Saturday, 14th December 2024

Paris Paralympics: ಬೆಳ್ಳಿ ಗೆದ್ದ ಸಚಿನ್ ಖಿಲಾರಿ; 21ಕ್ಕೇರಿದ ಭಾರತದ ಪದಕ ಬೇಟೆ

Paris Paralympics

ಪ್ಯಾರಿಸ್‌: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್(Paris Paralympics) ಕ್ರೀಡಾಕೂಟದಲ್ಲಿ ಭಾರತದ ಪಾರಮ್ಯ ಮತ್ತೆ ಮುಂದುವರಿದಿದೆ. ಬುಧವಾರ ಪುರುಷರ ಶಾಟ್‌ಪುಟ್ F46 ಸ್ಪರ್ಧೆಯಲ್ಲಿ(shot put F46 event) ಸಚಿನ್ ಖಿಲಾರಿ(Sachin Khilari) ಬೆಳ್ಳಿ ಗೆಲ್ಲುವ ಮೂಲಕ ಭಾರತದ ಪದಕ ಸಂಖ್ಯೆ 21ಕ್ಕೇರಿದೆ. ಇದರಲ್ಲಿ 3 ಚಿನ್ನ, 8 ಬೆಳ್ಳಿ, 10 ಕಂಚಿನ ಪದಕಗಳಿವೆ. ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ 19 ಪದಕ ಗೆದ್ದಿತ್ತು.

ಬುಧವಾರ ನಡೆದ ಪುರುಷರ ಶಾಟ್‌ಪುಟ್ F46 ಸ್ಪರ್ಧೆಯಲ್ಲಿ ಸಚಿನ್ ಖಿಲಾರಿ ಎರಡನೇ ಪ್ರಯತ್ನದಲ್ಲಿ 16.32 ಮೀಟರ್‌ಗಳ ಅತ್ಯುತ್ತಮ ಎಸೆತವನ್ನು ದಾಖಲಿಸಿ ದ್ವಿತೀಯ ಸ್ಥಾನಿಯಾಗಿ ಬೆಳ್ಳಿ ಪದಕ ಜಯಿಸಿದರು. ಜತೆಗೆ ತಮ್ಮದೇ ಆದ ಏಷ್ಯನ್ ದಾಖಲೆಯನ್ನು ಮುರಿದರು. ಕೆನಡಾದ ಗ್ರೆಗ್ ಸ್ಟೀವರ್ಟ್‌ 16.38 ಅಂಕದೊಂದಿಗೆ ಚಿನ್ನ ಗೆದ್ದರು. ಕ್ರೊವೇಶಿಯಾದ ಲುಕಾ ಬಾಕೊವಿಕ್ ಕಂಚು ಗೆದ್ದರು. 34 ವರ್ಷದ ಸಚಿನ್ ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಸಚಿನ್ ತನ್ನ ಎರಡನೇ ಎಸೆತದ ನಂತರ ಚಿನ್ನದ ಪದಕದ ಸ್ಥಾನದಲ್ಲಿದ್ದರು. ಆದರೆ, ಗ್ರೆಗ್ ಸ್ಟೀವರ್ಟ್ ಐದನೇ ಪ್ರಯತ್ನದಲ್ಲಿ ಮುನ್ನಡೆ ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

https://x.com/thebharatarmy/status/1831265314731966605

ಸೈಕಲ್‌ ಅಪಘಾತ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾರಗಣಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಸಚಿನ್‌ ಅವರ ಆರಂಭಿಕ ಜೀವನವು ಬಹಳ ಕಷ್ಟಗಳಿಂದ ತುಂಬಿತ್ತು. ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಅವರು ಆ ಬಳಿಕ ಸಂಭವಿಸಿದ ಸೈಕಲ್‌ ಅಪಘಾತದಿಂದ ಎಡಗೈ ಅಂಗವೈಕಲ್ಯಕ್ಕೆ ತುತ್ತಾದರು. ದುರ್ಬಲವಾದ ಗಾಯಕ್ಕೆ ಸಚಿನ್‌ ಹಲವಾರು ಶಸ್ತ್ರಚಿಕಿತ್ಸೆಗಳನ್ನು ಎದುರಿಸಿದರೂ ಇದು ಯಶಸ್ವಿಯಾಗಲಿಲ್ಲ. ಆದಾಗ್ಯೂ, ಈ ಸವಾಲು ಮೆಟ್ಟಿ ನಿಂತು ಇಂದು ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಸಚಿನ್ ಖಿಲಾರಿ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಶಾಟ್‌ಪುಟ್‌ನಲ್ಲಿ ಪದಕ ಗೆದ್ದ ಮೂರನೇ ಭಾರತೀಯ ಅಥ್ಲೀಟ್. ಇದಕ್ಕೂ ಮುನ್ನ 1984ರಲ್ಲಿ ಜೋಗಿಂದರ್ ಸಿಂಗ್ ಬೇಡಿ ಕಂಚಿನ ಪದಕ ಹಾಗೂ ಮಹಿಳಾ ಅಥ್ಲೀಟ್ ದೀಪಾ ಮಲಿಕ್ 2016ರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

