Sunday, 15th December 2024

Paralympics 2024: ಚಿನ್ನ ಗೆದ್ದ ನಿತೇಶ್‌ ಕುಮಾರ್‌

Paralympics 2024

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್ ಭಾರತ ಪದಕ ಬೇಟೆ ಮತ್ತೆ ಮುಂದುವರಿದಿದೆ. ಸೋಮವಾರ ಒಂದೇ ದಿನ 2 ಪದಕ್ಕ ಲಭಿಸಿದೆ. ಪುರುಷರ ಡಿಸ್ಕಸ್ ಎಫ್ 56 ಫೈನಲ್‌ನಲ್ಲಿ ಯೋಗೇಶ್ ಕಥುನಿಯಾ(Yogesh Kathuniya) ಬೆಳ್ಳಿ ಪದಕ ಗೆದ್ದ ಕೆಲವೇ ಗಂಟೆಗಳ ಅಂತರದಲ್ಲಿ ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್‌ ಎಸ್‌ಎಲ್‌3 ವಿಭಾಗದಲ್ಲಿ ನಿತೇಶ್‌ ಕುಮಾರ್‌(Kumar Nitesh) ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಸದ್ಯ ಭಾರತ 9 ಪದಕ ಜಯಿಸಿ ಪದಕಪಟ್ಟಿಯಲ್ಲಿ 22ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇಂದು ರಾತ್ರಿ ನಡೆಯುವ ಪುರುಷರ ಸಿಂಗಲ್ಸ್‌ ಬ್ಯಾಡ್ಮಿಂಟನ್‌ ಫೈನಲ್‌ ಪಂದ್ಯದಲ್ಲಿ ಕನ್ನಡಿಗ  ಸುಹಾಸ್ ಯತಿರಾಜ್ ಕಣಕ್ಕಿಳಿಯಲಿದ್ದಾರೆ. ಕನಿಷ್ಠ ಬೆಳ್ಳಿ ಪದಕ ಖಾತ್ರಿಯಾಗಿರುವ ಕಾರಣ ಪದಕದ ಸಂಖ್ಯೆ 10ಕ್ಕೇರಲಿದೆ.

ವಿಶ್ವ ಚಾಂಪಿಯನ್‌ಶಿಪ್‌ ಹಾಗೂ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಜಯಿಸಿದ್ದ 29 ವರ್ಷದ ನಿತೇಶ್‌ ಇದೀಗ ಪ್ಯಾರಾಲಿಂಪಿಕ್ಸ್‌ನಲ್ಲಿ ಚೊಚ್ಚಲ ಚಿನ್ನದ ಪದಕದೊಂದಿಗೆ ಮಿನುಗಿದ್ದಾರೆ ಐಐಟಿ ಪದವೀಧರರಾಗಿರುವ ನಿತೇಶ್‌ ಸೋಮವಾರ ಮಧ್ಯಾಹ್ನ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಗ್ರೇಟ್‌ ಬ್ರಿಟನ್‌ನ ಡೇನಿಲ್‌ ಬೆಥೆಲ್ ಅವರನ್ನು  21-17, 18- 21-23-21 ಮೂರು ಗೇಮ್‌ಗಳ ಮ್ಯಾರಾಥಾನ್‌ ಹೋರಾಟದಲ್ಲಿ ಹಿಮ್ಮೆಟ್ಟಿಸಿದರು.

ಮೊದಲ ಗೇಮ್‌ನ ಆರಂಭಿಕ ಹಂತದಲ್ಲಿ ನಿತೇಶ್‌ ಮತ್ತು ಬೆಥೆಲ್ ಅಂಕಕ್ಕಾಗಿ ತೀವ್ರ ಪೈಪೋಟಿ ನಡೆಸಿದರೂ ಅಂತಿಮವಾಗಿ ಭಾರತೀಯನ ಕೈ ಮೇಲಾಯಿತು.  10 ಅಂಕ ದಾಟಿದ ಬಳಿಕ ಆಕ್ರಮಣಕಾರಿ ಆಟವಾಡಿದ ನಿತೇಶ್‌ ಸತತವಾಗಿ ಅಂಕ ಗಳಿಸುವ ಮೂಲಕ ಮೇಲುಗೈ ಸಾಧಿಸಿದರು. ದ್ವಿತೀಯ ಗೇಮ್‌ನಲ್ಲಿ ತಿರುಗಿ ಬಿದ್ದ ಬೆಥೆಲ್ ಆರಂಭಿಕ ಹಿನ್ನಡೆಯ ಹೊರತಾಗಿಯೂ ಶಕ್ತಿ ಮೀರಿದ ಪ್ರದರ್ಶನದೊಂದಿಗೆ 21-18 ಅಂಕದ ಗೆಲುವು ಸಾಧಿಸಿ ಪಂದ್ಯವನ್ನು 1-1 ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು. ನಿರ್ಣಾಯಕ ಗೇಮ್‌ ಕೂಡ ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿತು. ಹಾವು ಏಣಿ ಆಟದಂತಿದ್ದ ಈ ಗೇಮ್‌ನಲ್ಲಿ ಕೊನೆಗೂ ನಿತೇಶ್‌ ಗೆಲುವಿನ ನಗೆ ಬೀರಿದರು. ಗೆಲುವಿನ ಅಂತರ 23-21.

ಬೆಳ್ಳಿ ಗೆದ್ದ ಯೋಗೇಶ್ 

ಇದಕ್ಕೂ ಮುನ್ನ ನಡೆದ ಪುರುಷರ ಡಿಸ್ಕಸ್ ಎಫ್ 56 ಫೈನಲ್‌ನಲ್ಲಿ ಯೋಗೇಶ್ ಕಥುನಿಯಾ(Yogesh Kathuniya) 42.22 ದೂರ ಡಿಸ್ಕಸ್ ಎಸೆದು  ಬೆಳ್ಳಿ ಪದಕವನ್ನು ಗೆದ್ದರು.  27 ವರ್ಷದ ಯೋಗೇಶ್ ತಾವೆಸೆದ ಅತ್ಯುತ್ತಮ ಎಸೆತ ಇದಾಗಿದೆ. ಬ್ರೆಜಿಲ್‌ನ ಕ್ಲೌಡಿನಿ ಬಟಿಸ್ಟಾ ಡಾಸ್ ಸ್ಯಾಂಟೋಸ್ 46.86 ಮೀಟರ್‌ ದೂರ ಡಿಸ್ಕಸ್ ಎಸೆದು ಪ್ಯಾರಾಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಗ್ರೀಸ್‌ನ ಕಾನ್‌ಸ್ಟಾಂಟಿನೋಸ್ ಝೌನಿಸ್ 41.32 ಎಸೆದು ಕಂಚಿನ ಪದಕ ಗೆದ್ದರೆ, ಸ್ಲೋವಾಕಿಯಾದ ಡುಸಾನ್ ಲಕ್ಜ್ಕೊ 41.20 ಮೀಟರ್‌ ದೂರ ಎಸೆದು ನಾಲ್ಕನೇ ಸ್ಥಾನ ಪಡೆದರು. ಸೆರ್ಬಿಯಾದ ನೆಬೊಜ್ಸಾ ಎರಿಕ್ ಅರ್ಹತೆ ಪಡೆದರೂ ಫೈನಲ್‌ನಲ್ಲಿ ಭಾಗವಹಿಸಲಿಲ್ಲ.