Wednesday, 18th December 2024

R Ashwin Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರ್‌ ಅಶ್ವಿನ್‌ರ ಟಾಪ್‌ 5 ದಾಖಲೆಗಳು!

R Ashwin Retirement: Top 5 records by Ashwin in international cricket

ನವದೆಹಲಿ: ಭಾರತ ತಂಡದ ಹಿರಿಯ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರು (R Ashwin Retirement) ಬುಧವಾರ (ಅಕ್ಟೋಬರ್‌ 18) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ನಿವತ್ತಿಯನ್ನು ಘೋಷಿಸಿದ್ದರು. ಭಾರತ ಹಾಗೂ ಆಸ್ಟ್ರೇಲಿಯಾ ನಡುವನ ಮೂರನೇ ಟೆಸ್ಟ್‌ ಪಂದ್ಯ ಡ್ರಾ ಆದ ಬಳಿಕ ಪೋಸ್ಟ್‌ ಮ್ಯಾಚ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಆರ್‌ ಅಶ್ವಿನ್‌ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು.

ತಮ್ಮ 14 ವರ್ಷಗಳ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಹಲವು ಬಾರಿ ತಮ್ಮ ವೈಯಕ್ತಿಕ ಪ್ರದರ್ಶನಗಳ ಮೂಲಕ ಭಾರತ ತಂಡವನ್ನು ಗೆಲ್ಲಿಸಿರುವ ಅವರು ಹಲವು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಲ್ಲದೆ ಒಮ್ಮೆ ಏಕದಿನ ವಿಶ್ವಕಪ್‌ ಹಾಗೂ ಒಮ್ಮೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ಗೆದಿದ್ದರು. ಅಂದ ಹಾಗೆ ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಆರ್‌ ಅಶ್ವಿನ್‌ ಕೂಡ ಒಬ್ಬರಾಗಿದ್ದಾರೆ.

R Ashwin Retires: ಆರ್‌.ಅಶ್ವಿನ್‌ ಕ್ರಿಕೆಟ್‌ ಸಾಧನೆಯ ಇಣುಕು ನೋಟ

537 ಟೆಸ್ಟ್‌ ವಿಕೆಟ್‌ಗಳು

ಆರ್‌ ಅಶ್ವಿನ್‌ ಅವರು ಭಾರತದ ಪರ ಅತಿ ಹೆಚ್ಚು ಟೆಸ್ಟ್‌ ವಿಕೆಟ್‌ಗಳನ್ನು ಕಬಳಿಸಿದ ಎರಡನೇ ಬೌಲರ್‌ ಎನಿಸಿಕೊಂಡಿದ್ದಾರೆ. ಅವರು 537 ಟೆಸ್ಟ್‌ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ (619) ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.

ವೇಗವಾಗಿ 500 ಟೆಸ್ಟ್‌ ವಿಕೆಟ್‌ ಕಿತ್ತ ಎರಡನೇ ಬೌಲರ್‌

ಆರ್‌ ಅಶ್ವಿನ್‌ ಅವರು ವೇಗವಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳನ್ನು ಕಬಳಿಸಿದ ಎರಡನೇ ಬೌಲರ್‌ ಆಗಿದ್ದಾರೆ. ಅವರು ಕಳೆದ ಫೆಬ್ರವರಿಯಲ್ಲಿ 98 ಟೆಸ್ಟ್‌ ಪಂದ್ಯಗಳಿಂದ 500 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದರು. ಇದರ ಜೊತೆಗೆ ವೇಗವಾಗಿ 250, 300, ಹಾಗೂ 350 ಟೆಸ್ಟ್‌ ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ ಎಂಬ ದಾಖಲೆ ಕೂಡ ಅಶ್ವಿನ್‌ ಹೆಸರಿನಲ್ಲಿದೆ.

ಬೌಲ್ಡ್‌ ಅಥವಾ ಎಲ್‌ಬಿಡಬ್ಲ್ಯು ಮೂಲಕ 226 ವಿಕೆಟ್‌ಗಳು

ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರ್‌ ಅಶ್ವಿನ್‌ ಅವರು 226 ವಿಕೆಟ್‌ಗಳನ್ನು ಬೌಲ್ಡ್‌ ಅಥವಾ ಎಲ್‌ಬಿಡಬ್ಲ್ಯು ಮೂಲಕ ಕಬಳಿಸಿದ್ದಾರೆ. ಅವರು ಆ ಮೂಲಕ ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್‌ ಆಗಿದ್ದಾರೆ.

