Thursday, 19th December 2024

R Ashwin: ಅಶ್ವಿನ್​ ದಿಢೀರ್​ ವಿದಾಯ ನಿರ್ಧಾರಕ್ಕೆ ಕಾರಣವೇನು?

ಬೆಂಗಳೂರು: ಭಾರತ ಮತ್ತು ಆಸೀಸ್‌ ನಡುವಣ ಟೆಸ್ಟ್‌ ಸರಣಿಯ ಮಧ್ಯದಲ್ಲೇ ದಿಢೀರ್‌ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆರ್‌. ಅಶ್ವಿನ್(R Ashwin)​ ವಿದಾಯ ಹೇಳಿರುವುದು ಅಚ್ಚರಿಗೆ ಕಾರಣವಾಗಿತ್ತು. ಅಶ್ವಿನ್‌ ನಿವೃತ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಚರ್ಚೆಗಳು ನಡೆಯುತ್ತಿದೆ.

ವರದಿಯೊಂದರ ಪ್ರಕಾರ ಭಾರತ ತಂಡದಲ್ಲಿ ಮೊದಲ ಆಯ್ಕೆಯ ಸ್ಪಿನ್ನರ್​ ಆಗಿರದಿದ್ದರೆ ಗುಡ್​ಬೈ ಹೇಳುವುದೇ ಸೂಕ್ತ ಎಂಬ ಅಶ್ವಿನ್​ ನಿಲುವೇ ನಿವೃತ್ತಿ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಆದರೆ ನಿವೃತ್ತಿ ನಿರ್ಧಾರಕ್ಕೆ ಮುನ್ನ ಅಶ್ವಿನ್​ ಆಯ್ಕೆಗಾರರೊಂದಿಗೆ ಚರ್ಚಿಸಿಲ್ಲ ಎಂದೂ ಬಿಸಿಸಿಐ ಮೂಲಗಳು ತಿಳಿಸಿವೆ.

ಆಸೀಸ್‌ ಸರಣಿಯ ಅಡಿಲೇಡ್​ ಟೆಸ್ಟ್‌ನಲ್ಲಿ ಅಶ್ವಿನ್‌ಗೆ ಅವಕಾಶ ನೀಡಲಾಗಿತ್ತು. ಆ ಬಳಿಕ ಮುಂದಿನ ಪಂದ್ಯಕ್ಕೆ ಅವರನ್ನು ಕೈಬಿಡಲಾಗಿತ್ತು. ಅಡಿಲೇಡ್‌ ಟೆಸ್ಟ್‌ನಲ್ಲಿ ಅಶ್ವಿನ್‌ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ.ಎರಡೂ ಇನಿಂಗ್ಸ್‌ ಬೌಲಿಂಗ್‌ ನಡೆಸಿದರೂ ಕೇವಲ ಒಂದು ವಿಕೆಟ್‌ ಮಾತ್ರ ಪಡೆದಿದ್ದರು. ಸರಣಿಯ ಕೊನೇ 2 ಟೆಸ್ಟ್​ಗಳಲ್ಲೂ ಅಶ್ವಿನ್​ರನ್ನು ಆಡಿಸುವ ಸಾಧ್ಯತೆ ಇರಲಿಲ್ಲ. ಇದೇ ಬೇಸರದಲ್ಲಿ ಅವರು ನಿವೃತ್ತಿ ಹೇಳಿದಂತಿದೆ.

ಇದನ್ನೂ ಓದಿ R Ashwin Retires: ಆರ್‌.ಅಶ್ವಿನ್‌ ಕ್ರಿಕೆಟ್‌ ಸಾಧನೆಯ ಇಣುಕು ನೋಟ

ಯುವ ಸ್ಪಿನ್‌ ಆಲ್‌ರೌಂಡರ್‌ ವಾಷಿಂಗ್ಟನ್ ​ಸುಂದರ್​ರನ್ನು ಅಶ್ವಿನ್​ ಉತ್ತರಾಧಿಕಾರಿ ಎಂದು ಗುರುತಿಸಿದೆ. ಸುಂದರ್‌ ಕೂಡ ತಮಿಳುನಾಡಿನವರೇ ಆಗಿದ್ದಾರೆ. ಸುಂದರ್‌ಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿಯೂ ಅಶ್ವಿನ್‌ ನಿವೃತ್ತಿ ನಿರ್ಧಾರ ಕೈಗೊಂಡಿರಬಹುದು ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ. ಒಟ್ಟಾರೆ ಅಶ್ವಿನ್‌ ನಿವೃತ್ತಿ ನಿರ್ಧಾರ ಮಾತ್ರ ನಿಗೂಡ. ಇದಕ್ಕೆ ಉತ್ತರ ಅಶ್ವಿನ್‌ ಬಳಿಯೇ ಇದೆ.

2011 ರಲ್ಲಿ ದೆಹಲಿಯಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ಗೆ ಟೆಸ್ಟ್ ಪಾದರ್ಪಣೆ ಮಾಡಿದ್ದರು. ಒಟ್ಟು 106 ಟೆಸ್ಟ್‌ ಪಂದ್ಯವನ್ನಾಡಿ 537 ವಿಕೆಟ್‌ಗಳನ್ನು ಪಡೆದಿದ್ದಾರೆ. ಜತೆಗೆ 6 ಶತಕವನ್ನು ಸಿಡಿಸಿದ್ದಾರೆ. 2011ರ ಏಕದಿನ ವಿಶ್ವಕಪ್‌ ಗೆಲುವಿನ ತಂಡದ ಸದಸ್ಯನೂ ಆಗಿದ್ದಾರೆ. ಏಕದಿನದಲ್ಲಿ 116 ಪಂದ್ಯಗಳನ್ನಾಡಿ 707 ರನ್‌ ಮತ್ತು 156 ವಿಕೆಟ್‌ ಪಡೆದಿದ್ದಾರೆ. ಟಿ20ಯಲ್ಲಿ 65 ಪಂದ್ಯಗಳಿಂದ 72 ವಿಕೆಟ್‌ ಕಿತ್ತಿದ್ದಾರೆ. ಟೆಸ್ಟ್‌ನಲ್ಲಿ ಒಟ್ಟು 37 ಬಾರಿ 5 ವಿಕೆಟ್‌ ಗೊಂಚಲು ಮತ್ತು 8 ಬಾರಿ 10 ವಿಕೆಟ್‌ ಗೊಂಚಲು ಪಡೆದಿದ್ದಾರೆ. ಅಶ್ವಿನ್ 2016 ರಲ್ಲಿ ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ ಮತ್ತು ವರ್ಷದ ಐಸಿಸಿ ಪುರುಷರ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.