Wednesday, 18th December 2024

R Ashwin Retirement: ʻಟೆಸ್ಟ್‌ ಸರಣಿಯ ಬಳಿಕ ನೀಡಬಹುದಿತ್ತುʼ-ಅಶ್ವಿನ್‌ ನಿರ್ಧಾರವನ್ನು ಟೀಕಿಸಿದ ಸುನೀಲ್‌ ಗವಾಸ್ಕರ್‌!

R Ashwin Retirement: 'He could have said after the end of the series'-Sunil Gavaskar criticises timing of spinner's unforeseen call

ನವದೆಹಲಿ: ಆಸ್ಟ್ರೇಲಿಯಾ ಎದುರು ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (R Ashwin Retirement) ಟೆಸ್ಟ್‌ ಸರಣಿ ನಡೆಯುತ್ತಿರುವಾಗಲೇ ಟೀಮ್‌ ಇಂಡಿಯಾ ಸ್ಪಿನ್‌ ಆಲ್‌ರೌಂಡರ್‌ ರವಿಚಂದ್ರನ್‌ ಅಶ್ವಿನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆರ್‌ ಅಶ್ವಿನ್‌ ಅವರ ಈ ಹಠಾತ್‌ ನಿರ್ಧಾರವನ್ನು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಖಂಡಿಸಿದ್ದಾರೆ. ಈ ಟೆಸ್ಟ್‌ ಸರಣಿ ಮುಗಿದ ಬಳಿಕ ಅವರು ನಿವೃತ್ತಿ ಘೋಷಿಸಬಹುದಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯ ಬುಧವಾರ ಡ್ರಾನಲ್ಲಿ ಅಂತ್ಯ ಕಂಡ ಬಳಿಕ ಆರ್‌ ಅಶ್ವಿನ್‌ ಪೋಸ್ಟ್‌ ಮ್ಯಾಚ್‌ ಸುದ್ದಿಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಆ ಮೂಲಕ ತಮ್ಮ ಸಹ ಆಟಗಾರರು, ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್‌ ಅಭಿಮಾನಿಗಳಿಗೆ ಶಾಕ್‌ ನೀಡಿದರು. ಈ ಹಿನ್ನೆಲೆಯಲ್ಲಿ ಆರ್‌ ಅಶ್ವಿನ್‌ಗೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಶುಭ ಹಾರೈಸಿದ್ದಾರೆ.

ಅಂದ ಹಾಗೆ ಬುಧವಾರ ಬೆಳಗ್ಗೆ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ವಿರಾಟ್‌ ಕೊಹ್ಲಿ ಜತೆ ಆರ್‌ ಅಶ್ವಿನ್‌ ಸಂಭಾಷಣೆ ನಡೆಸಿದ್ದರು ಹಾಗೂ ಈ ವೇಳೆ ಕೊಹ್ಲಿ ತಮ್ಮ ಸಹ ಆಟಗಾರನನ್ನು ಅಪ್ಪಕೊಂಡು ಭಾವುಕರಾದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈ ವಿಡಿಯೊದಲ್ಲಿ ಆರ್‌ ಅಶ್ವಿನ್‌ ಭಾವುಕರಾಗಿ ಕಂಡಿದ್ದರು. ಆಶ ಮೂಲಕ ನಿವೃತ್ತಿ ಬಗ್ಗೆ ಸುಳಿವು ನೀಡಿದ್ದರು. ಪೋಸ್ಟ್‌ ಮ್ಯಾಚ್‌ ಸುದ್ದಿ ಗೋಷ್ಢಿಯಲ್ಲಿ ಆರ್‌ ಅಶ್ವಿನ್‌ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದರು.

R Ashwin Retires: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆರ್‌.ಅಶ್ವಿನ್‌ ನಿವೃತ್ತಿ ಘೋಷಣೆ

ಆರ್‌ ಅಶ್ವಿನ್‌ರ ಹಠಾತ್‌ ನಿವೃತ್ತಿ ನಿರ್ಧಾರವನ್ನು ಟೀಕಿಸಿದ ಗವಾಸ್ಕರ್‌

ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಸುನೀಲ್‌ ಗವಾಸ್ಕರ್‌, ಈ ಟೆಸ್ಟ್‌ ಸರಣಿಯ ಬಳಿಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಬಹುದಿತ್ತು ಏಕೆಂದರೆ ತಂಂಡದಲ್ಲಿ ಒಬ್ಬ ಆಟಗಾರ ಕಡಿಮೆಯಾಗಲಿದೆ. ಅಲ್ಲದೆ ಸಿಡ್ನಿ ಟಸ್ಟ್‌ ಪಂದ್ಯದಲ್ಲಿ ಅಶ್ವಿನ್‌ಗೆ ಆಡಲು ಅವಕಾಶ ಸಿಗಬಹುದು. ಇಲ್ಲಿನ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡಲಿದೆ ಎಂದು ಮಾಜಿ ನಾಯಕ ತಿಳಿಸಿದ್ದಾರೆ.

