್ ಕೂಡ ನಂಬಂಗಿಲ್ಲ, ಕೀಪಿಂಗ್ ಮಾಡುವಾಗ ಕ್ಯಾಚ್ ಹಿಡಿತಾನೆ ಅಂತ ನಂಬೋಂಗಿಲ್ಲ..ಹೀಗೆ ಇನ್ನೂ ಏನೇನೋ ಮಾತಿನ ಬಾಣಗಳು ರಿಷಭ್ ಪಂತ್ ಬೆನ್ನಿಗೆ ಬೀಳಲು ಆರಂಭ ವಾಗಿದ್ದವು.
ಅದೆಲ್ಲವನ್ನೂ ನಿವಾಳಿಸಿ ಬಿಸಾಕುವಂತೆ, ದಿಗ್ಗಜ ಆಟಗಾರರ ಅನುಪಸ್ಥಿತಿಯಲ್ಲಿ ಆಸೀಸ್ ನೆಲದಲ್ಲೇ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವಲ್ಲಿ ಪಂತ್ ಪಾತ್ರ ದೊಡ್ಡದು. ಹೀಯಾಳಿಸಿದ್ದವರೇ ಈಗ ಹೆಗಲ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಅನುಮಾನ-ಸನ್ಮಾನ ಎರಡನ್ನೂ ಕಂಡಿರುವ ಪಂತ್, ಭಾರತ ಕ್ರಿಕೆಟ್ ತಂಡದ ಮತ್ತೊಬ್ಬ ಬೆಸ್ಟ್ ವಿಕೆಟ್ ಕೀಪರ್ ಆಗಲಿ.