R Ashwin Retires: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆರ್‌.ಅಶ್ವಿನ್‌ ನಿವೃತ್ತಿ ಘೋಷಣೆ

ಶತಕ ಹಾಗೂ 5 ವಿಕೆಟ್‌ ಸಾಧನೆ

ಆರ್‌ ಅಶ್ವಿನ್‌ ಅವರು ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ನಾಲ್ಕು ಬಾರಿ ಶತಕ ಹಾಗೂ 5 ವಿಕೆಟ್‌ ಸಾಧನೆ ಮಾಡಿದ್ದಾರೆ. ಆ ಮೂಲಕ ಇಂಗ್ಲೆಂಡ್‌ ಮಾಜಿ ನಾಯಕ ಇಯಾನ್‌ ಬೋಥಮ್‌ (5) ಅವರ ಬಳಿಕ ಈ ಸಾಧನೆ ಮಾಡಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

ಡಬ್ಲ್ಯುಟಿಸಿಯಲ್ಲಿ 100 ವಿಕೆಟ್‌ ಸಾಧನೆ

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ 100 ವಿಕೆಟ್‌ಗಳನ್ನು ಕಬಳಿಸಿದ ಮೊದಲ ಬೌಲರ್‌ ಎಂಬ ದಾಖಲೆ ಕೂಡ ಆರ್‌ ಅಶ್ವಿನ್‌ ಅವರ ಹೆಸರಿನಲ್ಲಿದೆ. 2021-2023ರ ಸಾಲಿನ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ (2022) ಅವರು ಈ ಸಾಧನೆ ಮಾಡಿದ್ದರು.

ಡಬ್ಲ್ಯುಟಿಸಿಯಲ್ಲಿ 195 ವಿಕೆಟ್‌ಗಳು

ಮೂರೂ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಆರ್‌ ಅಶ್ವಿನ್‌ ಅವರು 195 ವಿಕೆಟ್‌ಗಳನು ಕಬಳಿಸಿದ್ದಾರೆ. ಆ ಮೂಲಕ ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ ಎನಿಸಿಕೊಂಡಿದ್ದಾರೆ.

ವಿದಾಯದ ಬಗ್ಗೆ ಆರ್‌ ಅಶ್ವಿನ್‌ ಭಾವನಾತ್ಮಕ ಮಾತು

ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯ ಡ್ರಾ ಆದ ಬಳಿಕ ಆರ್‌ ಅಶ್ವಿನ್‌ ಅವರು ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಭಾವುಕರಾಗಿ ಮಾತನಾಡಿದರು.ತಮ್ಮ ಸಹ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಬಗ್ಗೆ ವಿಶೇಷ ಪದಗಳಿಂದ ಗುಣಗಾನ ಮಾಡಿದರು.

“ಪ್ರಾಮಾಣಿಕವಾಗಿ ನಿವೃತ್ತಿಯ ಬಗ್ಗೆ ಹೇಗೆ ಹೋಗಬೇಕೆಂದು ನನಗೆ ಗೊತ್ತಿಲ್ಲ. ತಂಡದ ಮುಂದೆ ಈ ವಿಷಯವನ್ನು ಹೇಳುವುದು ಸುಲಭ. ಆದರೆ, ನಾನು ಇದನ್ನು ಪ್ರದರ್ಶನವನ್ನು ಮಾಡುತ್ತಿಲ್ಲ. ಇದು ನನ್ನ ಪಾಲಿಗೆ ಅತ್ಯಂತ ಭಾವನಾತ್ಮಕ ಕ್ಷಭವಾಗಿದೆ. ಇದು 2011-12ರ ಸಾಲಿನಲ್ಲಿ ನನ್ನ ಮೊದಲ ಆಸ್ಟ್ರೇಲಿಯಾ ಪ್ರವಾಸದ ರೀತಿ ನನಗೆ ಭಾಸವಾಗುತ್ತಿದೆ. ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌ ಅವರು ಕೂಡ ತಂಡವನ್ನು ಬಿಟ್ಟು ಹೋಗಿದ್ದಾರೆ. ಆದರೆ, ನನ್ನನ್ನು ನಂಬಿ ಪ್ರತಿಯೊಬ್ಬರಿಗೂ ಸಮಯ ಬಂದೇ ಬರುತ್ತದೆ. ಇಂದು ನಿಜವಾಗಿಯೂ ನನ್ನ ದಿನವಾಗಿದೆ. ಇದನ್ನು ನಾನು ಆನಂದಿಸಿದ್ದೇನೆ. ಇದನ್ನು ಸಂಪೂರ್ಣವಾಗಿ ಆನಂದಿಸಿದ್ದೇನೆ,” ಎಂದು ಆರ್‌ ಅಶ್ವಿನ್‌ ಅವರ ಬಾವುಕ ಮಾತುಗಳ ವಿಡಿಯೊವನ್ನು ಬಿಸಿಸಿಐ ಅಪ್‌ಲೋಡ್‌ ಮಾಡಿದೆ.