Sunday, 15th December 2024

ಒಲಿಂಪಿಕ್-2020ಕ್ಕೆ ಇಂದು ಸಂಜೆ ತೆರೆ, ಧ್ವಜ ಹೊತ್ತು ಸಾಗಲಿದ್ದಾರೆ ಪುನಿಯಾ

ಟೋಕಿಯೊ: ಒಲಿಂಪಿಕ್-2020ಕ್ಕೆ ಭಾನುವಾರ ಸಾಯಂಕಾಲ ತೆರೆ ಬೀಳಲಿದೆ. ಟೋಕಿಯೊದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ ನಡೆಯಲಿರುವ ವರ್ಣ ರಂಜಿತ ಸಮಾರಂಭದಲ್ಲಿ ಮುಕ್ತಾಯ ಸಮಾರಂಭ ನಡೆಯ ಲಿದೆ.

ಭಾರತದ ಪರ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿರುವ ಬಜರಂಗ್ ಪುನಿಯಾ ಧ್ವಜ ಹೊತ್ತು ಸಾಗಲಿದ್ದಾರೆ. ವರ್ಣರಂಜಿತ ಸಮಾರಂಭದಲ್ಲಿ ಕೋವಿಡ್-19 ನಿರ್ಬಂಧ ಗಳೊಂದಿಗೆ ಹಲವು ಪ್ರದರ್ಶನಗಳು ನೆರವೇರಲಿವೆ. ಕಳೆದ 17 ದಿನಗಳಲ್ಲಿ ಟೋಕಿಯೊದ ರಾಷ್ಟ್ರೀಯ ಕ್ರೀಡಾಂಗಣ ವೇದಿಕೆ ಹಲವು ಕ್ರೀಡಾ ಮೆರುಗು, ಪದಕ ಗಳನ್ನು ಗೆದ್ದು ಹೆಮ್ಮೆಯಿಂದ ಬೀಗಿದ ಕ್ರೀಡಾಪಟುಗಳ ಆನಂದ ಭಾಷ್ಪ, ಪದಕದಿಂದ ವಂಚಿತರಾದ ಕ್ರೀಡಾ ಪಟುಗಳ ಕಣ್ಣೀರಿಗೆ ವೇದಿಕೆಯಾಗಿದೆ.

ಈ ಬಾರಿ ಹಲವು ತೃತೀಯ ಲಿಂಗಿಗಳು ಪ್ರವೇಶ ಪಡೆದಿದ್ದರು. ಕೋವಿಡ್-19 ಕಾರಣದಿಂದ ಕಳೆದ ವರ್ಷ ನಡೆಯಬೇಕಿದ್ದ ಒಲಿಂಪಿಕ್ ಗೇಮ್ ನ್ನು ಈ ವರ್ಷಕ್ಕೆ ಮುಂದೂಡಲಾಗಿತ್ತು. ಈ ಬಾರಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ 17 ದಿನಗಳ ಕ್ರೀಡಾ ಚಟುವಟಿಕೆ ಮುಕ್ತಾಯವಾಗುತ್ತಿದೆ.

ಕೊನೆಯ ದಿನ ಇಂದು ಪುರುಷರ ಮ್ಯಾರಥಾನ್ ಫೈನಲ್, ಮಹಿಳಾ ರಿದಮಿಕ್ ಜಿಮ್ನಾಸ್ಟಿಕ್ಸ್ ಮತ್ತು ಮಹಿಳಾ ಬಾಸ್ಕೆಟ್‌ಬಾಲ್ ಪದಕ ಸುತ್ತಿನ ಪಂದ್ಯ ನಡೆಯು ತ್ತಿದೆ. ಹ್ಯಾಂಡ್‌ಬಾಲ್, ಬಾಕ್ಸಿಂಗ್, ಟ್ರ್ಯಾಕ್ ಸೈಕ್ಲಿಂಗ್, ವಾಟರ್ ಪೋಲೋ ಮತ್ತು ವಾಲಿಬಾಲ್‌ಗಾಗಿ ಪದಕ ಪಂದ್ಯಗಳನ್ನು ಆಡಲಾಗುತ್ತದೆ.

ಮುಂದಿನ ಆತಿಥ್ಯ ಫ್ರಾನ್ಸ್ : ಸಮಾರಂಭದಲ್ಲಿ ಒಲಿಂಪಿಕ್ಸ್‌ ಧ್ವಜವನ್ನು 2024ರಲ್ಲಿ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವ ಫ್ರಾನ್ಸ್‌ಗೆ ಹಸ್ತಾಂತರಿಸಲಾಗುತ್ತದೆ. ಇದೇ ತಿಂಗಳು 24ರಿಂದ ಪ್ಯಾರಾಲಿಂಪಿಕ್ಸ್‌ ಆರಂಭಗೊಳ್ಳಲಿದ್ದು, ಆ ಕ್ರೀಡಾಕೂಟಕ್ಕೂ ಟೋಕಿಯೋ ಆತಿಥ್ಯ ನೀಡಲಿದೆ. ಸೆಪ್ಟೆಂಬರ್ 5ಕ್ಕೆ ಪ್ಯಾರಾಲಿಂಪಿಕ್ಸ್‌ ಮುಕ್ತಾಯ ಗೊಳ್ಳಲಿದೆ. ಭಾರತ ಈ ಬಾರಿಯ ಒಲಿಂಪಿಕ್ ನಲ್ಲಿ ಏಳು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.