ಶಾರ್ಜಾ: ಶಾರ್ಜಾದಲ್ಲಿ ಪಂಜಾಬ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ನ್ನು 5 ವಿಕೆಟ್ ಗಳಿಂದ ಮಣಿಸಿದೆ.
ಪಂಜಾಬ್ ತಂಡದ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ (55 ಎಸೆತಗಳಲ್ಲಿ 67 ರನ್) ಹಾಗೂ ಮಯಾಂಕ್ ಅಗರ್ವಾಲ್ (27 ಎಸೆತಗಳಲ್ಲಿ 40 ರನ್ ಗಳನ್ನು ) ತಂಡಕ್ಕೆ ಉತ್ತಮ ಆರಂಭ ನೀಡಿದರು. ಗೆಲ್ಲಲು 166 ರನ್ ಗುರಿ ಪಡೆದ ಪಂಜಾಬ್ 19.3 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ168 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ರಾಹುಲ್(67) ಹಾಗೂ ಮಯಾಂಕ್ ಅಗರ್ವಾಲ್(40) ಮೊದಲ ವಿಕೆಟ್ ಗೆ 70 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಮಯಾಂಕ್ ನಿರ್ಗಮನದ ಬಳಿಕ ಬಂದ ನಿಕೋ ಲಸ್ ಪೂರನ್(12), ಏಡೆನ್ ಮರ್ಕರಮ್(18)ದೀಪಕ್ ಹೂಡ (3)ಬೇಗನೆ ಔಟಾದರು. ಶಾರೂಖ್ ಖಾನ್ (ಔಟಾಗದೆ 22) ಸಿಕ್ಸರ್ ಸಿಡಿಸುವ ಮೂಲಕ ಪಂಜಾಬ್ ಗೆ ಗೆಲುವು ತಂದರು. ವರುಣ್ ಚಕ್ರವರ್ತಿ(2-24) ಯಶಸ್ವಿ ಬೌಲರ್ ಎನಿಸಿಕೊಂಡರು.
ಆರಂಭಿಕ ಬ್ಯಾಟ್ಸ್ ಮನ್ ವೆಂಕಟೇಶ್ ಅಯ್ಯರ್ (67, 49 ಎಸೆತ, 9 ಬೌಂಡರಿ, 1 ಸಿಕ್ಸರ್)ಅರ್ಧ ಶತಕದ ಕೊಡುಗೆಯ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡದ ಗೆಲುವಿಗೆ 166 ರನ್ ಗುರಿ ನೀಡಿತು.
ರಾಹುಲ್ ತ್ರಿಪಾಠಿ(34), ನಿತಿಶ್ ರಾಣಾ(31)ಎರಡಂಕೆಯ ಸ್ಕೋರ್ ಗಳಿಸಿದರು. ವೆಂಕಟೇಶ್ ಅಯ್ಯರ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ (7)ಬೇಗನೆ ವಿಕೆಟ್ ಒಪ್ಪಿಸಿದರು. ಆಗ ರಾಹುಲ್ ಜೊತೆ ಕೈಜೋಡಿಸಿದ ವೆಂಕಟೇಶ್ 2ನೇ ವಿಕೆಟ್ ಜೊತೆಯಾಟದಲ್ಲಿ 72 ರನ್ ಸೇರಿಸಿ ತಂಡವನ್ನು ಆಧರಿಸಿ ದರು. ಅರ್ಷದೀಪ್ ಸಿಂಗ್(3-32) ಹಾಗೂ ರವಿ ಬಿಷ್ನೋಯ್(2-22)ಐದು ವಿಕೆಟ್ ಗಳನ್ನು ಹಂಚಿಕೊಂಡರು.