Wednesday, 18th December 2024

R Ashwin Retirement: ಅನಿಲ್‌ ಕುಂಬ್ಳೆಯ ದಾಖಲೆ ಮುರಿಯಲ್ಲ ಎಂದಿದ್ದ ಆರ್‌ ಅಶ್ವಿನ್‌!

R Ashwin Retirement: R Ashwin Never Wanted To Break Anil Kumble's Record, Once Revealed His Retirement Plans

ನವದೆಹಲಿ: ಆಸ್ಟ್ರೇಲಿಯಾ ವಿರುದ್ದದ ಮೂರನೇ ಹಾಗೂ ದಿ ಗಬ್ಬಾ ಟೆಸ್ಟ್‌ ಪಂದ್ಯದ ಬಳಿಕ ಭಾರತ ತಂಡದ ಹಿರಿಯ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ (R Ashwin Retirement) ನಿವೃತ್ತಿಯನ್ನು ಘೋಷಿಸಿದ್ದರು. ಈ ಟೆಸ್ಟ್‌ ಸರಣಿಯಲ್ಲಿ ಮೊದಲನೇ ಹಾಗೂ ಮೂರನೇ ಟೆಸ್ಟ್‌ ಪಂದ್ಯಗಳಲ್ಲಿ ಬೆಂಚ್‌ ಕಾದಿದ್ದ ಅಶ್ವಿನ್‌, ಎರಡನೇ ಹಾಗೂ ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ ಆಡಿದ್ದರು.

2011ರಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಶ್ವಿನ್‌, ಇಲ್ಲಿಯತನಕ ಆಡಿದ್ದ 106‌ ಟೆಸ್ಟ್ ಪಂದ್ಯಗಳಿಂದ 537 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ಒಂದು ದಶಕದಲ್ಲಿ ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದ ಅಶ್ವಿನ್‌, ಇನ್ನೂ ಎರಡು ವರ್ಷಗಳ ಕಾಲ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರಿಯಲು ಅವಕಾಶವಿತ್ತು. ಆದರೆ, ಅವರು ಬುಧವಾರ ಹಠಾತ್‌ ವಿದಾಯ ಹೇಳುವ ಮೂಲಕ ಕ್ರಿಕೆಟ್‌ ಲೋಕಕ್ಕೆ ಶಾಕ್‌ ನೀಡಿದ್ದಾರೆ.

ಅಂದ ಹಾಗೆ ಅಶ್ವಿನ್‌ ಅವರು ದಿಡೀರನೆ ನಿವೃತ್ತಿ ಘೋಷಿಸಲು ನಿಖರ ಕಾರಣ ಯಾರಿಗೂ ಗೊತ್ತಿಲ್ಲ ಹಾಗೂ ಈ ಬಗ್ಗೆ ಸ್ವತಃ ಸ್ಪಿನ್‌ ದಿಗ್ಗಜ ಕೂಡ ಬಹಿರಂಗಪಡಿಸಿಲ್ಲ. ಆದರೆ, ಸ್ಪಿನ್‌ ದಂತಕತೆ ಅನಿಲ್‌ ಕುಂಬ್ಳೆ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 619 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ ಎನಿಸಿಕೊಂಡಿದ್ದಾರೆ. ಆರ್‌ ಅಶ್ವಿನ್‌ 537 ವಿಕೆಟ್‌ಗಳ ಮೂಲಕ ಸನಿಹದಲ್ಲಿದ್ದರು. ಆದರೆ, ಅವರು 2017ರಲ್ಲಿ ಸಂದರ್ಶನವೊಂದರಲ್ಲಿ ಅನಿಲ್ ಕುಂಬ್ಳೆ ದಾಖಲೆ ಮುರಿಯಲು ನನಗೆ ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದರು.

ಅನಿಲ್‌ ಕುಂಬ್ಳೆ ದಾಖಲೆ ಮುರಿಯಲ್ಲ ಎಂದಿದ್ದ ಅಶ್ವಿನ್‌

ನಾನು ಅನಿಲ್‌ ಕುಂಬ್ಳೆಗೆ ದೊಡ್ಡ ಅಭಿಮಾನಿ ಹಾಗೂ ಅವರ ದಾಖಲೆಯನ್ನು ಎಂದಿಗೂ ಮುರಿಯುವುದಿಲ್ಲ ಎಂದು ಸ್ಪಷ್ಟವಾಗಿ ಆರ್‌ ಅಶ್ವಿನ್‌ ಈ ಹಿಂದೆ ಹೇಳಿಕೊಂಡಿದ್ದರು.

