Wednesday, 4th December 2024

Prime Ministers XI vs India: ಗಿಲ್‌-ಹರ್ಷಿತ್‌ ಮಿಂಚು, ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್‌ ಜಯ!

Shubman Gill, Nitish Reddy, Yashasvi Jaiswal guide India to a six-wicket win vs Prime Minister's XI

ಕ್ಯಾನ್‌ಬೆರಾ: ಆಸ್ಟ್ರೇಲಿಯಾದ ಪ್ರೈಮ್ ಮಿನಿಸ್ಟರ್ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ (Prime Ministers XI vs India) ಭಾರತ ಕ್ರಿಕೆಟ್ ತಂಡ ದಿಟ್ಟ ಪ್ರದರ್ಶನ ನೀಡಿ 5 ವಿಕೆಟ್ ಜಯ ಸಾಧಿಸಿದೆ. ಪಿಂಕ್‌ ಬಾಲ್‌ ಚೆಂಡಿನೊಂದಿಗೆ ನಡೆದ ಈ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಹರ್ಷಿತ್ ರಾಣಾ ಮತ್ತು ಶುಭಮನ್ ಗಿಲ್ ಅದ್ಭುತ ಪ್ರದರ್ಶನ ತೋರಿದರು. ಇದಲ್ಲದೇ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಬ್ಯಾಟಿಂಗ್ ತಮ್ಮ ಛಾಪು ಮೂಡಿಸಿದ್ದಾರೆ.

ಭಾರತ ಮತ್ತು ಪಿಎಂ ಇಲೆವೆನ್ ನಡುವಣ ಫಿಂಕ್‌ ಬಾಲ್‌ನೊಂದಿಗಿನ ಎರಡು ದಿನಗಳ ಅಭ್ಯಾಸ ಪಂದ್ಯವನ್ನು ಮಳೆಯಿಂದಾಗಿ ಕೇವಲ 46-46 ಓವರ್‌ಗಳವರೆಗೆ ಕಡಿತಗೊಳಿಸಲಾಗಿತ್ತು. ಏಕೆಂದರೆ, ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ದಿನ ಮೊದಲು ಬ್ಯಾಟ್ ಮಾಡಿದ ಪಿಎಂ ಇಲೆವೆನ್ 46 ಓವರ್‌ಗಳಲ್ಲಿ ಸ್ಯಾಮ್ ಕೊಸ್ಟಸ್‌ ಅವರ ಶತಕದ ನೆರವಿನಿಂದ 43.2 ಓವರ್ ಗಳಲ್ಲಿ 240 ರನ್ ಗಳಿಸಿ ಆಲೌಟ್ ಆಗಿತ್ತು.

ಪಿಎಂ ಇಲೆವೆನ್ ವಿರುದ್ಧದ ಈ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಸಂಪೂರ್ಣ 46 ಓವರ್‌ಗಳನ್ನು ಬ್ಯಾಟ್ ಮಾಡಿತು. 46 ಓವರ್‌ಗಳಲ್ಲಿ ಭಾರತ ತಂಡ 5 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿತು. ಈ ಮೂಲಕ ಅಡಿಲೇಡ್ ಟೆಸ್ಟ್‌ಗೂ ಮುನ್ನ ಟೀಮ್‌ ಇಂಡಿಯಾ ಪಿಂಕ್ ಬಾಲ್‌ನಿಂದ ಭರ್ಜರಿ ಆರಂಭ ಪಡೆದಿದೆ.

IND vs AUS: ಗೆಲುವಿನೊಂದಿಗೆ ಹಲವು ದಾಖಲೆ ಬರೆದ ಭಾರತ

ಅರ್ಧಶತಕ ಸಿಡಿಸಿದ ಶುಭಮನ್‌ ಗಿಲ್‌

ಪರ್ತ್ ಟೆಸ್ಟ್ ಪಂದ್ಯಕ್ಕೂ ಮುನ್ನ ಗಾಯಗೊಂಡಿದ್ದ ಟೀಮ್‌ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಸಂಪೂರ್ಣ ಫಿಟ್ನೆಸ್‌ಗೆ ಮರಳಿದ್ದಾರೆ. ಭಾರತದ ಪರ ಮನಮೋಹಕ ಬ್ಯಾಟ್‌ ಮಾಡಿದ ಶುಭಮನ್‌ ಗಿಲ್ 62 ಎಸೆತಗಳಲ್ಲಿ 50 ರನ್ ಗಳಿಸಿದರು. ಈ ಇನಿಂಗ್ಸ್‌ನಲ್ಲಿ ಶುಭ್‌ಮನ್ ಗಿಲ್‌ ಒಟ್ಟು 7 ಬೌಂಡರಿಗಳನ್ನು ಬಾರಿಸಿದರು. ಇದಲ್ಲದೇ ಭಾರತದ ಪರ ಓಪನಿಂಗ್ ಮಾಡಲು ಬಂದ ಯಶಸ್ವಿ ಜೈಸ್ವಾಲ್ (45) ಮತ್ತು ಕೆಎಲ್ ರಾಹುಲ್ (27) ಕೂಡ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಬಂದಿದ್ದರು, ಆದರೆ ಈ ಪ್ರಯೋಗ ಯಶಸ್ವಿಯಾಗಲಿಲ್ಲ ಮತ್ತು ಅವರು ಕೇವಲ 3 ರನ್ ಗಳಿಸಿ ಔಟಾದರು. ಇದಲ್ಲದೇ ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಕೂಡ ತಲಾ 42 ರನ್‌ಗಳ ಪ್ರಬಲ ಇನಿಂಗ್ಸ್‌ಗಳನ್ನು ಆಡಿದರು. ಬ್ಯಾಟ್ಸ್‌ಮನ್‌ಗಳ ಈ ಅದ್ಭುತ ಪ್ರದರ್ಶನದಿಂದ ಭಾರತ ತಂಡ, ಫ್ರೈಮ್‌ ಮಿನಿಸ್ಟರ್‌ ಇಲೆವೆನ್‌ ಮೊತ್ತವಾದ 240 ರನ್‌ಗಳನ್ನು ಸುಲಭವಾಗಿ ದಾಟಿತು.

IND vs AUS: ದ್ವಿತೀಯ ಟೆಸ್ಟ್‌ಗೆ ಭಾರತ ಆಡುವ ಬಳಗದ ಆಯ್ಕೆಯೇ ಜಟಿಲ

ಬೌಲಿಂಗ್‌ನಲ್ಲಿ ಮಿಂಚಿದ ಹರ್ಷಿತ್ ರಾಣಾ

ಪಿಎಂ ಇಲೆವೆನ್ ವಿರುದ್ಧದ ಈ ಅಭ್ಯಾಸ ಪಂದ್ಯದಲ್ಲಿ ಟೀಮ್‌ ಇಂಡಿಯಾ ಪರ ಯುವ ವೇಗಿ ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಮ್ಯಾಜಿಕ್ ಮಾಡಿದರು. ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ ಪರ ಹರ್ಷಿತ್ ರಾಣಾ 6 ಓವರ್‌ಗಳಲ್ಲಿ 44 ರನ್ ನೀಡಿ 4 ವಿಕೆಟ್ ಪಡೆದರು. ಹರ್ಷಿತ್ ಹೊರತಾಗಿ ಆಕಾಶದೀಪ್ ಸಿಂಗ್ ಕೂಡ ತಮ್ಮ ಖಾತೆಯಲ್ಲಿ ಎರಡು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಪ್ರಸಿಧ್‌ ಕೃಷ್ಣ, ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು. ವಿರಾಟ್ ಕೊಹ್ಲಿ ಮತ್ತು ಜಸ್‌ಪ್ರೀತ್ ಬುಮ್ರಾ ಅವರಂತಹ ಆಟಗಾರರು ಗುಲಾಬಿ ಚೆಂಡಿನೊಂದಿಗೆ ಈ ಅಭ್ಯಾಸ ಪಂದ್ಯಕ್ಕೆ ಮೈದಾನಕ್ಕಿಳಿದಿರಲಿಲ್ಲ.‌