ನವದೆಹಲಿ: ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಅವರಿಗೆ ಯುಕೆ ವೀಸಾ ದೊರೆತಿದೆ.
ಅವರು ಬರ್ಮಿಂಗ್‌ಹ್ಯಾಂನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಪೂರ್ವಭಾವಿಯಾಗಿ ಅಮೆರಿಕದಲ್ಲಿ ತರಬೇತಿ ಪಡೆಯಲಿದ್ದಾರೆ. ಆದ್ದರಿಂದ ತರಬೇತಿಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ.
ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅಮೆರಿಕದಿಂದ ನೇರವಾಗಿ ಇಂಗ್ಲೆಂಡ್‌ಗೆ ತೆರಳಬೇಕಿತ್ತು. ಅಮೆರಿಕ ದಲ್ಲಿದ್ದುಕೊಂಡು ಯುಕೆ ವೀಸಾದ ಪ್ರಕ್ರಿಯೆ ಪೂರ್ಣಗೊಳಿಸುವುದು ಕಷ್ಟವಾಗಿತ್ತು. ಇದೀಗ ಯುಕೆ ವೀಸಾ ದೊರೆತಿರುವುದರಿಂದ ಅಮೆರಿಕಕ್ಕೆ ಪ್ರಯಾಣಿಸ ಲಿದ್ದಾರೆ’ ಎಂದು ಭಾರತ ಕ್ರೀಡಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
28 ವರ್ಷದ ಬಜರಂಗ್ ಅವರು ಅಮೆರಿಕದ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯಲು ಕಳೆದ ತಿಂಗಳಲ್ಲೇ ತೆರಳ ಬೇಕಿತ್ತು. ಆದರೆ ವೀಸಾ ದೊರೆಯುವುದು ತಡವಾದ್ದರಿಂದ ಪ್ರಯಾಣ ಮುಂದೂಡಿದ್ದರು.
ಬಜರಂಗ್ ಮತ್ತು ದೀಪಕ್ ಪೂನಿಯಾ ಇನ್ನೆರಡು ದಿನಗಳಲ್ಲಿ ಅಮೆರಿಕಕ್ಕೆ ತೆರಳಲಿದ್ದು, ಜು.30ರ ವರೆಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ಬರ್ಮಿಂಗ್‌ಹ್ಯಾಂಗೆ ಪ್ರಯಾಣಿಸಲಿದ್ದಾರೆ. ಬಜರಂಗ್ 2018ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದರು.