Monday, 25th November 2024

Paralympics 2024: ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ನಿರಾಸೆ; ಕ್ವಾರ್ಟರ್‌ ಫೈನಲ್‌ನಲ್ಲಿ ಸೋತ ಕೊಹ್ಲಿ, ಕೌರ್‌

Paralympics 2024

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌(Paralympics 2024) ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಇಂದು(ಭಾನುವಾರ) ನಿರಾಸೆ ಉಂಟಾಗಿದೆ. ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಪಂದ್ಯಲ್ಲಿ ಪಾಲಕ್‌ ಕೊಹ್ಲಿ(Palak Kohli) ಮತ್ತು ಮನ್‌ದೀಪ್‌ ಕೌರ್‌(Mandeep Kaur) ಸೋಲು ಕೂಟದಿಂದ ನಿರ್ಗಮಿಸಿದ್ದಾರೆ.  ಎಸ್ಎಲ್4 ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯಲ್ಲಿ ಪಾಲಕ್‌ ಕೊಹ್ಲಿ ಇಂಡೋನೇಷ್ಯಾದ ಖಲಿಮಾತುಸ್ ಸಾದಿಯಾ ವಿರುದ್ಧ 21-19, 21-15 ನೇರ ಗೇಮ್‌ಗಳಿಂ ಪರಾಭವಗೊಂಡರು. ಇದೇ ದಿನ ನಡೆದ ಮಹಿಳಾ ಸಿಂಗಲ್ಸ್‌ ಎಸ್ಎಲ್3 ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಮನ್‌ದೀಪ್‌ ಕೌರ್‌ ನೈಜಿರಿಯಾದ ಮರಿಯಮ್ ಬೋಲಾಜಿ ಎದುರು 21-8, 21-9 ಹೀನಾಯ ಸೋಲು ಕಂಡರು.

ಕಳೆದ ಬಾರಿ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಕರ್ನಾಟಕದ ಸುಹಾಸ್ ಯತಿರಾಜ್ ಕೂಡಾ ಇಂದು ಸೆಮಿಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ. ಸುಕಾಂತ್ ಕದಂ ಕೂಡಾ ಕಣಕ್ಕಿಳಿಯಲಿದ್ದಾರೆ. ಮಹಿಳೆಯರ ಅಥ್ಲೆಟಿಕ್ಸ್‌ನ 1500 ಮೀ. ಓಟದ ಸ್ಪರ್ಧೆಯಲ್ಲಿ ಕರ್ನಾಟಕದ ರಕ್ಷಿತಾ ರಾಜು ಸ್ಪರ್ಧಿಸಲಿದ್ದಾರೆ. ಸದ್ಯ ಭಾರತ ಟೂರ್ನಿಯಲ್ಲಿ 5 ಪದಕ ಗೆದ್ದುಕೊಂಡು ಪದಕ ಪಟ್ಟಿಯಲ್ಲಿ 22ನೇ ಸ್ಥಾನದಲ್ಲಿದೆ. ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಹಲವು ಪದಕ ನಿರೀಕ್ಷೆ ಮಾಡಲಾಗಿದೆ. ನಿತೇಶ್ ಕುಮಾರ್ ಹಾಗೂ ಸುಕಾಂತ್ ಕದಂ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಏಷ್ಯನ್ ಪ್ಯಾರಾ ಗೇಮ್ಸ್ ಬೆಳ್ಳಿ ವಿಜೇತ ನಿತೇಶ್ ಶನಿವಾರ ನಡೆದಿದ್ದ ಪುರುಷರ ಸಿಂಗಲ್ಸ್‌ ಎಸ್‌ಎಲ್ ವಿಭಾಗದಲ್ಲಿ ಸತತ 3ನೇ ಗೆಲುವು ದಾಖಲಿಸಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿಗೆ ಲಗ್ಗೆಯಿಟ್ಟಿದ್ದರು. ಪುರುಷರ ಸಿಂಗಲ್ಸ್‌ ಎಸ್ಎಲ್4 ವಿಭಾಗದಲ್ಲಿ ಸುಕಾಂತ್, ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದ್ದರು.

ಈ ಬಾರಿಯ ಪದಕ ನಿರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದ ಭಾರತದ ಆರ್ಚರಿ ಪಟು ಶೀತಲ್ ದೇವಿ ಶನಿವಾರ ನಡೆದಿದ್ದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಆಘಾತಕಾರಿ ಸೋಲನುಭವಿಸಿ ನಿರಾಸೆ ಮೂಡಿಸಿದ್ದರು. ಗುರುವಾರ ನಡೆದಿದ್ದ ಅರ್ಹತಾ ಸುತ್ತಿನ ಪಂದ್ಯದಲ್ಲಿ  17 ವರ್ಷದ ಶೀತಲ್ ವಿಶ್ವದಾಖಲೆ ನಿರ್ಮಿಸಿದ್ದರು. ಶನಿವಾರ ಪ್ರಿ ಕ್ವಾರ್ಟ‌್ರನಲ್ಲಿ ಅವರು ಟೋಕಿಯೋ ಪ್ಯಾರಾಲಿಂಪಿಕ್ಸ್ ಬೆಳ್ಳಿ ವಿಜೇತ, ಚಿಲಿ ದೇಶದ ಜ್ಯುನಿಗಾ ಮರಿಯಾನ ವಿರುದ್ಧ ಕೇವಲ ಒಂದು ಅಂಕ (137-138 ಅಂಕ)ದಅಂತರದಲ್ಲಿ ಪರಾಭವಗೊಂಡರು.