Saturday, 16th November 2024

Ranji Trophy: ಕರ್ನಾಟಕ-ಉತ್ತರ ಪ್ರದೇಶ ಪಂದ್ಯ ಡ್ರಾ, ಕನ್ನಡಿಗರಿಗೆ ಮೂರು ಅಂಕ!

Karnataka settles for a draw against Uttar Pradesh after securing first innings lead

ಲಖನೌ: ಇಲ್ಲಿನ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದಿದ್ದ ಕರ್ನಾಟಕ ಹಾಗೂ ಉತ್ತರ ಪ್ರದೇಶ ನಡುವಣ 2024-25ರ ಸಾಲಿನ ರಣಜಿ ಟ್ರೋಫಿಯ (Ranji Trophy) ಎಲೈಟ್‌ ಸಿ ಗುಂಪಿನ ಪಂದ್ಯ ಅಂತಿಮವಾಗಿ ಡ್ರಾ ಆಯಿತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ಫಲವಾಗಿ ಮಯಾಂಕ್‌ ಅಗರ್ವಾಲ್‌ ನಾಯಕತ್ವದ ಕರ್ನಾಟಕ ತಂಡ ಮೂರು ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ. ಇನ್ನು ಆತಿಥೇಯ ಉತ್ತರ ಪ್ರದೇಶ ಒಂದೇ ಒಂದು ಅಂಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಪಂದ್ಯದ ನಾಲ್ಕನೇ ಹಾಗೂ ಅಂತಿಮ ದಿನವಾದ ಶನಿವಾರ ಬೆಳಗ್ಗೆ 5 ವಿಕೆಟ್‌ಗಳ ನಷ್ಟಕ್ಕೆ 325 ರನ್‌ಗಳಿಂದ ದ್ವಿತೀಯ ಇನಿಂಗ್ಸ್‌ ಮುಂದುವರಿಸಿದ ಉತ್ತರ ಪ್ರದೇಶ ತಂಡ, ಅಂತಿಮವಾಗಿ 446 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಎದುರಾಳಿ ಕರ್ನಾಟಕ ತಂಡಕ್ಕೆ 261 ರನ್‌ಗಳ ಗುರಿಯನ್ನು ನೀಡಿತು. ಬಳಿಕ ಗುರಿ ಹಿಂಬಾಲಿಸಿದ ಕರ್ನಾಟಕ ತಂಡ, ನಾಲ್ಕನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನಿಂಗ್ಸ್‌ನಲ್ಲಿ 59 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 178 ರನ್‌ಗಳಿಗೆ ಸೀಮಿತವಾಯಿತು.

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಟೂರ್ನಿಗೆ ರಾಜ್ಯ ತಂಡ ಪ್ರಕಟ; ಸಮಿತ್ ದ್ರಾವಿಡ್‌ಗೆ ನಿರಾಸೆ

ಭರ್ಜರಿ ಆರಂಭ ಪಡೆದಿದ್ದ ಕರ್ನಾಟಕ

ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ ಪರ ಓಪನಿಂಗ್‌ ಬಂದ ನಿಕಿನ್‌ ಜೋಸ್‌ ಹಾಗೂ ಮಯಾಂಕ್‌ ಅಗರ್ವಾಲ್‌ ಮುರಿಯದ ಮೊದಲನೇ ವಿಕೆಟ್‌ಗೆ 77 ರನ್‌ಗಳನ್ನು ಕಲೆ ಹಾಕಿದ್ದರು ಹಾಗೂ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಆದರೆ, 46 ಎಸೆತಗಳಲ್ಲಿ 37 ರನ್‌ ಗಳಿಸಿದ ನಾಯಕ ಮಯಾಂಕ್‌, ಆಕಿಬ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದರು. ನಂತರ ತಂಡದ ಮೊತ್ತ 100 ರನ್‌ಗಳಾಗುವಷ್ಟರಲ್ಲಿ ನಿಕಿನ್‌ ಜೋಸ್‌ (48 ರನ್)‌ ಅನಗತ್ಯವಾಗಿ ರನ್‌ ಪಡೆಯಲು ಪ್ರಯತ್ನಿಸಿ ರನ್‌ಔಟ್‌ ಆದರು.

