ಹೈದರಾಬಾದ್: ಕನ್ನಡಿಗರ ನೆಚ್ಚಿನ ತಂಡವಾದ ಬೆಂಗಳೂರು ಬುಲ್ಸ್(Bengaluru Bulls) 11ನೇ ಪ್ರೊ ಕಬಡ್ಡಿ(Pro Kabaddi) ಆವೃತ್ತಿಯಲ್ಲಿ ಮತ್ತೆ ಸೋಲು ಕಂಡಿದೆ. ಭಾನುವಾರ ರಾತ್ರಿ ನಡೆದ ದ್ವಿತೀಯ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್(Gujarat Giants) ವಿರುದ್ಧದ ಪಂದ್ಯದಲ್ಲಿ 32-36 ಅಂತರದಿಂದ ಸೋಲಿಗೆ ತುತ್ತಾಯಿತು. ಇದು ಬುಲ್ಸ್‌ಗೆ ಎದುರಾದ ಸತತ 2ನೇ ಸೋಲು. ಮೊದಲ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ವಿರುದ್ಧ ಸೋಲು ಕಂಡಿತ್ತು.
ಪಂದ್ಯ ಆರಂಭದಲ್ಲಿ ಉತ್ತಮ ಅಂಕ ಗಳಿಸಿಸುತ್ತಾ ಹಿಡಿತ ಸಾಧಿಸಿದ್ದ ಬುಲ್ಸ್, ದ್ವಿತೀಯಾರ್ಧದಲ್ಲಿ ಹಿನ್ನೆಡೆ ಅನುಭವಿಸುತ್ತ ಹೋಯಿತು. ಗುಜರಾತ್ ಪರ ರೈಡರ್ ಪ್ರತೀಕ್ ದಹಿಯಾ ಸರ್ವಾಧಿಕ 8 ಅಂಕ ಗಳಿಸಿದರೆ, ಬುಲ್ಸ್ ಪರ ನಾಯಕ ಪರ್ದೀಪ್ ನರ್ವಾಲ್ 9 ಅಂಕ, ಅಜಿಂಕ್ಯಾ ಪವಾರ್ 7 ಅಂಕ ತಂದಿತ್ತರು. ಡೆಫೆಂಡಿಂಗ್ ವಿಭಾಗದಲ್ಲಿ ಮಾಡಿದ ಕೆಲ ಎಡವಟ್ಟಿನಿಂದ ಬುಲ್ಸ್ ಸೋಲು ಕಂಡಿತು. ದಿನದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಜೈಪುರ್ ಪಿಂಕ್ ಪ್ಯಾಂಥರ್ 39-34 ಅಂತರದ ಜಯ ಗಳಿಸಿತು. ಬುಲ್ಸ್ ತನ್ನ ಮುಂದಿನ ಪಂದ್ಯವನ್ನು ನಾಳೆ (ಮಂಗಳವಾರ) ಆಡಲಿದೆ. ಎದುರಾಳಿ ಯುಪಿ ಯೋಧಾಸ್.
ಇಂದು ನಡೆಯುವ ಮೊದಲ ಪಂದ್ಯದಲ್ಲಿ ಯುಪಿ ಯೋಧಾಸ್ ಮತ್ತು ದಬಾಂಗ್ ಡೆಲ್ಲಿ ಮುಖಾಮುಖಿಯಾದರೆ, ದಿನ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತಂಡ ಪಾಟ್ನಾ ತಂಡವನ್ನು ಎದುರಿಸಲಿದೆ. ಯೋಧಾಸ್ ಮತ್ತು ಪಾಟ್ನಾ ತಂಡಕ್ಕೆ ಇದು ಮೊದಲ ಪಂದ್ಯವಾಗಿದೆ. ಪುಣೇರಿ ಮತ್ತು ಡೆಲ್ಲಿ ಈಗಾಗಲೇ ಆಡಿದ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದೆ. ಇದು ಇತ್ತಂಡಗಳಿಗೂ 2ನೇ ಪಂದ್ಯವಾಗಿದೆ.
ಇದನ್ನೂ ಓದಿ IND vs NZ: ಮೂರು ಗಂಟೆ ಹೊರತುಪಡಿಸಿ ನಾವು ಉತ್ತಮ ಟೆಸ್ಟ್ ಆಡಿದ್ದೇವೆ; ರೋಹಿತ್ ಪ್ರತಿಕ್ರಿಯೆ
ಟೀಮ್ ಇಂಡಿಯಾ ಸೇರಿದ ವಾಷಿಂಗ್ಟನ್ ಸುಂದರ್
ನ್ಯೂಜಿಲ್ಯಾಂಡ್(IND vs NZ) ವಿರುದ್ಧದ ಮೊದಲ ಪಂದ್ಯ ಸೋತ ಬೆನ್ನಲ್ಲೇ ಭಾರತ ತಂಡ ಉಳಿದಿರುವ ಎರಡು ಟೆಸ್ಟ್ ಪಂದ್ಯಗಳಿಗೆ ತಂಡದಲ್ಲಿ ಕೆಲ ಬದಲಾವಣೆ ಮಾಡಿದೆ. ಚೆನ್ನೈಯ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸರ್ಪಡೆಗೊಳಿಸಲಾಗಿದೆ. ವಾಷಿಂಗ್ಟನ್ ಸುಂದರ್(washington sundar) ಅವರು ಎರಡನೇ ಟೆಸ್ಟ್‌ಗೆ ಮುಂಚಿತವಾಗಿ ಪುಣೆಯಲ್ಲಿ ತಂಡದೊಂದಿಗೆ ಸೇರಿಕೊಳ್ಳುತ್ತಾರೆ ಎಂದು ಬಿಸಿಸಿಐ(BCCI) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ವಿರುದ್ಧ ನಡೆದ ಪಂದ್ಯದಲ್ಲಿ ತಮಿಳುನಾಡು ಪರ 25 ರ ಹರೆಯದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ 152 ರನ್ ಚಚ್ಚಿದ್ದರು. ರವೀಂದ್ರ ಜಡೇಜಾ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸಂಪೂರ್ಣ ವಿಫಲರಾಗಿದ್ದರು. ಹೀಗಾಗಿ ಅವರನ್ನು ದ್ವಿತೀಯ ಟೆಸ್ಟ್‌ನಿಂದ ಹೊರಗಿಟ್ಟು ಅವರ ಸ್ಥಾನಕ್ಕೆ ಸುಂದರ್ ಅವರನ್ನು ಆಡಿಸಿದರೂ ಅಚ್ಚರಿಯಿಲ್ಲ. ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 24 ರಿಂದ ಪುಣೆಯಲ್ಲಿ ಆರಂಭವಾಗಲಿದೆ.