ಪ್ಯಾರಿಸ್: ಆವೆ ಅಂಗಳದ ಯಶಸ್ವಿ ಆಟಗಾರ, ಸ್ಪೇನ್‌ನ ರಫೆಲ್ ನಡಾಲ್(Rafael Nadal) ಅವರು ತಮ್ಮ 19 ವರ್ಷಗಳ ಟೆನಿಸ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ನವೆಂಬರ್ನಲ್ಲಿ ನಡೆಯಲಿರುವ ಡೇವಿಸ್ ಕಪ್ ಫೈನಲ್ ಪಂದ್ಯದ ನಂತರ ನಿವೃತ್ತಿಯಾಗುವುದಾಗಿ ಹೇಳಿಕೊಂಡಿದ್ದಾರೆ. ಚೊಚ್ಚಲ ಪ್ರಯತ್ನದಲ್ಲೇ ಪ್ರತಿಷ್ಠಿತ ಗ್ರ್ಯಾನ್ ಸ್ಲಾಮ್ ಗೆದ್ದ ನಡಾಲ್ ಸಾಧನೆಯ ಇಣುಕು ನೋಟ ಹೀಗಿದೆ.
ಅದು, 2005. ಅಷ್ಟಾಗಿ ಟೆನಿಸ್ ಅನುಭವ ಇಲ್ಲದಿದ್ದ 18 ವರ್ಷದ ಸ್ಪೇನ್‌ನ ರಫೆಲ್ ನಡಾಲ್ ದಿಗ್ಗಜ ಆಟಗಾರನ್ನು ಮಣಿಸಿ ಅಂದು ಫ್ರೆಂಚ್ ಓಪನ್ ಟೂರ್ನಿಯ ಫೈನಲ್‌ನಲ್ಲಿ ಸೆಣಸಲು ಸಜ್ಜಾಗಿ ನಿಂತಿದ್ದರು. ಎದುರಾಳಿ,ಅರ್ಜೆಂಟೀನಾದ ಮರಿಯಾನೊ ಪೆರ್ಟಾ. ಮೊದಲ ಸೆಟ್‌ನಲ್ಲಿ ತೀವ್ರ ಪ್ರತಿಸ್ಪರ್ಧೆ ನೀಡಿದರೂ ರಫೆಲ್ ಸೋಲಿಗೆ ಶರಣಾದರು. ಆದರೆ ನಂತರ ಎರಡು ಸೆಟ್‌ಗಳಲ್ಲಿ ಪುಟಿದೆದ್ದು ಅಮೋಘ ಜಯ ಸಾಧಿಸಿದರು. ಇನ್ನೇನು, ಒಂದು ಸೆಟ್ ಗೆದ್ದರೆ ಸುಲಭವಾಗಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿದ್ದ ರಫೆಲ್ ಅವರನ್ನು ಮರಿಯಾನೊ ಮತ್ತೆ ಕಾಡಿದರು. ಆದರೆ ರಫೆಲ್ ಪಟ್ಟುಬಿಡಲಿಲ್ಲ. ಕಾದಾಡಿ ಗೆದ್ದ ಅವರು ತಮ್ಮ ಚೊಚ್ಚಲ ಪ್ರಯತ್ನದಲ್ಲಿಯೇ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿದರು.
ರಫೆಲ್ ಆಡಿದ ಮೊದಲ ಫ್ರೆಂಚ್ ಓಪನ್ ಟೂರ್ನಿ ಇದಾಗಿತ್ತು. ಪ್ರಶಸ್ತಿಯ ಹಾದಿಯಲ್ಲಿ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ರೋಜರ್ ಫೆಡರರ್ ಅವರನ್ನೇ ಮಣಿಸಿದ್ದರು. ಅಂದಿನ ಆ ಗೆಲುವಿನ ಜಾತ್ರೆ ನಂತರ ಜೈತ್ರಯಾತ್ರೆಯಾಗಿಯೇ ಸಾಗಿತು. ಆವೆಮಣ್ಣಿನ ಅಂಗಣದಲ್ಲಿ ಆಡುವ ಏಕೈಕ ಗ್ರ್ಯಾನ್ ಸ್ಲಾಮ್ ಟೂರ್ನಿಯಾದ ಫ್ರೆಂಚ್ ಓಪನ್‌ನಲ್ಲಿ ಅವರು ಹೊಂದಿರುವ ಪಾರಮ್ಯಕ್ಕೆ ಜಗವೇ ಬೆರಗಾಯಿತು. ಪ್ಯಾರಿಸ್‌ನಲ್ಲಿ ಮಾಡಿದ ಸಾಧನೆಗಳಿಂದಾಗಿ ಅವರು ಆವೆಮಣ್ಣಿನ ಅಂಗಣದ ಅರಸ ಎಂದೇ ಖ್ಯಾತಿ ಪಡೆದಿದ್ದಾರೆ. ಒಟ್ಟಾರೆ ಈ ಟೂರ್ನಿಯಲ್ಲಿ 14 ಪ್ರಶಸ್ತಿ ಗೆದ್ದ ಸಾಧನೆ ಇವರದ್ದು.
ಇದನ್ನೂ ಓದಿ Rafael Nadal: ಟೆನಿಸ್‌ಗೆ ನಿವೃತ್ತಿ ಘೋಷಿಸಿದ ಕ್ಲೇ ಕೋರ್ಟ್ ಕಿಂಗ್ ನಡಾಲ್
22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ
ನಡಾಲ್ ಅವರು ತಮ್ಮ ಇದುವರೆಗಿನ ಟೆನಿಸ್ ವೃತ್ತಿ ಜೀವನದಲ್ಲಿ ಒಟ್ಟು 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ಇದರಲ್ಲಿ 14 ಫ್ರೆಂಚ್ ಓಪನ್, 2 ಆಸ್ಟ್ರೇಲಿಯನ್ ಓಪನ್, 3 ಯುಎಸ್ ಓಪನ್, 2 ವಿಂಬಲ್ಡನ್ ಒಳಗೊಂಡಿದೆ. ಅತ್ಯಧಿಕ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾಧಕರಲ್ಲಿ ನಡಾಲ್‌ಗೆ ಎರಡನೇ ಸ್ಥಾನ. ಅಗ್ರ ಸ್ಥಾನ ನೊವಾಕ್ ಜೋಕೊವಿಕ್‌ಗೆ ಸಲ್ಲುತ್ತದೆ. ಜೋಕೊ 24 ಗ್ರ್ಯಾನ್ ಸ್ಲಾಮ್ ಗೆದ್ದಿದ್ದಾರೆ. 36 ಮಾಸ್ಟರ್ಸ್ ಪ್ರಶಸ್ತಿಗಳು ಮತ್ತು ಒಲಂಪಿಕ್ ಚಿನ್ನದ ಪದಕ ಸೇರಿದಂತೆ ಒಟ್ಟು 92 ಎಟಿಪಿ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸಿಂಗಲ್ಸ್ ನಲ್ಲಿ ವೃತ್ತಿಜೀವನದ ಗೋಲ್ಡನ್ ಸ್ಲಾಮ್ ಅನ್ನು ಪೂರ್ಣಗೊಳಿಸಿದ ಮೂವರು ಪುರುಷ ಆಟಗಾರರಲಲಿ ಒಬ್ಬರು ಎಂಬ ಅನನ್ಯ ದಾಖಲೆಯನ್ನು ಹೊಂದಿದ್ದಾರೆ.