ಬಾರ್ಬಡೋಸ್: ಕಿಂಗ್ಸ್ಸ್ಟನ್ ಓವಲ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಫಿಲ್ ಸಾಲ್ಟ್(Philip Salt) ಸ್ಫೋಟಕ ಶತಕ ಬಾರಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ತಂಡದ (ವಿಂಡೀಸ್) ವಿರುದ್ಧ ಮೂರು ಸೆಂಚುರಿ ಸಿಡಿಸಿದ ವಿಶ್ವ ದಾಖಲೆ ಫಿಲ್ ಸಾಲ್ಟ್ ಪಾಲಾಗಿದೆ.
ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಸಾಲ್ಟ್ 54 ಎಸೆತಗಳನ್ನು ಎದುರಿಸಿ 6 ಸೊಗಸಾದ ಸಿಕ್ಸರ್ ಮತ್ತು 9 ಫೋರ್ಗಳೊಂದಿಗೆ ಅಜೇಯ 103 ರನ್ ಸಿಡಿಸಿದರು. ಸಾಲ್ಟ್ ಹೊಡೆತಕ್ಕೆ ವಿಂಡೀಸ್ ಬೌಲರ್‌ಗಳು ನೀರು ಕುಡಿದರು. 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸುವ ಮೂಲಕ ಸಾಲ್ಟ್ ಸೆಂಚುರಿ ಖಾತೆ ತೆರೆದಿದ್ದರು. ಅದೇ ವರ್ಷ ವಿಂಡೀಸ್ ವಿರುದ್ಧ 2ನೇ ಶತಕ ಸಿಡಿಸಿದ್ದರು. ಇದೀಗ ಮೂರನೇ ಶತಕ ಬಾರಿಸುವ ಮೂಲಕ ಒಂದೇ ತಂಡದ ವಿರುದ್ಧ ಮೂರು ಟಿ20 ಶತಕ ಸಿಡಿಸಿದ ವಿಶ್ವದ ಏಕೈಕ ವಿಕೇಟ್ ಕೀಪರ್ ಎನಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡವು ನಿಕೋಲಸ್ ಪೂರಣ್(38) ಮತ್ತು ರೊಮಾರಿಯೋ ಶೆಫರ್ಡ್(35) ಅವರ ಬ್ಯಾಟಿಂಗ್ ಹೋರಾಟದ ನೆರವಿನಿಂದ 183 ರನ್ ಬಾರಿಸಿತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 16.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 183 ರನ್ ಬಾರಿಸಿ ಗೆಲುವು ಸಾಧಿಸಿತು.
ಇದನ್ನೂ ಓದಿ IND vs AUS: ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಭಾರತ ಕಳೆದುಕೊಳ್ಳಲಿರುವ ಮೂವರು ಸ್ಟಾರ್‌ಗಳು!
ಚೇಸಿಂಗ್ ವೇಳೆ ಇಂಗ್ಲೆಂಡ್ ಪರ ಸಾಲ್ಟ್ ಅಜೇಯ ಶತಕ ಬಾರಿಸಿದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಯುವ ಬ್ಯಾಟರ್ ಜಾಕೋಬ್ ಬೆಥೆಲ್ 36 ಎಸೆತಗಳಿಂದ 58 ಬಾರಿಸಿ ಅಜೇಯರಾಗಿ ಉಳಿದರು. ಅವರ ಅರ್ಥಶತಕದ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಯಿತು. ವಿಂಡೀಸ್ ಪರ ಗುಡಾಕೇಶ್ ಮೋತಿ ಮತ್ತು ಶೆಫರ್ಡ್ ತಲಾ ಒಂದು ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ವಿಂಡೀಸ್‌ಗೆ ಆರಂಭಿಕ ಆಟಗಾರರು ಕೈ ಕೊಟ್ಟರು. ಬ್ರೆಂಡನ್ ಕಿಂಗ್(3) ಮತ್ತು ಎವಿನ್ ಲೆವಿಸ್(13) ಬೇಗನೆ ವಿಕೆಟ್ ಕಳೆದುಕೊಂಡರು. ವಿಂಡೀಸ್‌ಗೆ ಆಸರೆಯಾದದ್ದು ಮಧ್ಯಮ ಕ್ರಮಾಂಕದ ಬ್ಯಾಟರ್‌ಳಾದ ಪೂರಣ್(38), ರಸೆಲ್(30), ಶೆಫರ್ಡ್(35) ಮತ್ತು ಗುಡಾಕೇಶ್(33) ರನ್ ಬಾರಿಸಿದರು. ಇಂಗ್ಲೆಂಡ್ ಪರ ಸಾಕಿಬ್ ಮಹಮೂದ್(4) ಮತ್ತು ಆದೀಲ್ ರಶೀದ್(3) ವಿಕೆಟ್ ಕಿತ್ತು ಮಿಂಚಿದರು.