Sunday, 15th December 2024

Paris Paralympics: ಪ್ಯಾರಾಲಿಂಪಿಕ್ಸ್‌ನಲ್ಲಿ 20 ಪದಕ ಬೇಟೆಯಾಡಿದ ಭಾರತ; ಐತಿಹಾಸಿಕ ಸಾಧನೆ

Paris Paralympics

ಪ್ಯಾರಿಸ್‌: ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌(Paris Paralympics) ಕ್ರೀಡಾಕೂಟದಲ್ಲಿ ಭಾರತದ ಪದಕ ಸಂಖ್ಯೆ 20ಕ್ಕೇರಿದೆ. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಪದಕ ಗೆದ್ದ ಸಾಧನೆ ಮಾಡಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ 19 ಪದಕ ಗೆದ್ದದ್ದು ಇದುವರೆಗಿನ ಗರಿಷ್ಠ ಸಾಧನೆ ಎನಿಸಿತ್ತು. ಮಂಗಳವಾರ ತಡರಾತ್ರಿ ನಡೆದ ಪುರುಷರ ಜಾವೆಲಿನ್ ಥ್ರೋ F46 ವಿಭಾಗದಲ್ಲಿ ಭಾರತದ ಅಜೀತ್ ಸಿಂಗ್ ಮತ್ತು ಸುಂದರ್ ಸಿಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ.  ಅಜೀತ್ ಅವರು 65.62 ಮೀಟರ್‌ ಜಾವೆಲಿನ್‌ ಎಸೆದು ಬೆಳ್ಳಿ ಗೆದ್ದರು. ಇದು ಅವರ ವೈಯಕ್ತಿಕ ಅತ್ಯುತ್ತಮ ಸಾಧನೆಯಾಗಿದೆ. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಜೀತ್ 8 ನೇ ಸ್ಥಾನ ಪಡೆದಿದ್ದರು. ಈ ಬಾರಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ಪುರುಷರ ಎತ್ತರ ಜಿಗಿತ – T63 ನಲ್ಲಿ ಶರದ್ ಬೆಳ್ಳಿ ಪದಕ ಗೆದ್ದರೆ, ಮರಿಯಪ್ಪನ್ ಕಂಚಿನ ಪದಕ ಜಯಿಸಿದರು. ಮರಿಯಪ್ಪನ್ ಪದಕ ಗೆಲ್ಲುವ ಮೂಲಕ ಸತತ ಮೂರು ಆವೃತ್ತಿಗಳಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಐದನೇ ವಯಸ್ಸಿನಲ್ಲಿ ಬಸ್‌ನ ಚಕ್ರದಡಿ ಸಿಲುಕಿ ಕಾಲು ಕಳೆದುಕೊಂಡಾಗ ಮರಿಯಪ್ಪನ್ ಬದುಕಿನ ಭರವಸೆಯನ್ನೇ ಕಳೆದುಕೊಂಡಿದ್ದರು. ನಂತರ ಅಚ್ಚರಿಯೇ ನಡೆದುಹೋಯಿತು. ಬೆಂಗಳೂರಿನ ಕೋಚ್ ಆರ್‌.ಸತ್ಯನಾರಾಯಣ ಅವರ ಕಣ್ಣಿಗೆ ಬಿದ್ದ ಮರಿಯಪ್ಪನ್ 2015ರಿಂದ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದರು. ನಗರದ ಸಂಪಂಗಿರಾಮನಗರದಲ್ಲಿ ಅವರ ವಾಸಕ್ಕೂ ವ್ಯವಸ್ಥೆ ಮಾಡಲಾಯಿತು. ಟಿ–42 ವಿಭಾಗದ ಹೈಜಂಪ್‌ನಲ್ಲಿ ಸ್ಪರ್ಧಿಸುವ ಅವರು 2016 ರಲ್ಲಿ ರಿಯೋದಲ್ಲಿ ಚಿನ್ನ ಮತ್ತು ಟೋಕಿಯೊದಲ್ಲಿ ಬೆಳ್ಳಿ, ಈ ಬಾರಿಗೆ ಕಂಚಿಗೆ ತೃಪ್ತಿಪಟ್ಟರು. ಒಟ್ಟು ಮೂರು ಪ್ಯಾರಾಲಿಂಪಿಕ್ಸ್‌  ಪದಕ ಗೆದ್ದ ಸಾಧನೆ ಅವರದ್ದಾಗಿದೆ.

https://x.com/RFYouthSports/status/1831061644291747865

ಪ್ಯಾರಾಲಿಂಪಿಕ್ಸ್‌ ಮಹಿಳೆಯರ ಸ್ಪರ್ಧೆಗಳಲ್ಲಿ ಭಾರತ ಪದಕ ಗೆಲ್ಲಲು ವಿಫ‌ಲವಾಯಿತು. ಶಾಟ್‌ಪುಟ್‌ ಎಫ್34 ವಿಭಾಗದಲ್ಲಿ ಭಾಗ್ಯಶ್ರೀ ಜಾಧವ್‌ 5ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. 50 ಮೀ. ರೈಫ‌ಲ್‌ ತ್ರಿ ಪೊಸಿಶನ್‌ ಎಸ್‌ಎಚ್‌1 ವಿಭಾಗದಲ್ಲಿ ಮೋನಾ ಅಗರ್ವಾಲ್‌ 13ನೇ ಸ್ಥಾನ ಪಡೆದು ಫೈನಲ್‌ಗೇರಲು ವಿಫ‌ಲರಾದರು. ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಅವನಿ ಲೇಖರಾ 50 ಮೀ. ರೈಫ‌ಲ್‌ 3 ಪೊಸಿಶನ್‌ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟರು (420.6 ಅಂಕ).