Saturday, 23rd November 2024

Paralympics 2024: ಚಿನ್ನಕ್ಕೆ ಕೊರಳೊಡ್ಡಲಿ ಕನ್ನಡಿಗ ಸುಹಾಸ್ ಯತಿರಾಜ್; ಇಂದು ಫೈನಲ್‌

Paris Paralympics

ಪ್ಯಾರಿಸ್‌: ಕಳೆದ ಟೋಕಿಯೊ ಪ್ಯಾರಾ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ, ಕನ್ನಡಿಗ, ಐಎಎಸ್‌ ಅಧಿಕಾರಿ ಸುಹಾಸ್ ಯತಿರಾಜ್(Suhas Lalinakere Yathiraj) ಅವರು ಪ್ರಸಕ್ತ ಸಾಗುತ್ತಿರುವ ಪ್ಯಾರಿಸ್‌ ಪ್ಯಾರಾ ಒಲಿಂಪಿಕ್ಸ್‌ನಲ್ಲಿ(Paralympics 2024) ಪದಕವೊಂದನ್ನು ಗೆಲ್ಲಲು ಮುಂದಾಗಿದ್ದಾರೆ. ಇಂದು ರಾತ್ರಿ ನಡೆಯುವ  ಪುರುಷರ ಸಿಂಗಲ್ಸ್‌ ಎಸ್‌ ಎಲ್‌4 ವಿಭಾಗದ ಬ್ಯಾಡ್ಮಿಂಟನ್‌ ಫೈನಲ್‌ನಲ್ಲಿ ಸುಹಾಸ್‌ ಚಿನ್ನ ಪದಕದ ಇರಾದೆಯೊಂದಿಗೆ ಫ್ರಾನ್ಸ್‌ನ ಲುಕಾಸ್‌ ಮಜುರ್‌ ವಿರುದ್ಧ ಸೆಣಸಾಡಲಿದ್ದಾರೆ. ಭಾನುವಾರ ನಡೆದಿದ್ದ ಸೆಮಿ ಫೈನಲ್‌ ಪಂದ್ಯದಲ್ಲಿ ಸುಹಾಸ್‌ ತಮ್ಮದೇ ದೇಶದ ಸುಕಾಂತ್‌ ಕದಂ ವಿರುದ್ಧ 21-17, 21-12 ನೇರ ಗೇಮ್‌ಗಳಿಂದ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟಿದ್ದರು.

ಕರ್ನಾಟಕ ಮೂಲದ ಸುಹಾಸ್‌ ಯತಿರಾಜ್‌ ಅವರು ಟೋಕಿಯೊ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದ ಮೊದಲ ಐಎಎಸ್‌ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಇದೀಗ ಸತತ 2ನೇ ಪದಕ ಗೆಲ್ಲಲು ಸಜ್ಜಾಗಿದ್ದಾರೆ. 2007ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಸುಹಾಸ್‌, ದುರ್ಬಲ ಕಾಲನ್ನು ಹೊಂದಿದ್ದಾರೆ. ಕಾಲಿನಲ್ಲಿ ತೀವ್ರ ಬಲಹೀನತೆಯಿದ್ದರೆ ಅಂತಹವರನ್ನು ಎಸ್‌ಎಲ್‌4 ವಿಭಾಗಕ್ಕೆ ಸೇರಿಸಲಾಗುತ್ತದೆ. ಇಂತಹ ಸಮಸ್ಯೆಗಳ ಮಧ್ಯೆಯೂ ಸುಹಾಸ್‌ ಐಎಎಸ್‌ ಅಧಿಕಾರಿಯಾಗಿದ್ದಾರೆ. ಈಗಾಗಲೇ ಸುಹಾಸ್, ವಿಶ್ವಚಾಂಪಿಯನ್‌ಶಿಪ್, ಏಷ್ಯನ್ ಚಾಂಪಿಯನ್ ಶಿಪ್, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಪ್ರಸ್ತುತ ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

https://x.com/KhelNow/status/1830471365666701543

ಸೋಮವಾರ ಬೆಳಗ್ಗೆ ನಡೆದ ಮಹಿಳೆಯರ ಎಸ್‌ಯು5 ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ತುಳಸಿಮತಿ ಮುರುಗೇಶನ್‌ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಬೆಳ್ಳಿ ಅಥವಾ ಚಿನ್ನದ ಪದಕವೊಂದನ್ನು ಖಾತ್ರಿ ಪಡಿಸಿದ್ದಾರೆ. ಜತೆಗೆ ಭಾರತಕ್ಕೆ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಎಂಟನೇ ಪದಕವೊಂದು ಖಾತರಿಯಾಗಿದೆ. ತುಳಸಿಮತಿ ಸೆಮಿಫೈನಲ್‌ನಲ್ಲಿ ಭಾರತದವರೇ ಆದ ಮನೀಷಾ ರಾಮದಾಸ್‌ ವಿರುದ್ಧ ತುಳಸಿಮತಿ 23-21, 21-17 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ಸೋಲು ಕಂಡ ಮನೀಷಾ ಇನ್ನು ಕಂಚಿನ ಪದಕ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಎದುರಾಳಿ ಡೆನ್ಮಾರ್ಕ್‌ನ ಕ್ಯಾಥರೀನ್ ರೋಸೆಂಗ್ರೆನ್. ತುಳಸಿಮತಿ ಫೈನಲ್‌ನಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ, ಚೀನಾದ ಯಾಂಗ್ ಕಿಯು ಕ್ಸಿಯಾ ವಿರುದ್ಧ ಚಿನ್ನಕ್ಕಾಗಿ ಸೆಣಸಾಡಲಿದ್ದಾರೆ. ಶನಿವಾರ ನಡೆದಿದ್ದ ಕ್ವಾರ್ಟರ್‌ ಫೈನಲ್‌ನಲ್ಲಿ ತುಳಸಿಮತಿ ಮುರುಗೇಶನ್‌ ಪೋರ್ಚುಗಲ್‌ನ ಬೀಟ್ರಿಝ್ ಮಾಂಟೀರೊ ಅವರನ್ನು 21-12, 21-8 ಅಂತರದಿಂದ ಪರಾಭವಗೊಳಿಸಿ ಸೆಮಿಫೈನಲ್‌ ಪ್ರವೇಶಿಸಿದ್ದರು.