2015 ರಲ್ಲಿ, ಸಚಿನ್ ಅವರನ್ನು ಪ್ಯಾರಾ-ಸ್ಪೋರ್ಟ್ಸ್ ಜಗತ್ತಿಗೆ ಪರಿಚಯಿಸಲಾಯಿತು. 2017 ರಲ್ಲಿ ಜೈಪುರದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸಚಿನ್‌ ತಮ್ಮ ಮೊದಲ ಪ್ರಯತ್ನದಲ್ಲೇ ಚಿನ್ನದ ಪದಕ ಗೆದ್ದು ಬೀಗಿದ್ದರು. ಇದಾದ ಬಳಿಕ ವಿಶ್ವ ಪ್ಯಾರಾ-ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ, ಹೀಗೆ ಹಲವು ಕೂಟದಲ್ಲಿ ಪದಕ ಜಯಿಸಿದ್ದರು.

ಮಂಗಳವಾರ ಭಾರತ ಒಂದೇ ದಿನ ಐದು ಪದಕಗಳನ್ನು (ಎರಡು ಬೆಳ್ಳಿ ಮತ್ತು ಮೂರು ಕಂಚಿನ ಪದಕ) ಗೆಲ್ಲುವ ಮೂಲಕ ಕಳೆದ ಆವೃತ್ತಿಯ ಪೋಡಿಯಂ ಫಿನಿಶ್‌ಗಳ ಸಂಖ್ಯೆಯನ್ನು ಹಿಂದಿಕ್ಕಿ ಐತಿಹಾಸಿಕ ಸಾಧನೆ ಮಾಡಿತ್ತು. ಭಾರತದ ಇನ್ನು ಕೆಲ ಸ್ಪರ್ಧಿಗಳು ಫೈನಲ್‌ ತಲುಪಿರುವ ಕಾರಣ ಪದಕ ಸಂಖ್ಯೆ 25ರ ಗಡಿ ದಾಟುವ ನಿರೀಕ್ಷೆ ಇದೆ. ಮಂಗಳವಾರ ನಡೆದಿದ್ದ ಪುರುಷರ ಜಾವೆಲಿನ್ ಥ್ರೋ F46 ವಿಭಾಗದಲ್ಲಿ ಭಾರತದ ಅಜೀತ್ ಸಿಂಗ್( 65.62 ಮೀಟರ್‌) ಮತ್ತು ಸುಂದರ್ ಸಿಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿದ್ದರು. ಇದು ಅವರ ವೈಯಕ್ತಿಕ ಅತ್ಯುತ್ತಮ ಸಾಧನೆಯಾಗಿದೆ. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಜೀತ್ 8 ನೇ ಸ್ಥಾನ ಪಡೆದಿದ್ದರು.

ಪುರುಷರ ಎತ್ತರ ಜಿಗಿತ – T63 ನಲ್ಲಿ ಶರದ್ ಬೆಳ್ಳಿ ಪದಕ ಗೆದ್ದರೆ, ಮರಿಯಪ್ಪನ್ ಕಂಚಿನ ಪದಕ ಜಯಿಸಿದರು. ತಂಗವೇಲು ಪದಕ ಗೆಲ್ಲುವ ಮೂಲಕ ಸತತವಾಗಿ ಮೂರು ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹಿರಿಮೆಗೆ ಪಾತ್ರರಾದರು. ರಿಯೊದಲ್ಲಿ ಚಿನ್ನ, ಟೋಕಿಯೊದಲ್ಲಿ ಬೆಳ್ಳಿ, ಇದೀಗ ಪ್ಯಾರಿಸ್‌ನಲ್ಲಿ ಕಂಚು ಗೆದ್ದರು. ಇದು ಮಾತ್ರವಲ್ಲದೆ ಭಾರತ ಪರ ಪ್ಯಾರಾಲಿಂಪಿಕ್ಸ್‌ನಲ್ಲಿ 3 ಪದಕ ಗೆದ್ದ 3ನೇ ಕ್ರೀಡಾಪಟು ಎಂಬ  ಹಿರಿಮೆಗೂ ತಂಗವೇಲು ಪಾತ್ರರಾಗಿದ್ದಾರೆ. ಉಳಿದಿಬ್ಬರೆಂದರೆ,  ದೇವೇಂದ್ರ ಝಝಾರಿಯಾ(2ಚಿನ್ನ, 1 ಬೆಳ್ಳಿ) ಮತ್ತು ಅವನಿ ಲೇಖರಾ(2 ಚಿನ್ನ, 1 ಕಂಚು).