ನಂತರ 25 ರನ್‌ಗಳ ಅಂತರದಲ್ಲಿ ಕರ್ನಾಟಕ ತಂಡ, ಆರ್‌ ಸ್ಮರಣ್‌, ಕೆ ಶ್ರೀಜಿತ್‌ ಹಾಗೂ ಶ್ರೇಯಸ್‌ ಗೋಪಾಲ್‌ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಆರನೇ ವಿಕೆಟ್‌ಗೆ ಜೊತೆಯಾದ ಮನೀಷ್‌ ಪಾಂಡೆ ಹಾಗೂ ಅಭಿನವ್‌ ಮನೋಹರ್‌ ಕ್ರಮವಾಗಿ 36 ಮತ್ತು 31 ರನ್‌ಗಳನ್ನು ಗಳಿಸಿ ತಂಡವನ್ನು ಗೆಲ್ಲಿಸುವ ಪ್ರಯತ್ನವನ್ನು ನಡೆಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಕರ್ನಾಟಕ ಡ್ರಾಗೆ ತೃಪ್ತಿಪಟ್ಟುಕೊಂಡಿತು.

ದ್ವಿತೀಯ ಇನಿಂಗ್ಸ್‌ನಲ್ಲಿ ಉತ್ತರ ಪ್ರದೇಶ ಕಮ್‌ಬ್ಯಾಕ್‌

ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 89 ರನ್‌ಗಳಿಗೆ ಆಲ್‌ಔಟ್‌ ಆಗಿದ್ದ ಉತ್ತರ ಪ್ರದೇಶ ತಂಡ, ದ್ವಿತೀಯ ಇನಿಂಗ್ಸ್‌ನಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್‌ ಮಾಡಿತ್ತು. ಮಾಧವ್‌ ಕೌಶಿಕ್‌ ಹಾಗೂ ಆರ್ಯನ್‌ ಜುಯೆಲ್‌ ಅವರ ನಿರ್ಣಾಯಕ ಶತಕಗಳ ಬಲದಿಂದ ಉತ್ತರ ಪ್ರದೇಶ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 134 ಓವರ್‌ಗಳಿಗೆ 446 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಕರ್ನಾಟಕಕ್ಕೆ 261 ರನ್‌ಗಳ ಗುರಿಯನ್ನು ನೀಡಿತ್ತು.

ಉತ್ತರ ಪ್ರದೇಶ ತಂಡದ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಮಾಧವ್‌ ಕೌಶಿಕ್‌ 274 ಎಸೆತಗಳಲ್ಲಿ 19 ಬೌಂಡರಿಗಳೊಂದಿಗೆ 134 ರನ್‌ಗಳನ್ನು ಕಲೆ ಹಾಕಿದರೆ, ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಿದ್ದ ಆರ್ಯನ್‌ ಜುಯೆಲ್‌ 257 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 109 ರನ್‌ ಕಲೆ ಹಾಕಿದರು. ಶನಿವಾರ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಸೌರಭ್‌ ಕುಮಾರ್‌ 54 ರನ್‌ ಗಳಿಸಿದರು.

ಕರ್ನಾಟಕ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಶ್ರೇಯಸ್‌ ಗೋಪಾಲ್‌ 5 ವಿಕೆಟ್‌ ಸಾಧನೆ ಮಾಡಿದರೆ, ವಿದ್ಯಾದರ್‌ ಪಾಟೀಲ್‌ ಹಾಗೂ ಮೊಹ್ಸಿನ್‌ ಖಾನ್‌ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು.

ಸ್ಕೋರ್‌ ವಿವರ

ಉತ್ತರ ಪ್ರದೇಶ: ಪ್ರಥಮ ಇನಿಂಗ್ಸ್‌- 89, ದ್ವಿತೀಯ ಇನಿಂಗ್ಸ್‌ನಲ್ಲಿ 134 ಓವರ್‌ಗಳಲ್ಲಿ 446/10 (ಮಾಧವ್‌ ಕೌಶಿಕ್‌ 134,‌ ಆರ್ಯನ್ ಜುಯೆಲ್‌ (109,ಸೌರಭ್‌ ಕುಮಾರ್‌ 54, ಆದಿತ್ಯ ಶರ್ಮಾ (41; ಶ್ರೇಯಸ್‌ ಗೋಪಾಲ್‌ 122ಕ್ಕೆ 5)

ಕರ್ನಾಟಕ: ಪ್ರಥಮ ಇನಿಂಗ್ಸ್-‌ 275 ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ 59 ಓವರ್‌ಗಳಿಗೆ 178/5 (ನಿಕಿನ್‌ ಜೋಸ್‌ 48, ಮಯಾಂಕ್‌ ಅಗರ್ವಾಲ್‌ 37, ಮನೀಷ್‌ ಪಾಂಡೆ 36, ಅಭಿನವ್‌ ಮನೋಹರ್‌ 31; ವಿಪ್ರಜ್‌ ನಿಗಮ್‌ 62 ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಎನ್‌ ಶ್ರೀಜಿತ್‌