ಬ್ರಿಸ್ಬೇನ್: ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ (R Ashwin’s Retirement) ವಿದಾಯ ಹೇಳಿದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭಾವನಾತ್ನಕ ಸಂದೇಶವನ್ನು ರವಾನಿಸಿದ್ದಾರೆ. ಭಾರತ ತಂಡಕ್ಕೆ ಆರ್ ಅಶ್ವಿನ್ ನೀಡಿರುವ ಕೊಡುಗೆಯನ್ನು ಯಾರಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಟೀಮ್ ಇಂಡಿಯಾ ಕಪ್ತಾನ ಗುಣಗಾನ ಮಾಡಿದ್ದಾರೆ.
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರೋಹಿತ್ ಶರ್ಮಾ, “ನಾವು ಜೊತೆಯಾಗಿ ಸಾಕಷ್ಟು ವರ್ಷಗಳ ಕಾಲ ಆಡಿದ್ದೇವೆ ಹಾಗೂ ಮರೆಯಲಾದ ಸಾಕಷ್ಟು ನೆನಪುಗಳನ್ನು ಹೊಂದಿದ್ದೇವೆ. ನೀವು ಮೊದಲನೇ ಪಂದ್ಯದಿಂದಲೂ ನಮಗೆ ಮ್ಯಾಚ್ ವಿನ್ನರ್ ಆಗಿದ್ದಾರೆ ಹಾಗೂ ತಮ್ಮ ಗುಣಮಟ್ಟದ ಬೌಲಿಂಗ್ ಮೂಲಕ ಸಾಕಷ್ಟು ಯುವ ಬೌಲರ್‌ಗಳ ಮೇಲೆ ಪ್ರಭಾವ ಬೀರಿದ್ದೀರಿ. ಆರ್ ಅಶ್ವಿನ್ ಅವರಂಥ ಕ್ಲಾಸಿಕ್ ಬೌಲಿಂಗ್ ಆಕ್ಷನ್ ಹೊಂದಿರುವ ಸಾಕಷ್ಟು ಯುವ ಬೌಲರ್‌ಗಳನ್ನು ನಾವು ಹೊಂದಿದ್ದೇವೆ. ನೀವು ಭಾರತ ಮತ್ತು ವಿಶ್ವ ಕ್ರಿಕೆಟ್‌ನ ನಿಜವಾದ ಪ್ರತಿಭಾವಂತ ಬೌಲರ್. ಈ ತಂಡ ನಿಮ್ಮನ್ನು ತುಂಬಾ ಕಳೆದುಕೊಳ್ಳಲಿದೆ. ನಿಮ್ಮ ಮುಂದಿನ ಕೌಟುಂಬಿಕ ಜೀವನಕ್ಕೆ ಶುಭವಾಗಲಿ,” ಎಂದು ಶ್ಲಾಘಿಸಿದ್ದಾರೆ.
ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಐದನೇ ದಿನಾವದ ಬುಧವಾರ ಡ್ರೆಸ್ಸಿಂಗ್ ಕೊಠಡಿಯಲ್ಲಿ ವಿರಾಟ್ ಕೊಹ್ಲಿ ಜೊತೆ ಆರ್ ಅಶ್ವಿನ್ ಸಂಭಾಷಣೆ ನಡೆಸುತ್ತಿದ್ದರು. ಈ ವೇಳೆ ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರನನ್ನು ಅಪ್ಪಿಕೊಂಡರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಡಿಯೊ ನೋಡಿದವರು, ಆರ್ ಅಶ್ವಿನ್ ಪಾಲಿಗೆ ಇದು ಕೊನೆಯ ಟೆಸ್ಟ್ ಪಂದ್ಯ ಎಂದು ಅಂದಾಜಿಸಿದ್ದರು. ಅದರಂತೆ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಕೊನೆಯಾದ ಬಳಿಕ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಆರ್ ಅಶ್ವಿನ್ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು. ಆ ಮೂಲಕ ತಾವು ಗುರುವಾರ ತವರಿಗೆ ವಾಪಸ್ ಆಗುವುದಾಗಿ ತಿಳಿಸಿದ್ದರು.