“ನಾನು ಭಾರತ ತಂಡದ ಆಯ್ಕೆಯ ಲಭ್ಯವಿಲ್ಲ ಎಂದು ಈ ಟೆಸ್ಟ್‌ ಸರಣಿಯ ಬಳಿಕ ಆರ್‌ ಅಶ್ವಿನ್‌ ಅವರು ತಿಳಿಸಬೇಕಿತ್ತು. 2014-15ರ ಸಾಲಿನ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಎಂಎಸ್‌ ಧೋನಿ ಕೂಡ ಇದೇ ರೀತಿ ನಿವೃತ್ತಿಯನ್ನು ಘೋಷಿಸಿದ್ದರು. ಇದರಿಂದ ತಂಡದಲ್ಲಿ ಒಬ್ಬ ಆಟಗಾರ ಕಡಿಮೆಯಾಗುತ್ತದೆ. ಒಂದು ಉದ್ದೇಶದಿಂದ ಬಿಸಿಸಿಐ ಆಯ್ಕೆ ಸಮಿತಿ ಹಲವು ಆಟಗಾರರನ್ನು ಆಯ್ಕೆ ಮಾಡಿದೆ. ಒಂದು ವೇಳೆ ತಂಡದಲ್ಲಿ ಯಾರಾದರೂ ಗಾಯಕ್ಕೆ ತುತ್ತಾದರೆ, ಅವರ ಜಾಗಕ್ಕೆ ಮೀಸಲು ಆಟಗಾರರನ್ನು ಪಡೆಯಬಹುದು. ಆದರೆ, ಸಿಡ್ನಿಯಲ್ಲಿನ ಕಂಡೀಷನ್ಸ್‌ ಸ್ಪಿನ್ನರ್‌ಗಳಿಗೆ ನೆರವು ನೀಡಲಿದೆ ಹಾಗೂ ಇಬ್ಬರನ್ನು ಇಲ್ಲಿ ಆಡಿಸಬಹುದು. ಇದು ನಿಮಗೆ ಗೊತ್ತಿರುವುದಿಲ್ಲ. ಅವರು (ಆರ್‌ ಅಶ್ವಿನ್‌) ಕೂಡ ಆಡಬಹುದಿತ್ತು. ಮೆಲ್ಬೋರ್ನ್‌ ಪಿಚ್‌ ಹೇಗಿರಲಿದೆ ಎಂದು ನನಗೆ ಗೊತ್ತಿಲ್ಲ,” ಎಂದು ಸುನೀಲ್‌ ಗವಾಸ್ಕರ್‌ ಹೇಳಿದ್ದಾರೆ.

ಆರ್‌ ಅಶ್ವಿನ್‌ ಸ್ಥಾನಕ್ಕೆ ವಾಷಿಂಗ್ಟನ್‌ ಸುಂದರ್‌

“ಸಾಮಾನ್ಯವಾಗಿ ನೀವು ಈ ಸರಣಿ ಮುಗಿದ ಬಳಿಕ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬಹುದಿತ್ತು. ಆದರೆ, ಸರಣಿಯ ಮಧ್ಯದಲ್ಲಿ ಈ ನಿರ್ಧಾರ ಸರಿಯಾಗಿಲ್ಲ,” ಎಂದು ಬ್ಯಾಟಿಂಗ್‌ ದಿಗ್ಗಜ ತಿಳಿಸಿದ್ದಾರೆ.

“ಆರ್‌ ಅಶ್ವಿನ್‌ ಅವರ ಸ್ಥಾನಕ್ಕೆ ವಾಷಿಂಗ್ಟನ್‌ ಸುಂದರ್‌ ಬರಬಹುದು. ಅಶ್ವಿನ್‌ ಗುರುವಾರ ಭಾರತಕ್ಕೆ ಮರಳಲಿದ್ದಾರೆಂದು ರೋಹಿತ್‌ ಶರ್ಮಾ ತಿಳಿಸಿದ್ದಾರೆ. ಆ ಮೂಲಕ ಆರ್‌ ಅಶ್ವಿನ್‌ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನ ಅಂತ್ಯವಾಗಲಿದೆ. ಅವರು ಒಬ್ಬ ದೊಡ್ಡ ಕ್ರಿಕೆಟಿಗರಾಗಿದ್ದರು,” ಎಂದು ಸುನೀಲ್‌ ಗವಾಸ್ಕರ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: R Ashwin Retires: ಆರ್‌.ಅಶ್ವಿನ್‌ ಕ್ರಿಕೆಟ್‌ ಸಾಧನೆಯ ಇಣುಕು ನೋಟ