Wednesday, 11th December 2024

Paralympics 2024: ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ 7 ತಿಂಗಳ ಗರ್ಭಿಣಿ

Paralympics 2024

ಪ್ಯಾರಿಸ್‌: ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ(Paralympics 2024) ಈಜಿಪ್ಟಿನ ಕತ್ತಿವರಸೆ ಪಟು ನದಾ ಹಫೀಜ್‌ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಸುದ್ದಿಯಾಗಿದ್ದರು. ಇದೀಗ ಪ್ಯಾರಾಲಿಂಪಿಕ್ಸ್‌ನಲ್ಲಿ ಗ್ರೇಟ್ ಬ್ರಿಟನ್‌ನ ಬಿಲ್ಗಾರ್ತಿ ಜೋಡಿ ಗ್ರಿನ್‌ಹ್ಯಾಮ್(Jodie Grinham) ಅವರು ಮಹಿಳೆಯರ ವೈಯಕ್ತಿಕ ಕಾಂಪೌಂಡ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. 7 ತಿಂಗಳ ಗರ್ಭಿಣಿಯಾಗಿರುವ ಗ್ರಿನ್‌ಹ್ಯಾಮ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಗರ್ಭಿಣಿ ಸ್ಪರ್ಧಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಕಂಚಿನ ಪದಕ ಸ್ಪರ್ಧೆಯಲ್ಲಿ 31 ವರ್ಷದ ಗ್ರಿನ್‌ಹ್ಯಾಮ್ ತನ್ನದೇ ದೇಶದವರಾದ, ಕಳೆದ ಟೋಕಿಯೊ ಒಲಿಂಪಿಕ್ಸ್‌ ಚಿನ್ನಪದ ಪದಕ ವಿಜೇತೆ ಪ್ಯಾಟರ್ಸನ್ ಪೈನ್ ವಿರುದ್ಧ 142-141 ಅಂಕದಿಂದ ಗೆದ್ದು ಪದಕಕ್ಕೆ ಕೊರಳೊಡ್ಡಿದರು.  ಗ್ರಿನ್‌ಹ್ಯಾಮ್ ಎಡಗೈ ಅಂಗವೈಕಲ್ಯ ಹೊಂದಿದ್ದಾರೆ.  ಗ್ರಿನ್‌ಹ್ಯಾಮ್ ಅವರು ಮಿಕ್ಸೆಡ್‌ ಆರ್ಚರಿ ಸ್ಪರ್ಧೆಯಲ್ಲಿಯೂ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು ಈ ಪಂದ್ಯ ಇಂದು ನಡೆಯಲಿದೆ. ಇಲ್ಲಿಯೂ ಗೆಲುವಿನ ವಿಶ್ವಾಸದಲ್ಲಿದ್ದಾರೆ.

2016ರಲ್ಲಿ ರಿಯೋ ಮೂಲಕ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ್ದ ಗ್ರಿನ್‌ಹ್ಯಾಮ್, 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಗೆಲುವಿನ ಬಳಿಕ ಮಾತನಾಡಿದ ಗ್ರಿನ್‌ಹ್ಯಾಮ್, ಈ ಬಾರಿ ಪದಕದೊಂದಿಗೆ ಪುಟಾಣಿ ಒಲಿಂಪಿಯನ್‌ ಅನ್ನು ಕೂಡ ಹೊತ್ತೂಯ್ಯುತ್ತಿದ್ದೇನೆ ಎಂದು ಹೇಳಿದರು.

https://x.com/worldarchery/status/1830145440907416031

ಫೈನಲ್‌ ಪ್ರವೇಶಿಸಿದ ತುಳಸಿಮತಿ ಮುರುಗೇಶನ್‌

ಸೋಮವಾರ ಬೆಳಗ್ಗೆ ನಡೆದ ಮಹಿಳೆಯರ ಎಸ್‌ಯು5 ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ತುಳಸಿಮತಿ ಮುರುಗೇಶನ್‌ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಬೆಳ್ಳಿ ಅಥವಾ ಚಿನ್ನದ ಪದಕವೊಂದನ್ನು ಖಾತ್ರಿ ಪಡಿಸಿದ್ದಾರೆ. ಜತೆಗೆ ಭಾರತಕ್ಕೆ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ 9ನೇ ಪದಕವೊಂದು ಖಾತರಿಯಾಗಿದೆ. ಈಗಾಗಲೇ ಭಾರತ ೮ ಪದಕ ಜಯಿಸಿ ಸದ್ಯ ಪದಕಪಟ್ಟಿಯಲ್ಲಿ 30ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ತುಳಸಿಮತಿ ಸೆಮಿಫೈನಲ್‌ನಲ್ಲಿ ಭಾರತದವರೇ ಆದ ಮನೀಷಾ ರಾಮದಾಸ್‌ ವಿರುದ್ಧ ತುಳಸಿಮತಿ 23-21, 21-17 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ಸೋಲು ಕಂಡ ಮನೀಷಾ ಇನ್ನು ಕಂಚಿನ ಪದಕ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಎದುರಾಳಿ ಡೆನ್ಮಾರ್ಕ್‌ನ ಕ್ಯಾಥರೀನ್ ರೋಸೆಂಗ್ರೆನ್. ತುಳಸಿಮತಿ ಫೈನಲ್‌ನಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ, ಚೀನಾದ ಯಾಂಗ್ ಕಿಯು ಕ್ಸಿಯಾ ವಿರುದ್ಧ ಚಿನ್ನಕ್ಕಾಗಿ ಸೆಣಸಾಡಲಿದ್ದಾರೆ. ಶನಿವಾರ ನಡೆದಿದ್ದ ಕ್ವಾರ್ಟರ್‌ ಫೈನಲ್‌ನಲ್ಲಿ ತುಳಸಿಮತಿ ಮುರುಗೇಶನ್‌ ಪೋರ್ಚುಗಲ್‌ನ ಬೀಟ್ರಿಝ್ ಮಾಂಟೀರೊ ಅವರನ್ನು 21-12, 21-8 ಅಂತರದಿಂದ ಪರಾಭವಗೊಳಿಸಿ ಸೆಮಿಫೈನಲ್‌ ಪ್ರವೇಶಿಸಿದ್ದರು.