Thursday, 21st November 2024

R Ashwin: ಶೇನ್‌ ವಾರ್ನ್‌ ದಾಖಲೆ ಸರಿಗಟ್ಟಿದ ಆರ್‌.ಅಶ್ವಿನ್‌

R Ashwin

ಚೆನ್ನೈ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಶತಕ ಹಾಗೂ 6 ವಿಕೆಟ್‌ ಕಿತ್ತು ಮಿಂಚಿದ ಹಿರಿಯ ಸ್ಪಿನ್ನರ್‌ ಆರ್‌.ಅಶ್ವಿನ್‌(R Ashwin) ಆಸ್ಟ್ರೇಲಿಯಾದ ಮಾಜಿ ಆಟಗಾರ, ದಿವಂಗತ ಶೇನ್‌ ವಾರ್ನ್‌(Shane Warne) ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 5 ವಿಕೆಟ್‌ ಗೊಂಚಲು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ 2ನೇ ಸ್ಥಾನಕ್ಕೇರಿದ್ದಾರೆ. ವಾರ್ನ್‌ ಮತ್ತು ಅಶ್ವಿನ್‌ 37 ಬಾರಿ ಈ ಸಾಧನೆಗೈದಿದ್ದಾರೆ. ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಅವರು 67 ಬಾರಿ 5 ವಿಕೆಟ್‌ ಗೊಂಚಲು ಪಡೆದಿದ್ದಾರೆ.

ಶೇನ್‌ ವಾರ್ನ್‌ ಅವರು 37 ಐದು ವಿಕೆಟ್‌ ಗೊಂಚಲನ್ನು 145 ಇನಿಂಗ್ಸ್‌ ಮೂಲಕ ಮಾಡಿದರೆ, ಅಶ್ವಿನ್‌ 101 ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ನಿರ್ಮಿಸಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ವಿಕೆಟ್‌ ಪಡೆಯಲು ವಿಫಲವಾಗಿದ್ದ ಅಶ್ವಿನ್‌, ದ್ವಿತೀಯ ಇನಿಂಗ್ಸ್‌ನಲ್ಲಿ ತಮ್ಮ ಎಲ್ಲ ಅನುಭವದೊಂದಿಗೆ ಬೌಲಿಂಗ್‌ ದಾಳಿ ನಡೆಸಿ ಬಾಂಗ್ಲಾ ಬ್ಯಾಟರ್‌ಗಳನ್ನು ತರಗೆಲೆಯಂತೆ ಉದುರಿಸಿದರು. 21 ಓವರ್‌ ಬೌಲಿಂಗ್‌ ನಡೆಸಿ 88 ರನ್‌ ವೆಚ್ಚದಲ್ಲಿ 6 ವಿಕೆಟ್‌ ಕಡೆವಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದರು. ಒಂದೇ ಮೈದಾನದಲ್ಲಿ 2 ಶತಕ ಹಾಗೂ ಮೂರಕ್ಕಿಂತ ಹೆಚ್ಚು ಬಾರಿ 5 ವಿಕೆಟ್ ಪಡೆದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆಯನ್ನು ಆರ್​. ಅಶ್ವಿನ್​ ತಮ್ಮದಾಗಿಸಿಕೊಂಡಿದ್ದರು. 38 ರ ಹರಯದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 20-ಪ್ಲಸ್ ಅರ್ಧಶತಕಗಳ ಜತೆಗೆ 31 ಪ್ಲಸ್ ಐದು ವಿಕೆಟ್‌ಗಳನ್ನು ದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ IND vs BAN: ದ್ವಿತೀಯ ಟೆಸ್ಟ್‌ಗೆ ಭಾರತ ತಂಡ ಪ್ರಕಟ; ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಅಶ್ವಿನ್‌ ಅವರ 11ನೇ 5 ವಿಕೆಟ್‌ ಗೊಂಚಲು ಇದಾಗಿದೆ. ಈ ಸಾಧನೆಯೊಂದಿಗೆ ಅವರು ಅಗ್ರಸ್ಥಾನಕ್ಕೇರಿದ್ದಾರೆ. ಇದುವರೆಗೂ ಈ ದಾಖಲೆ ಆಸ್ಟ್ರೇಲಿಯಾದ ನಾಥನ್ ಲಿಯಾನ್ ಹೆಸರಿನಲ್ಲಿತ್ತು. ಲಿಯಾನ್ 10 ಬಾರಿ 5 ವಿಕೆಟ್‌ ಕಿತ್ತಿದ್ದರು. ಜಸ್‌ಪ್ರೀತ್‌ ಬುಮ್ರಾ 7 ಬಾರಿ 5 ವಿಕೆಟ್‌ ಪಡೆದು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ವಿಶ್ವ ಟೆಸ್ಟ್‌ನಲ್ಲಿ ಅತಿ ಹೆಚ್ಚು 5 ವಿಕೆಟ್‌ ಕಿತ್ತ ಬೌಲರ್‌ಗಳು

ಆರ್‌.ಅಶ್ವಿನ್‌-11

ನಾಥನ್ ಲಿಯಾನ್-10

ಪ್ಯಾಟ್‌ ಕಮಿನ್ಸ್‌-8

ಜಸ್‌ಪ್ರೀತ್‌ ಬುಮ್ರಾ-7

ಜೋಶ್‌ ಹ್ಯಾಜವುಡ್‌-6

ಟಿಮ್‌ ಸೌಥಿ-6

ಗುರುವಾರ ಆರಂಭಗೊಂಡಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 376 ರನ್‌ ಬಾರಿಸಿತ್ತು. ಜವಾಬಿತ್ತ ಬಾಂಗ್ಲಾದೇಶ ಕೇವಲ 149 ರನ್‌ಗೆ ಸರ್ವಪತನ ಕಂಡಿತ್ತು. ಫಾಲೋಆನ್‌ ಹೇರದ ಭಾರತ ದ್ವಿತೀಯ ಇನಿಂಗ್ಸ್‌ ಬ್ಯಾಟಿಂಗ್‌ ನಡೆಸಿ 4 ವಿಕೆಟ್‌ಗೆ  287 ರನ್‌ ಬಾರಿಸಿ ಡಿಕ್ಲೇರ್‌ ಘೋಷಿಸಿತು. ಗೆಲುವಿಗೆ 515 ರನ್‌ ಪಡೆದ ಬಾಂಗ್ಲಾ 234 ರನ್‌ ಬಾರಿಸಿ ಸೋಲೊಪ್ಪಿಕೊಂಡಿತು.