Thursday, 12th December 2024

ಸಾಂಘಿಕ ಪ್ರದರ್ಶನ: ಪಂಜಾಬ್‌ ಕಿಂಗ್ಸ್’ಗೆ ಭರ್ಜರಿ ಜಯ

ಚೆನ್ನೈ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ಪಂಜಾಬ್ ಕಿಂಗ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ಶುಕ್ರವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಸತತ ಮೂರು ಸೋಲುಗಳೊಂದಿಗೆ ಮುಖಭಂಗ ಅನುಭವಿಸಿರುವ ಕೆ.ಎಲ್. ರಾಹುಲ್ ಪಡೆ, ಕೊನೆಗೂ ಗೆಲುವಿನ ಹಾದಿಗೆ ಮರಳಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸತತ ಎರಡನೇ ಸೋಲಿಗೆ ಶರಣಾಗಿದೆ.

ಮೊದಲು ಪಂಜಾಬ್ ಸಾಂಘಿಕ ದಾಳಿಗೆ ತತ್ತರಿಸಿದ ಮುಂಬೈ, ನಾಯಕ ರೋಹಿತ್ ಶರ್ಮಾ ಅರ್ಧಶತಕದ (63) ಹೊರತಾಗಿಯೂ ಆರು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಮಯಂಕ್ ಅಗರವಾಲ್ (25) ಹಾಗೂ ಕ್ರಿಸ್ ಗೇಲ್ (43*) ಜೊತೆಗೆ ತಲಾ ಅರ್ಧಶತಕಗಳ ಜೊತೆಯಾಟ ನೀಡಿ ನಾಯಕನ ಇನ್ನಿಂಗ್ಸ್ ಕಟ್ಟಿದ ಕೆ.ಎಲ್. ರಾಹುಲ್, ಸ್ವತಃ ಆಕರ್ಷಕ ಫಿಫ್ಟಿ (60*) ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ 17.4 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕದ (63) ಹೊರತಾಗಿಯೂ ಚೆನ್ನೈನ ಸವಾಲಿನ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿರುವ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 131 ರನ್ ಗಳಿಸ ಲಷ್ಟೇ ಶಕ್ತವಾಗಿತ್ತು.

ನಾಯಕನ ಆಟವಾಡಿದ ರೋಹಿತ್ 52 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 63 ರನ್ ಗಳಿಸಿದರು. ಅಲ್ಲದೆ ಸೂರ್ಯಕುಮಾರ್ ಯಾದವ್ (33) ಜೊತೆಗೆ ಮೂರನೇ ವಿಕೆಟ್‌ಗೆ 79 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು.

ಪಂಜಾಬ್ ಪರ ಪ್ರಸಕ್ತ ಸಾಲಿನಲ್ಲಿ ಜೊಚ್ಚಲ ಪಂದ್ಯವನ್ನಾಡುತ್ತಿರುವ ರವಿ ಬಿಶ್ನೋಯ್ 21 ರನ್ ತೆತ್ತು ಎರಡು ವಿಕೆಟ್ ಕಿತ್ತು ಮಿಂಚಿದರು. ಮೊಹಮ್ಮದ್ ಶಮಿ ಎರಡು ವಿಕೆಟ್ ಪಡೆದು ಮುಂಬೈ ಓಟಕ್ಕೆ ಕಡಿವಾಣ ಹಾಕಿದರು.