“ಅನಿಲ್‌ ಕುಂಬ್ಳೆ ದಾಖಲೆಯನ್ನು ನಾನು ಮುರಿಯುವುದಿಲ್ಲ ಏಕೆಂದರೆ ನಾನು ಅವರ ದೊಡ್ಡ ಅಭಿಮಾನಿ. ಅವರು 619 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಒಂದು ವೇಳೆ ನಾನು 618 ವಿಕೆಟ್‌ಗಳನ್ನು ಕಬಳಿಸಿದರೆ ಇದಕ್ಕೆ ಕೃತಜ್ಞನಾಗಿರುತ್ತೇನೆ. ನಾನು 618 ವಿಕೆಟ್‌ಗಳನ್ನು ಕಬಳಿಸಿದರೆ ಅದು ನನ್ನ ಕೊನೆಯ ಟೆಸ್ಟ್‌ ಪಂದ್ಯವಾಗಿರುತ್ತದೆ,” ಎಂದು ಆರ್‌ ಅಶ್ವಿನ್‌ ಅವರು 2017ರಲ್ಲಿ ಗಲ್ಫ್‌ ನ್ಯೂಸ್‌ ಸಂದರ್ಶನದಲ್ಲಿ ತಿಳಿಸಿದ್ದರು.

ಎರಡನೇ ಟೆಸ್ಟ್‌ ಆಡುವಂತೆ ಮನವೋಲಿಸಿದ್ದ ರೋಹಿತ್‌ ಶರ್ಮಾ

ಪರ್ತ್‌ ಟೆಸ್ಟ್‌ನಲ್ಲಿ ಬೆಂಚ್‌ ಕಾದಿದ್ದ ಆರ್‌ ಅಶ್ವಿನ್‌ ಅವರನ್ನು ಅಡಿಲೇಡ್‌ ಟೆಸ್ಟ್‌ ಆಡುವಂತೆ ನಾಯಕ ರೋಹಿತ್‌ ಶರ್ಮಾ ಮನವಿ ಮಾಡಿದ್ದರು. ಆದರೆ ಮೂರನೇ ಟೆಸ್ಟ್‌ ಪಂದ್ಯದಲ್ಲಿಯೂ ಆರ್‌ ಅಶ್ವಿನ್‌ ಅವರನ್ನು ಕೈ ಬಿಡಲಾಗಿತ್ತು. 2011ರ ಐಸಿಸಿ ಏಕದಿನ ವಿಶ್ವಕಪ್‌ ಹಾಗೂ 2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದ ಭಾರತ ತಂಡದಲ್ಲಿ ಆರ್‌ ಅಶ್ವಿನ್‌ ಆಡಿದ್ದರು. ಅವರು 2017ರ ವರೆಗೆ ಭಾರತ ತಂಡದ ಮೂರೂ ಸ್ವರೂಪಗಳಲ್ಲಿ ನಿಯಮಿತವಾಗಿ ಆಡುತ್ತಿದ್ದರು. ಆದರೆ, ವಿರಾಟ್‌ ಕೊಹ್ಲಿ ನಾಯಕನಾದ ಬಳಿಕ ಅಶ್ವಿನ್‌, ವೈಟ್‌ ತಂಡಗಳಲ್ಲಿ ಆಡುವುದು ಅಪರೂಪವಾಯಿತು. ಅಂದ ಹಾಗೆ ಅಶ್ವಿನ್‌ 116 ಏಕದಿನ ಪಂದ್ಯಗಳು ಹಾಗೂ 65 ಟಿ20ಐ ಪಂದ್ಯಗಳನ್ನು ಆಡಿದ್ದಾರೆ.

ಈ ಸುದ್ದಿಯನ್ನು ಓದಿ: R Ashwin Retirement: ʻಟೆಸ್ಟ್‌ ಸರಣಿಯ ಬಳಿಕ ನೀಡಬಹುದಿತ್ತುʼ-ಅಶ್ವಿನ್‌ ನಿರ್ಧಾರವನ್ನು ಟೀಕಿಸಿದ ಸುನೀಲ್‌ ಗವಾಸ್ಕರ್‌!