Friday, 20th September 2024

Paralympics 2024: ಪ್ಯಾರಿಸ್‌ನಲ್ಲೂ ಬಂಗಾರದೊಂದಿಗೆ ಮಿನುಗಿದ ಸುಮಿತ್‌ ಅಂಟಿಲ್‌

Paralympics 2024

ಪ್ಯಾರಿಸ್‌: ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 3 ಸಲ ವಿಶ್ವದಾಖಲೆ ನಿರ್ಮಿಸಿ ಚಿನ್ನ ಗೆದ್ದಿದ್ದ ಸುಮಿತ್‌ ಅಂಟಿಲ್‌(Sumit Antil) ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ(Paralympics 2024) ಹಿಂದಿನ ಎಲ್ಲ ದಾಖಲೆಯನ್ನು ಹಿಂದಿಕ್ಕುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಸೋಮವಾರ ತಡರಾತ್ರಿ ನಡೆದ ಜಾವೆಲಿನ್‌ ಎಫ್‌64 ವಿಭಾಗದ ಫೈನಲ್‌ನಲ್ಲಿ 70.59 ಮೀ. ದೂರಕ್ಕೆಸೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಈ ಮೂಲಕ ಸುಮಿತ್‌ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಚಿನ್ನ ಗೆದ್ದ ಭಾರತದ 3ನೇ ಕ್ರೀಡಾಪಟು ಎನಿಸಿಕೊಂಡರು. ಇದಕ್ಕೂ ಮುನ್ನ ದೇವೇಂದ್ರ ಝಝಾರಿಯಾ ಮತ್ತು ಅವನಿ ಲೇಖರಾ ಈ ಸಾಧನೆ ಮಾಡಿದ್ದರು.

ನಿರೀಕ್ಷೆಯಂತೆ ಪದಕ ಗೆದ್ದ ಅಂಟಿಲ್‌

ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿದ್ದ 26 ವರ್ಷದ ಸುಮಿತ್‌ ಪದಕ ಭರವಸೆಯ ಕ್ರೀಡಾಪಟುಗಳಲ್ಲಿ ಅಗ್ರಗಣ್ಯನಾಗಿ ಕಾಣಿಸಿಕೊಂಡಿದ್ದರು. ಅದರಂತೆ ಚಿನ್ನ ಗೆಲ್ಲುವ ಮೂಲಕ ತಮ್ಮ ಮೇಲಿನ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಂಡರು. ಮೊದಲ ಪ್ರಯತ್ನದಲ್ಲಿ 69.11 ಮೀ. ದೂರಕ್ಕೆ ಜಾವೆಲಿನ್‌ ಎಸೆದ ಸುಮಿತ್‌ ತಮ್ಮದೇ ವಿಶ್ವದಾಖಲೆಯನ್ನು ಮುರಿದು ಪ್ಯಾರಾಲಿಂಪಿಕ್ಸ್‌ ದಾಖಲೆಯನ್ನು ಉತ್ತಮಗೊಳಿಸಿದರು. ಕಳೆದ ಟೋಕಿಯೊದಲ್ಲಿ ಸುಮಿತ್‌ 68.55 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಚಿನ್ನ ಗೆದ್ದಿದ್ದರು. ಅದು ಈ ವರೆಗಿನ ದಾಖಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಕೂಡಾ ಸುಮಿತ್‌ ಹೆಸರಲ್ಲಿದೆ. ಕಳೆದ ಏಷ್ಯನ್‌ ಗೇಮ್ಸ್‌ನಲ್ಲಿ ಅವರು 73.29 ಮೀ. ದೂರಕ್ಕೆಸೆದಿದ್ದರು. 2ನೇ ಪ್ರಯತ್ನದಲ್ಲಿ 70.59 ಮೀ. ದೂರಕ್ಕೆಸೆದು ಶ್ರೇಷ್ಠ ಪ್ರದರ್ಶನ ತೋರಿದರು. ಈ ಎಸೆತದಲ್ಲೇ ಅವರ ಪದಕ ಖಾತ್ರಿಯಾಯಿತು. ಬಳಿಕ 3ನೇ ಪ್ರಯತ್ನದಲ್ಲಿ 66.66 ಮೀ. ಎಸೆದ ಅವರು  4ನೇ ಪ್ರಯತ್ನ ಫೌಲ್ ಆಯಿತು.  5 ಮತ್ತು 6ನೇ ಪ್ರಯತ್ನದಲ್ಲಿ ಕ್ರಮವಾಗಿ 69.04 ಮೀ. ಮತ್ತು 66.57 ದೂರಕ್ಕೆಸೆದರು.

https://x.com/LostTemple7/status/1830676075640172578

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಉಳಿದಿಬ್ಬರು ಭಾರತೀಯ ಕ್ರೀಡಾಪಟುಗಳಾದ ಸಂದೀಪ್‌ ಮತ್ತು ಸಂಜಯ್ ನಿರಾಸೆ ಮೂಡಿಸಿದರು. ಸಂದೀಪ್‌ 62.80 ಮೀ. ದಾಖಲಿಸಿ 4ನೇ ಸ್ಥಾನ ಪಡೆದರೆ,  ಸಂಜಯ್ 58.03 ಮೀಟರ್‌ನೊಂದಿಗೆ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಶ್ರೀಲಂಕಾದ ಡುಲಾನ್‌(67.03 ಮೀ.) ಬೆಳ್ಳಿ, ಆಸ್ಟ್ರೇಲಿಯಾದ ಮೈಕಲ್‌ ಬ್ಯುರಿಯನ್‌ (64.89 ಮೀ.) ಕಂಚು ಗೆದ್ದರು.

https://x.com/CricCrazyJohns/status/1830670349127819354

ಅಪಘಾತದಲ್ಲಿ ಕಾಲು ಕಳೆದುಕೊಂಡ ಸುಮಿತ್‌

7 ವರ್ಷದವರಿ­ದ್ದಾಗ ತಂದೆ ರಾಜ್‌ಕುಮಾರ್‌ರನ್ನು ಕಳೆದುಕೊಂಡಿದ್ದದ್ದ ಸುಮಿತ್‌ ಆರಂಭದಲ್ಲಿ ತಂದೆಯತೆ ತಾವೂ ಸೈನಿಕರಾಗಬೇಕೆಂದು ಬಯಸಿದ್ದರು. ಆದರೆ, 2015ರಲ್ಲಿ ನಡೆದ ಬೈಕ್‌ ಅಪಘಾತವೊದು ಸುಮಿತ್‌ ಅವರ ಬದುಕಿನ ದುರಂತವೊಂದಕ್ಕೆ ಕಾರಣವಾಯಿತು. ಪರಿಣಾಮ ಎಡಗಾಲಿನ ಮಂಡಿಯ ಕೆಳಭಾಗ ಕತ್ತರಿಸಿಹೋಯಿತು. ಹಾಗೆಂದು ಅವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. 2017ರಲ್ಲಿ ಪ್ಯಾರಾ ಅತ್ಲೆಟಿಕ್ಸ್‌ ಶುರು ಮಾಡಿದರು. ಒಟ್ಟಾರೆ ಸುಮಿತ್‌ ಇದುವರೆಗೆ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಚಿನ್ನ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಹಾಗೂ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲೂ 1 ಚಿನ್ನ ಗೆದ್ದಿದ್ದಾರೆ.