Thursday, 14th November 2024

Ponting vs Gambhir: ಕೊಹ್ಲಿ ವಿಚಾರದಲ್ಲಿ ಗಂಭೀರ್‌-ಪಾಂಟಿಂಗ್‌ ನಡುವೆ ವಾಗ್ಯುದ್ಧ

ಸಿಡ್ನಿ: ಕ್ರಿಕೆಟನ್ನು ʼಜಂಟಲ್ ಮೆನ್ ಗೇಮ್ʼ ಎನ್ನಲಾಗುತ್ತದೆ. ಆದರೆ ಇಲ್ಲಿ ಕೂಡಾ ಈ ಸ್ಪೂರ್ತಿಗೆ ವಿರುದ್ಧವಾಗಿ ಹಲವಾರು ಘಟನೆಗಳು ನಡೆಯುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಹೆಚ್ಚು. ಸ್ಲೆಡ್ಜಿಂಗ್‌ ಮೂಲಕ ಎದುರಾಳಿ ತಂಡವನ್ನು ಮತ್ತು ಆಟಗಾರರನ್ನು ಕೆಣಕಿ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕುತಂತ್ರ ಇದಾಗಿದೆ. ವಿಶ್ವ ಕ್ರಿಕೆಟ್‌ನಲ್ಲಿ ಈ ಕುತಂತ್ರಕ್ಕೆ ಹೆಸರುವಾಸಿಯಾದ ತಂಡವೆಂದರೆ ಅದು ಆಸ್ಟ್ರೇಲಿಯಾ. ಯಾವುದೇ ಸರಣಿ ಆರಂಭಕ್ಕೂ ಮುನ್ನ ಎದುರಾಳಿ ಆಟಗಾರರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿ ಕೆಣಕುವುದರಲ್ಲಿ ಆಸೀಸ್‌ ತಂಡ ಎತ್ತಿದ ಕೈ. ಇದೀಗ ಬಾರ್ಡರ್‌-ಗವಾಸ್ಕರ್‌(Border-Gavaskar Trophy) ಟೆಸ್ಟ್‌ ಸರಣಿ ಆರಂಭಕ್ಕೂ ಮುನ್ನವೇ ಕೋಚ್‌ ಗಂಭೀರ್‌(Ponting vs Gambhir) ಮತ್ತು ಆಸೀಸ್‌ ಮಾಜಿ ನಾಯಕ ರಿಕಿ ಪಾಂಟಿಂಗ್‌ ಮಧ್ಯೆ ವಾಗ್ಯುದ್ಧ ಆರಂಭವಾಗಿದೆ.

ವಿರಾಟ್​ ಕೊಹ್ಲಿ ಫಾರ್ಮ್​ ಮತ್ತು ತಂಡದಲ್ಲಿನ ಸ್ಥಾನದ ಬಗ್ಗೆ ರಿಕಿ ಪಾಂಟಿಂಗ್​ ಪ್ರಶ್ನೆಗಳನ್ನು ಕೆಲ ದಿನಗಳ ಹಿಂದೆ ಎತ್ತಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಕಳೆದ ಐದು ವರ್ಷಗಳಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿರುವವರು ಬಹುಶಃ ಯಾರು ಇರಲಕ್ಕಿಲ್ಲ ಎಂದು ಹೇಳುವ ಮೂಲಕ ಕೊಹ್ಲಿಯನ್ನು ಪಾಂಟಿಂಗ್‌ ಟೀಕಿಸಿದ್ದರು. ಇದಕ್ಕೆ ಕೋಚ್‌ ಗಂಭೀರ್‌ ಆಸೀಸ್‌ ಪ್ರವಾಸಕ್ಕೂ ಮುನ್ನ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ತಕ್ಕ ತಿರುಗೇಟು ನೀಡಿದ್ದರು. ಭಾರತೀಯ ಕ್ರಿಕೆಟ್​ನಲ್ಲಿ ಪಾಂಟಿಂಗ್​ಗೆ ಏನು ಕೆಲಸ? ಅವರು ಆಸೀಸ್​ ಕ್ರಿಕೆಟ್​ನತ್ತ ಗಮನಹರಿಸಲಿ ಎಂದಿದ್ದರು.

ಇದನ್ನೂ ಓದಿ IND vs AUS: ಪರ್ತ್‌ ಟೆಸ್ಟ್‌ಗೆ ಬೌನ್ಸಿ ಪಿಚ್‌; ಎಚ್ಚರಿಕೆ ನೀಡಿದ ಕ್ಯುರೇಟರ್‌

ಇದೀಗ ಗಂಭೀರ್‌ ಹೇಳಿಕೆಗೆ ಪ್ರತಿಕ್ರಿಯೆ(Ricky Ponting Fires Back) ನೀಡಿರುವ ಪಾಂಟಿಂಗ್‌, ʼಗಂಭೀರ್‌ ಹೇಳಿಕೆಯಿಂದ ನನಗೇನು ಆಶ್ಚರ್ಯವಾಗಿಲ್ಲ. ಏಕೆಂದರೆ ಗಂಭೀರ್‌(Gautam Gambhir) ಸ್ವಭಾವವೇ ಹಾಗೆ, ಬೇರೊಬ್ಬರ ಬಗ್ಗೆ ಚುಚ್ಚಿ ಮಾತನಾಡುತ್ತಾರೆ. ಈ ಹಿಂದೆ ತನ್ನದೇ ತಂಡದ ಆಟಗಾರರ ವಿರುದ್ಧ ಅವರು ನೀಡಿರುವ ಹೇಳಿಕೆಯನ್ನು ನೋಡಿದರೆ ಇದು ತಿಳಿಯುತ್ತದೆ. ನಾನು ವಿರಾಟ್‌ ಕೊಹ್ಲಿಯ ಬಗ್ಗೆ ಯಾವುದೇ ಟೀಕೆ ಮತ್ತು ಅವರಿಗೆ ಅವಮಾನ ಮಾಡುವಂತಹ ಹೇಳಿಕೆ ನೀಡಿಲ್ಲ ಎನ್ನುವುದು ನನಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಹೇಳಿದರು.

ವಿರಾಟ್ ಕೊಹ್ಲಿ ಸ್ಟಾರ್‌ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ ಆದರೆ ಪ್ರಸ್ತುತ ಅವರು ಬ್ಯಾಟಿಂಗ್‌ ಫಾರ್ಮ್‌ ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ. ಕಳೆದುಕೊಂಡಿರುವ ಫಾರ್ಮ್‌ ಅನ್ನು ಆಸ್ಟ್ರೇಲಿಯಾದಲ್ಲಿ ಕಂಡುಕೊಳ್ಳಲಿದ್ದಾರೆ. ಅವರು ಆಸೀಸ್‌ ನೆಲದಲ್ಲಿ ಉತ್ತಮ ಹಿಡಿತ ಸಾಧಿಸಿದ್ದಾರೆ ಎಂದು ನಾನು ಹೇಳಿದ್ದೆ. ಆದರೆ ನನ್ನ ಹೇಳಿಕೆಯನ್ನು ಗಂಭೀರ್‌ ತಪ್ಪಾಗಿ ಅರ್ಥಮಾಡಿಕೊಂಡು ನನ್ನ ಮೇಲೆ ಕಿಡಿಕಾರಿದ್ದಾರೆ. ಅವರ ಸ್ವಭಾವವೇ ಹಾಗೆ ಎಂದು ಹೇಳುವ ಮೂಲಕ ಪಾಂಟಿಂಗ್‌ ಗಂಭೀರ್‌ಗೆ ತಿರುಗೇಟು ಕೊಟ್ಟಿದ್ದಾರೆ.