ಪ್ಯಾರಿಸ್: ಅತ್ಯಂತ ರೋಚಕವಾಗಿ ನಡೆದ ಮಹಿಳೆಯರ ಎಸ್‌ಯು5 ಬ್ಯಾಡ್ಮಿಂಟನ್ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ತುಳಸಿಮತಿ ಮುರುಗೇಶನ್ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಬೆಳ್ಳಿ ಅಥವಾ ಚಿನ್ನದ ಪದಕವೊಂದನ್ನು ಖಾತ್ರಿ ಪಡಿಸಿದ್ದಾರೆ. ಜತೆಗೆ ಭಾರತಕ್ಕೆ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಎಂಟನೇ ಪದಕವೊಂದು ಖಾತರಿಯಾಗಿದೆ. ಸೆಮಿಫೈನಲ್‌ನಲ್ಲಿ ಭಾರತದವರೇ ಆದ ಮನೀಷಾ ರಾಮದಾಸ್ ವಿರುದ್ಧ ತುಳಸಿಮತಿ 23-21, 21-17 ಗೇಮ್‌ಗಳ ಅಂತರದಿಂದ ಗೆದ್ದು ಬೀಗಿದರು.
ಸೋಲು ಕಂಡ ಮನೀಷಾ ಇನ್ನು ಕಂಚಿನ ಪದಕ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಎದುರಾಳಿ ಡೆನ್ಮಾರ್ಕ್‌ನ ಕ್ಯಾಥರೀನ್ ರೋಸೆಂಗ್ರೆನ್. ತುಳಸಿಮತಿ ಫೈನಲ್‌ನಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ, ಚೀನಾದ ಯಾಂಗ್ ಕಿಯು ಕ್ಸಿಯಾ ವಿರುದ್ಧ ಚಿನ್ನಕ್ಕಾಗಿ ಸೆಣಸಾಡಲಿದ್ದಾರೆ.ಅಗ್ರ ಶ್ರೇಯಾಂಕದ ತುಳಸಿಮತಿಗೆ ಮನೀಷಾ ತೀವ್ರ ಪೈಪೋಟಿ ನೀಡಿದರು. ಮೊದಲ ಗೇಮ್‌ನಲ್ಲಿ ಉಭಯ ಆಟಗಾರ್ತಿಯರು ಅಂಕ ಗಳಿಕೆ ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಹೀಗಾಗಿ ಅಂಕ 23ರ ತನಕ ಸಾಗಿತು. ದ್ವಿತೀಯ ಗೇಮ್‌ನಲ್ಲಿಯೂ ಇದೇ ರೀತಿಯ ಹೋರಾಟ ಕಂಡು ಬಂದರೂ ಅಂತಿಮವಾಗಿ ತುಳಸಿಮತಿ ಮೇಲುಗೈ ಸಾಧಿಸಿದರು. ಪಂದ್ಯ 40 ನಿಮಿಷಗಳಲ್ಲಿ ಅಂತ್ಯಕಂಡಿತು.
https://x.com/sportwalkmedia/status/1830431061886619661
ಶನಿವಾರ ನಡೆದಿದ್ದ ಕ್ವಾರ್ಟರ್ ಫೈನಲ್‌ನಲ್ಲಿ ತುಳಸಿಮತಿ ಮುರುಗೇಶನ್ ಪೋರ್ಚುಗಲ್‌ನ ಬೀಟ್ರಿಝ್ ಮಾಂಟೀರೊ ಅವರನ್ನು 21-12, 21-8 ಅಂತರದಿಂದ ಪರಾಭವಗೊಳಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ರವಿವಾರ ರಾತ್ರಿ ನಡೆದ ಪುರುಷರ ಎಸ್‌ಎಲ್3 ಸೆಮಿಫೈನಲ್ ಸೆಣಸಾಟದಲ್ಲಿ ನಿತೇಶ್ ಕುಮಾರ್ ಜಪಾನ್‌ನ ದೈಸುಕೆ ಫುಜಿಹಾರ ಅವರನ್ನು 21-16, 21-12 ಅಂತರದಿಂದ ಮಣಿಸಿದರು. ಫೈನಲ್‌ನಲ್ಲಿ ಇವರು ಬ್ರಿಟನ್‌ನ ಡೇನಿಯಲ್ ಬೆಥೆಲ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಆರ್ಚರಿಯಲ್ಲಿ ವಿಶ್ವದ ನಂ.1 ಭಾರತದ ರಾಕೇಶ್ ಕುಮಾರ್ ಪ್ಯಾರಾಲಿಂಪಿಕ್ಸ್ ಸೆಮಿಫೈನಲ್ ತಲುಪಿದ್ದಾರೆ. ಶೂಟ್ ಆಫ್‌ನಲ್ಲಿ ಅವರು ಕೆನಡಾದ ಕೈಲ್ ಟ್ರೆಂಬ್ಲೆ ವಿರುದ್ಧ ಗೆಲುವು ಸಾಧಿಸಿ ಈ ಸಾಧನೆಗೈದರು.