ಚೆನ್ನೈ: ಟೀಮ್ ಇಂಡಿಯಾದ ಅನುಭವಿ ಹಾಗೂ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್(R Ashwin) ಅವರು ದಾಖಲೆಯೊಂದರ ಸನಿಹದಲ್ಲಿದ್ದಾರೆ. ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್ ಮತ್ತು ನಥನ್ ಲಿಯೋನ್ ದಾಖಲೆ ಮುರಿಯುವ ಅವಕಾಶವಿದೆ.
ಹೌದು, ಅಶ್ವಿನ್ ಬಾಂಗ್ಲಾ ವಿರುದ್ಧ 2 ವಿಕೆಟ್ ಕಿತ್ತರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕೂಟದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ವಿಶ್ವದ 2ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಇನ್ನು 14 ವಿಕೆಟ್ ಪಡೆದರೆ ನಥನ್ ಲಿಯೋನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ. ಸದ್ಯ ಅಶ್ವಿನ್ 35 ಟೆಸ್ಟ್ ಪಂದ್ಯಗಳಲ್ಲಿ 174 ವಿಕೆಟ್ ಪಡೆದಿದ್ದಾರೆ. ಅಗ್ರಸ್ಥಾನಿ ಲಿಯೋನ್ 43 ಟೆಸ್ಟ್ ಪಂದ್ಯಗಳಿಂದ 187 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ಯಾಟ್ ಕಮಿನ್ಸ್ 42 ಟೆಸ್ಟ್ ಪಂದ್ಯ ಪಂದ್ಯಗಳಿಂದ 175 ವಿಕೆಟ್ ಕಿತ್ತಿದ್ದಾರೆ.
ವಿಶ್ವ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಬೌ ಲರ್‌ಗಳು
ನಥನ್ ಲಿಯೋನ್- 187 ವಿಕೆಟ್
ಪ್ಯಾಟ್ ಕಮಿನ್ಸ್-175 ವಿಕೆಟ್
ಆರ್. ಅಶ್ವಿನ್-174 ವಿಕೆಟ್
ಮಿಚೆಲ್ ಸ್ಟಾರ್ಕ್-147 ವಿಕೆಟ್
ಸ್ಟುವರ್ಟ್ ಬ್ರಾಡ್-134 ವಿಕೆಟ್
ಭಾರತ ಪರ ಭರ್ತಿ 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಶ್ವಿನ್ 516 ವಿಕೆಟ್ ಕಿತ್ತು ಭಾರತ ಪರ ಅತ್ಯಧಿಕ ಟೆಸ್ಟ್ ವಿಕೆಟ್ ಪಡೆದ ಬೌಲರ್‌ಗಳ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 619 ವಿಕೆಟ್ ಕಿತ್ತ ಕನ್ನಡಿಗ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ ಅಶ್ವಿನ್ 9ನೇ ಸ್ಥಾನಿಯಾಗಿದ್ದಾರೆ. 800 ವಿಕೆಟ್ ಪಡೆದಿರುವ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ಗೆ ಅಗ್ರಸ್ಥಾನ.
ಇದನ್ನೂ ಓದಿ IND vs BAN: ಚೆನ್ನೈಗೆ ಬಂದಿಳಿದ ಬಾಂಗ್ಲಾ ತಂಡಕ್ಕೆ ಭರ್ಜರಿ ಸ್ವಾಗತ; ಇಲ್ಲಿದೆ ವಿಡಿಯೊ
ಸಿಕ್ಸರ್ ದಾಖಲೆ ಸನಿಹ ಜೈಸ್ವಾಲ್
ಜೈಸ್ವಾಲ್ ಈ ಟೆಸ್ಟ್ ಸರಣಿಯಲ್ಲಿ ಕೇವಲ 8 ಸಿಕ್ಸರ್ ಬಾರಿಸಿದರೆ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಪ್ರಸ್ತುತ ಟೆಸ್ಟ್ ಕ್ರಿಕೆಟ್ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ನ್ಯೂಜಿಲ್ಯಾಂಡ್ ತಂಡದ ಮಾಜಿ ಸ್ಫೋಟಕ ಬ್ಯಾಟರ್, ಹಾಲಿ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿರುವ ಬ್ರೆಂಡನ್ ಮೆಕಲಮ್ ಹೆಸರಿನಲ್ಲಿದೆ. ಮೆಕಲಮ್ 2014 ರಲ್ಲಿ 9 ಟೆಸ್ಟ್ ಪಂದ್ಯಗಳಿಂದ 33 ಸಿಕ್ಸರ್ ಬಾರಿಸಿದ್ದರು. ಸದ್ಯ ಜೈಸ್ವಾಲ್ ಕ್ಯಾಲೆಂಡರ್ ವರ್ಷದಲ್ಲಿ 6 ಟೆಸ್ಟ್ ಪಂದ್ಯಗಳನ್ನಾಡಿ 26 ಸಿಕ್ಸರ್ ಬಾರಿಸಿದ್ದಾರೆ. 8 ಸಿಕ್ಸರ್ ಬಾರಿಸಿದರೆ 10 ವರ್ಷಗಳ ಹಿಂದೆ ಮೆಕಲಮ್ ನಿರ್ಮಿಸಿದ್ದ ದಾಖಲೆ ಪತನಗೊಳ್ಳಲಿದೆ. ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜೈಸ್ವಾಲ್ ಸದ್ಯ 13ನೇ ಸ್ಥಾನಿಯಾಗಿದ್ದಾರೆ. 29 ಸಿಕ್ಸರ್ ಬಾರಿಸಿದ್ದಾರೆ.