Thursday, 19th September 2024

ದಾಖಲೆಯ ಶತಕದೊಂದಿಗೆ ಮೆರೆದ ಪಂ‌ತ್‌, ಭಾರತಕ್ಕೆ 89 ರನ್ ಮುನ್ನಡೆ

ಅಹಮದಾಬಾದ್: ವಿಕೆಟ್ ಕೀಪರ್- ಸ್ಫೋಟಕ ಬ್ಯಾಟ್ಸ್‌ಮನ್ ರಿಷಭ್ ಪಂತ್ (101ರನ್) ಭರ್ಜರಿ ಶತಕದಾಟ ಹಾಗೂ ವಾಷಿಂಗ್ಟನ್ ಸುಂದರ್ (60 ಅಜೇಯ) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 89 ರನ್ ಮುನ್ನಡೆ ಸಾಧಿಸಿತು.

ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 1 ವಿಕೆಟ್‌ಗೆ 24 ರನ್‌ಗಳಿಂದ ಎರಡನೇ ದಿನದಾಟ ಆರಂಭಿಸಿದ ಭಾರತ ತಂಡ, ಶುಕ್ರವಾರದ ದಿನದಾಟ ಅಂತ್ಯಕ್ಕೆ 7 ವಿಕೆಟ್‌ಗೆ 294 ರನ್ ಪೇರಿಸಿದೆ. ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ 205 ರನ್‌ಗಳಿಸಿತ್ತು.

8 ರನ್‌ಗಳಿಂದ ರೋಹಿತ್ ಶರ್ಮ ಹಾಗೂ 15 ರನ್‌ಗಳಿಂದ ದಿನದಾಟ ಆರಂಭಿಸಿದ ಚೇತೇಶ್ವರ ಪೂಜಾರ ಜೋಡಿ ಉತ್ತಮ ಆರಂಭಗಳಿಸಲು ವಿಫಲವಾಯಿತು. ಹಿಂದಿನ ದಿನದ ಮೊತ್ತಕ್ಕೆ 16 ರನ್ ಪೇರಿಸಿ, 2ನೇ ವಿಕೆಟ್‌ಗೆ 40 ರನ್ ಜತೆಯಾಟವಾಡಿದ ಬೇರ್ಪಟ್ಟಿತು.

ಜಾಕ್ ಲೀಚ್ ಎಸೆತದಲ್ಲಿ ಪೂಜಾರ ಎಲ್ ಬಿ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಕೂಡ ರನ್ ಖಾತೆ ತೆರೆಯುವ ಮುನ್ನವೇ ಸ್ಟೋಕ್ಸ್ ಎಸೆತದಲ್ಲಿ ವಿಕೆಟ್ ನೀಡಿದರು. ಅಜಿಂಕ್ಯ ರಹಾನೆ (27) ವೈಫಲ್ಯ ಮುಂದುವರಿಸಿದರು.

ರಹಾನೆ ನಿರ್ಗಮನದ ಬಳಿಕ ಕ್ರೀಸ್‌ಗಿಳಿದ ರಿಷಭ್ ಪಂತ್ ಬಿರುಸಿನ ಬ್ಯಾಟಿಂಗ್ ಮೂಲಕವೇ ಗಮನ ಸೆಳೆದರು. 5ನೇ ವಿಕೆಟ್‌ಗೆ ರೋಹಿತ್ ಶರ್ಮ ಜತೆಗೂಡಿ 41 ರನ್, 6ನೇ ವಿಕೆಟ್‌ಗೆ ಆರ್.ಅಶ್ವಿನ್ 25 ರನ್ ಪೇರಿಸಿ ಹೊರನಡೆದರು. 146 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡ ಭಾರತ ತಂಡ ಇನಿಂಗ್ಸ್ ಭೀತಿ ಎದುರಿಸಿತು. ಈ ವೇಳೆ ಪಂತ್ ಜತೆಯಾದ ವಾಷಿಂಗ್ಟನ್ ಸುಂದರ್ 7ನೇ ವಿಕೆಟ್‌ಗೆ 113 ರನ್ ಕಲೆಹಾಕಿದರು. ಈ ವೇಳೆಗೆ ಭಾರತಕ್ಕೆ ಸ್ಪಷ್ಟ ಮೇಲುಗೈ ತಂದುಕೊಟ್ಟರು. ಸುಂದರ್ ಜತೆಗೆ 11ರನ್‌ಗಳಿಸಿರುವ ಅಕ್ಷರ್ ಪಟೇಲ್ ಕ್ರೀಸ್‌ನಲ್ಲಿದ್ದಾರೆ.

ಇಂಗ್ಲೆಂಡ್: 205, ಭಾರತ : 7 ವಿಕೆಟ್‌ಗೆ 294 (ರೋಹಿತ್ ಶರ್ಮ 49, ಪೂಜಾರ 17, ವಿರಾಟ್ ಕೊಹ್ಲಿ 0, ಅಜಿಂಕ್ಯ ರಹಾನೆ 27, ರಿಷಭ್ ಪಂತ್ 101, ಆರ್.ಅಶ್ವಿನ್ 13, ವಾಷಿಂಗ್ಟನ್ ಸುಂದರ್ 60*, ಅಕ್ಷರ್ ಪಟೇಲ್ 11*, ಜೇಮ್ಸ್ ಆಂಡರ್‌ಸನ್ 40ಕ್ಕೆ 3, ಬೆನ್ ಸ್ಟೋಕ್ಸ್ 73ಕ್ಕೆ 2, ಜಾಕ್ ಲೀಚ್ 66ಕ್ಕೆ 2).