ಆರ್ ಅಶ್ವಿನ್ ಅವರು ಇಲ್ಲಿಯವರೆಗೂ ಆಡಿದ 106 ಟೆಸ್ಟ್ ಪಂದ್ಯಗಳಿಂದ 537 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಹಾಗೂ 3,503 ರನ್‌ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಅವರು ಆರು ಸಿಕ್ಸರ್ ಹಾಗೂ 14 ಅರ್ಧಶತಕಗಳನ್ನು ಸಿಡಿಸಿದ್ದಾರೆ.
R Ashwin Retires: ಆರ್.ಅಶ್ವಿನ್ ಕ್ರಿಕೆಟ್ ಸಾಧನೆಯ ಇಣುಕು ನೋಟ
ಡ್ರೆಸ್ಸಿಂಗ್ ಕೊಠಡಿಯಲ್ಲಿ ಅಶ್ವಿನ್ ಭಾವುಕ
ಮೂರನೇ ಟೆಸ್ಟ್ ಪಂದ್ಯದ ಬಳಿಕ ಡ್ರೆಸ್ಸಿಂಗ್ ಕೊಠಡಿಯಲ್ಲಿ ಆರ್ ಅಶ್ವಿನ್ ಭಾವುಕರಾದರು. ತಮ್ಮ ಸಹ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಬಗ್ಗೆ ವಿಶೇಷ ಪದಗಳಿಂದ ಗುಣಗಾನ ಮಾಡಿದರು.
“ನಿವೃತ್ತಿಯೊಂದಿಗೆ ಹೇಗೆ ಸಾಗಬೇಕೆಂದು ನನಗೆ ಪ್ರಾಮಾಣಿಕವಾಗಿ ತಿಳಿದಿಲ್ಲ. ತಂಡದ ಆಟಗಾರರ ಎದುರು ಈ ವಿಷಯವನ್ನು ತಿಳಿಸುವುದು ಸುಲಭ. ನಾನಿದನ್ನು ಪ್ರದರ್ಶನ ಮಾಡುತ್ತಿಲ್ಲ. ನನ್ನ ಪಾಲಿಗೆ ಇದು ಅತ್ಯಂತ ಭಾವನಾತ್ಮಕ ಕ್ಷಣ. 2011-12ರ ಸಾಲಿನಲ್ಲಿ ನನ್ನ ಮೊದಲ ಆಸ್ಟ್ರೇಲಿಯಾ ಪ್ರವಾಸದ ರೀತಿ ಇದು ನನಗೆ ಭಾಸವಾಗುತ್ತಿದೆ. ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಅವರು ಕೂಡ ನಿವೃತ್ತಿ ಪಡೆದಿದ್ದಾರೆ. ನನ್ನನ್ನು ನಂಬಿ, ಪ್ರತಿಯೊಬ್ಬರಿಗೂ ಸಮಯ ಬಂದೇ ಬರುತ್ತದೆ. ಇಂದು ನಿಜವಾಗಿಯೂ ನನ್ನ ದಿನವಾಗಿದೆ. ಇದನ್ನು ನಾನು ಆನಂದಿಸಿದ್ದೇನೆ. ಇದನ್ನು ಸಂಪೂರ್ಣವಾಗಿ ಆನಂದಿಸಿದ್ದೇನೆ,” ಎಂದು ಆರ್ ಅಶ್ವಿನ್ ಅವರ ಭಾವುಕ ಮಾತುಗಳ ವಿಡಿಯೊವನ್ನು ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಈ ಸುದ್ದಿಯನ್ನು ಓದಿ: R Ashwin Retires: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆರ್.ಅಶ್ವಿನ್ ನಿವೃತ್ತಿ ಘೋಷಣೆ