Wednesday, 18th December 2024

R Ashwin Retires: ಆರ್‌.ಅಶ್ವಿನ್‌ ಕ್ರಿಕೆಟ್‌ ಸಾಧನೆಯ ಇಣುಕು ನೋಟ

ಬೆಂಗಳೂರು: ಅನಿಲ್‌ ಕುಂಬ್ಳೆ, ಹರ್ಭಜನ್‌ ಸಿಂಗ್‌ ಬಳಿಕ ಭಾರತೀಯ ಕ್ರಿಕೆಟ್‌ ರಂಗದ ಸ್ಪಿನ್‌ ದಾಳಿಯಲ್ಲಿ ಮಹೋನ್ನತ ಸಾಧನೆ ಮಾಡಿದ್ದ ರವಿಚಂದ್ರನ್‌ ಅಶ್ವಿ‌ನ್‌(R Ashwin) ಇಂದು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ(R Ashwin Retires) ಹೇಳಿದ್ದಾರೆ. ಕಳೆದ 14 ವರ್ಷದಲ್ಲಿ ಭಾರತ ಕ್ರಿಕೆಟ್‌ಗೆ ಅಶ್ವಿನ್‌ ಕೊಡುಗೆ ಅಪಾರ. ಅವರ ಮಹತ್ವದ ಸಾಧನೆಯ ಇಣುಕು ನೋಟ ಇಲ್ಲಿದೆ.

1. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 250, 300 ಮತ್ತು 350 ವಿಕೆಟ್‌ ಕಿತ್ತ ಕ್ರಿಕೆಟಿಗ.

2. ಕ್ಯಾಲೆಂಡರ್‌ ವರ್ಷವೊಂದರಲ್ಲಿ 500 ರನ್‌ ಮತ್ತು 50 ವಿಕೆಟ್‌ ಪಡೆದ ಭಾರತದ ಎರಡನೇ ಕ್ರಿಕೆಟಿಗ.

3. ಒಟ್ಟಾರೆ 700 ಅಂತಾರಾಷ್ಟ್ರೀಯ ವಿಕೆಟ್‌ ಪಡೆದ ಭಾರತದ 3ನೇ ಕ್ರಿಕೆಟಿಗ.

4. ತವರಿನ ಟರ್ನಿಂಗ್‌ ಟ್ರ್ಯಾಕ್‌ನಲ್ಲಿ ಅಪಾರ ಯಶಸ್ಸು ಸಾಧಿಸಿದ ಅಶ್ವಿನ್ ಆಸ್ಟ್ರೇಲಿಯ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯಲ್ಲಿ 29 ವಿಕೆಟ್‌ ಕಿತ್ತ ಮೊದಲ ಬೌಲರ್‌.

5. ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ 100 ವಿಕೆಟ್‌ಗಳನ್ನು ತಲುಪಿದ ಮೊದಲ ಬೌಲರ್.

6. ಟೆಸ್ಟ್‌ ಪಂದ್ಯವೊಂದರಲ್ಲಿ ಶತಕ ಮತ್ತು ಐದು ವಿಕೆಟ್‌ ಕಿತ್ತ ಭಾರತದ ಏಕೈಕ ಆಟಗಾರ.

7. ಟಿ20 ಕ್ರಿಕೆಟ್‌ನಲ್ಲಿ 50 ವಿಕೆಟ್‌ ಕಿತ್ತ ಭಾರತದ ಮೊದಲ ಆಟಗಾರ

8. ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್(67) ಬಳಿಕ ಟೆಸ್ಟ್‌ನಲ್ಲಿ ಅತ್ಯಧಿಕ ಬಾರಿ ಟೆಸ್ಟ್‌ನಲ್ಲಿ ಐದು ವಿಕೆಟ್‌ ಗೊಂಚಲು ಪಡೆದ ಬೌಲರ್‌ ಎಂಬ ದಾಖಲೆಯೂ ಅಶ್ವಿನ್‌(37) ಹೆಸರಿನಲ್ಲಿದೆ.

9. ಭಾರತದ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಧಿಕ ಸರಣಿ ಶ್ರೇಷ್ಠ ಪಡೆದ ಆಟಗಾರ ಎಂಬ ಹೆಗ್ಗಳಿ ಅಶ್ವಿನ್‌ ಅವರದ್ದಾಗಿದೆ. ಅಶ್ವಿನ್‌ ಒಟ್ಟು 10 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಶ್ವಿನ್‌ ಬಳಿಕ ಸಚಿನ್‌ ತೆಂಡೂಲ್ಕರ್‌ ಕಾಣಿಸಿಕೊಂಡಿದ್ದಾರೆ. ಸಚಿನ್‌ 5 ಬಾರಿ ಈ ಪ್ರಶಸ್ತಿ ಗೆದ್ದಿದ್ದಾರೆ.

ಇದನ್ನೂ ಓದಿ R Ashwin Retires: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆರ್‌.ಅಶ್ವಿನ್‌ ನಿವೃತ್ತಿ ಘೋಷಣೆ

10. ಭಾರತ ಪರ ಭರ್ತಿ 106 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಅಶ್ವಿನ್‌ 537 ವಿಕೆಟ್‌ ಕಿತ್ತು ಭಾರತ ಪರ ಅತ್ಯಧಿಕ ಟೆಸ್ಟ್‌ ವಿಕೆಟ್‌ ಪಡೆದ ಬೌಲರ್‌ಗಳ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 619 ವಿಕೆಟ್‌ ಕಿತ್ತ ಕನ್ನಡಿಗ ಅನಿಲ್‌ ಕುಂಬ್ಳೆ ಅಗ್ರಸ್ಥಾನದಲ್ಲಿದ್ದಾರೆ.

11. ಭಾರತ, 2011ರ ವಿಶ್ವಕಪ್‌, 2013ರ ಚಾಂಪಿಯನ್‌ ಟ್ರೋಫಿ ಗೆಲ್ಲಲು ಅಶ್ವಿ‌ನ್‌ ಮಹತ್ತರ ಪಾತ್ರ ವಹಿಸಿದ್ದರು. 2011ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್‌ಗೆ ಪದಾರ್ಪಣೆಗೈದದಲ್ಲದೇ ಐದು ವಿಕೆಟ್‌ ಕಿತ್ತ ಸಾಧಕರಾಗಿ ಮೂಡಿ ಬಂದಿದ್ದರು.

12. ಅತೀ ಕಡಿಮೆ ಟೆಸ್ಟ್‌ನಲ್ಲಿ 500 ವಿಕೆಟ್‌ ಸಾಧನೆಗೈದ ವಿಶ್ವದ ಎರಡನೇ ಕ್ರಿಕೆಟಗರಾಗಿದ್ದಾರೆ. ಅಗ್ರಸ್ಥಾನದಲ್ಲಿರುವ ಮುತ್ತಯ್ಯ ಮುರಳೀಧರನ್‌ ಕೇವಲ 87 ಟೆಸ್ಟ್‌ಗಳಲ್ಲಿ ಈ ಸಾಧನೆ ದಾಖಲಿಸಿದ್ದರು. ಅಶ್ವಿನ್‌ 98ನೇ ಟೆಸ್ಟ್‌ನಲ್ಲಿ ಈ ಪರಾಕ್ರಮಗೈದಿದ್ದರು.