ಪ್ಯಾರಿಸ್: 2 ದಿನಗಳ ಹಿಂದೆ 10 ಮೀ ಏರ್ ರೈಫಲ್ ಸ್ಟಾಂಡಿಂಗ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಅವನಿ ಲೇಖರಾ ಅವರು ಇಂದು (ಭಾನುವಾರ) ನಡೆದ ಮಿಶ್ರ 10 ಮೀ. ಏರ್ ರೈಫಲ್ ಪ್ರೋನ್ ಎಸ್‌ಎಚ್ ವಿಭಾಗದಲ್ಲಿ ಸೋಲು ಕಂಡಿದ್ದಾರೆ. ಸಿದ್ದಾರ್ಥ್ ಬಾಬು ಜತೆ ಕಣಕ್ಕಿಳಿಯಲಿದ್ದ ಅವನಿ 6 ಸರಣಿಗಳ ಶೂಟಿಂಗ್‌ನಲ್ಲಿ ಒಟ್ಟು 106.2 ಅಂಕಗಳಿಸಿ 11ನೇ ಸ್ಥಾನ ಪಡೆದರೆ, ಇವರ ಜತೆಗಾರ ಸಿದ್ದಾರ್ಥ್ ಬಾಬು 105.7 ಅಂಕದೊಂದಿಗೆ 28ನೇ ಸ್ಥಾನಿಯಾದರು. ಅಗ್ರ 8ರೊಳಗೆ ಸ್ಥಾನ ಪಡೆದ ಶೂಟರ್‌ಗಳು ನೇರವಾಗಿ ಫೈನಲ್ ಪ್ರವೇಶ ಪಡೆದರು.
ಇದಕ್ಕೂ ಮುನ್ನ ನಡೆದಿದ್ದ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯಲ್ಲಿ ಪಾಲಕ್ ಕೊಹ್ಲಿ(Palak Kohli) ಮತ್ತು ಮನ್‌ದೀಪ್ ಕೌರ್(Mandeep Kaur) ಸೋಲು ಕೂಟದಿಂದ ನಿರ್ಗಮಿಸಿದ್ದರು. ಎಸ್ಎಲ್4 ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯಲ್ಲಿ ಪಾಲಕ್ ಕೊಹ್ಲಿ ಇಂಡೋನೇಷ್ಯಾದ ಖಲಿಮಾತುಸ್ ಸಾದಿಯಾ ವಿರುದ್ಧ 21-19, 21-15 ನೇರ ಗೇಮ್‌ಗಳಿಂದ ಪರಾಭವಗೊಂಡರೆ, ಮಹಿಳಾ ಸಿಂಗಲ್ಸ್ ಎಸ್ಎಲ್3 ವಿಭಾಗದಲ್ಲಿ ಮನ್‌ದೀಪ್ ಕೌರ್ ನೈಜಿರಿಯಾದ ಮರಿಯಮ್ ಬೋಲಾಜಿ ಎದುರು 21-8, 21-9 ಹೀನಾಯ ಸೋಲು ಕಂಡು ಪರಾಭಗೊಂಡರು.
ಸೆಮಿಫೈನಲ್ ಪ್ರವೇಶಿಸಿದ ಮನೀಶಾ
ಬ್ಯಾಡ್ಮಿಂಟನ್‌ನಲ್ಲಿ ಇಬ್ಬರು ಪದಕ ಭರವಸೆಯ ಆಟಗಾರ್ತಿಯರು ಸೋಲು ಕಂಡು ನಿರಾಸೆ ಎದುರಿಸಿದ್ದ ಭಾರತಕ್ಕೆ ಮನೀಶಾ ರಾಮ್‌ದಾಸ್ ಗೆಲುವಿನ ಸಿಹಿ ಒದಗಿಸಿದರು. ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್‌ಯು 5 ವರ್ಗದ ಕ್ವಾರ್ಟರ್ ಫೈನಲ್ ಪಂದ್ಯಲ್ಲಿ ಜಪಾನ್‌ನ ಮಾಮಿಕೊ ಟೊಯೊಡಾ ವಿರುದ್ಧ 21-13, 21-16 ನೇರ ಗೇಮ್‌ಗಳ ಅಂತರದಿಂದ ಅಧಿಕಾರಯುತ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ನಾಳೆ(ಸೋಮವಾರ) ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಭಾರತದವೇ ಆದ ತುಳಸಿಮತಿ ಮುರುಗೇಶನ್ ವಿರುದ್ಧ ಸೆಣಸಾಡಲಿದ್ದಾರೆ. ಸೋತರೆ ಕಂಚಿನ ಪದಕ್ಕಾಗಿ ಆಡಲಿದ್ದಾರೆ.
ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಹಲವು ಪದಕ ನಿರೀಕ್ಷೆ ಮಾಡಲಾಗಿದೆ. ಕಳೆದ ಬಾರಿ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಕರ್ನಾಟಕದ ಸುಹಾಸ್ ಯತಿರಾಜ್ ಕೂಡಾ ಇಂದು ಸೆಮಿಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ. ಸುಕಾಂತ್ ಕದಂ ಕೂಡ ಕಣಕ್ಕಿಳಿಯಲಿದ್ದಾರೆ. ಶನಿವಾರ ನಡೆದಿದ್ದ ಪಂದ್ಯದಲ್ಲಿ ನಿತೇಶ್ ಕುಮಾರ್ ಹಾಗೂ ಸುಕಾಂತ್ ಕದಂ ಗೆಲುವು ದಾಖಲಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ನಿತೇಶ್ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿಗೆ ಲಗ್ಗೆಯಿಟ್ಟರೆ, ಪುರುಷರ ಸಿಂಗಲ್ಸ್ ಎಸ್ಎಲ್4 ವಿಭಾಗದಲ್ಲಿ ಸುಕಾಂತ್, ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದ್ದರು.