Saturday, 23rd November 2024

Ranji Trophy: ತ್ರಿಶತಕದ ಜತೆಗೆ 606 ರನ್‌ಗಳ ಜೊತೆಯಾಟದೊಂದಿಗೆ ಇತಿಹಾಸ ಬರೆದ ಸ್ನೇಹಲ್‌-ಕಶ್ಯಪ್‌!

Snehal Kauthankar, Kashyap Bakhale create history with twin triple century

ನವದೆಹಲಿ: ಗೋವಾ ತಂಡದ ಸ್ನೇಹಲ್‌ ಕೌಥಂಕರ್‌ ಮತ್ತು ಕಶ್ಯಪ್‌ ಬಾಖಲೆ ತಮ್ಮ ಅದ್ಭುತ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ರಣಜಿ ಟ್ರೋಫಿ (Ranji Trophy) ಟೂರ್ನಿಯಲ್ಲಿ ತ್ರಿಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ ಮೂರನೇ ವಿಕೆಟ್‌ಗೆ 606 ರನ್‌ಗಳ ಜತೆಯಾಟದ ಮೂಲಕ ರಣಜಿ ಟ್ರೋಫಿ ಇತಿಹಾಸದಲ್ಲಿಯೇ ಅತ್ಯಂತ ಗರಿಷ್ಠ ಜೊತೆಯಾಟವಾಡಿದ ವಿಶೇಷ ದಾಖಲೆಯನ್ನು ಈ ಜೋಡಿ ಬರೆದಿದೆ.

ಗೋವಾ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಗುರುವಾರ ಅಂತ್ಯವಾದ 2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಅರುಣಾಚಲ ಪ್ರದೇಶ ವಿರುದ್ಧದ ಪ್ಲೇಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಈ ಸಾಧನೆಗೈದಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಅರುಣಾಚಲ ಪ್ರದೇಶ ತಂಡವನ್ನು ಗೋವಾ ಬೌಲರ್‌ಗಳು ಕೇವಲ 84 ರನ್‌ಗಳಿಗೆ ಆಲ್‌ಔಟ್‌ ಮಾಡಿತ್ತು. ಬಳಿಕ ಪ್ರಥನ ಇನಿಂಗ್ಸ್‌ ಆರಂಭಿಸಿದ್ದ ಗೋವಾ 12 ರನ್‌ಗಳಿಗೆ ಒಂದು ವಿಕೆಟ್‌, ನಂತರ 121 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

606 ರನ್‌ಗಳ ಜೊತೆಯಾಟದ ಮೂಲಕ ಇತಿಹಾಸ ಬರೆದ ಗೋವಾ ಬ್ಯಾಟರ್ಸ್‌

ನಂತರ ಮೂರನೇ ವಿಕೆಟ್‌ಗೆ ಜೊತೆಯಾದ ಕಶ್ಯಪ್‌ ಬಾಖಲೆ ಮತ್ತು ಸ್ನೇಹಲ್‌ ಕೌಥಂಕರ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿತು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅರುಣಾಚಲ ಪ್ರದೇಶ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಜೋಡಿ ಎರಡನೇ ದಿನದಾಟದ ಅಂತ್ಯಕ್ಕೆ ಮುರಿಯದ ಮೂರನೇ ವಿಕೆಟ್‌ಗೆ ಅಜೇಯ 606 ರನ್‌ಗಳ ಜೊತೆಯಾಟವನ್ನು ಆಡಿತು. ಆ ಮೂಲಕ ರಣಜಿ ಟ್ರೋಫಿ ಇತಿಹಾಸದಲ್ಲಿಯೇ ಅತಿ ಹೆಚ್ಚು ರನ್‌ಗಳ ಜತೆಯಾಟವಾಡಿದ ಐತಿಹಾಸಿಕ ದಾಖಲೆಯನ್ನು ಈ ಜೋಡಿ ಬರೆಯಿತು.

ತ್ರಿಶತಕ ಸಿಡಿಸಿದ ಸ್ನೇಹಲ್‌-ಕಶ್ಯಪ್‌

606 ರನ್‌ಗಳ ಜೊತೆಗೆ ಕಶ್ಯಪ್‌ ಬಾಖಲೆ ಹಾಗೂ ಸ್ನೇಹಲ್‌ ಕೌಥಂಕರ್‌ ಅವರು ತಲಾ ತ್ರಿಶತಕಗಳನ್ನು ಸಿಡಿಸಿದ್ದಾರೆ. ಅದ್ಬುತ ಬ್ಯಾಟಿಂಗ್‌ ಪ್ರದರ್ಶನ ತೋರಿದ ಕಶ್ಯಪ್‌ ಬಾಖಲೆ, 269 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಬರೋಬ್ಬರಿ 39 ಬೌಂಡರಿಗಳೊಂದಿಗೆ ತ್ರಿಶತಕವನ್ನು ಪೂರ್ಣಗೊಳಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡುತ್ತಿದ್ದ ಸ್ನೇಹಲ್‌ ಕೌಥಂಕರ್‌ 215ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 45 ಬೌಂಡರಿಗಳೊಂದಿಗೆ ಅಜೇಯ 314 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಗೋವಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 92 ಓವರ್‌ಗಳಿಗೆ ಕೇವಲ ಎರಡು ವಿಕೆಟ್‌ಗಳ ನಷ್ಟಕ್ಕೆ 727 ರನ್‌ಗಳನ್ನು ಕಲೆ ಹಾಕಿ ಡಿಕ್ಲೆಸ್‌ ಮಾಡಿಕೊಂಡಿತು.

Mahipal Lomror: ತ್ರಿಶತಕ ಸಿಡಿಸಿ ಐಪಿಎಲ್‌ ಫ್ರಾಂಚೈಸಿಗಳಿಗೆ ಸಂದೇಶ ರವಾನಿಸಿದ ಆರ್‌ಸಿಬಿ ಸ್ಟಾರ್‌!

ಪ್ರಸಕ್ತ ರಣಜಿ ಟ್ರೋಫಿಯಲ್ಲಿ ತ್ರಿಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳು

ಸ್ನೇಹಲ್‌ ಕೌಥಂಕರ್‌ 314-ಗೋವಾ vs ಅರುಣಾಚಲ ಪ್ರದೇಶ

ಕಶ್ಯಪ್‌ ಬಾಖಲೆ 300-ಗೋವಾ vs ಅರುಣಾಚಲ ಪ್ರದೇಶ
ಮಹಿಪಾಲ್ ಲೊಮ್ರೊರ್‌ 300-ರಾಜಸ್ಥಾನ್‌ vs ಉತ್ತರಾಖಂಡ

    ಚೇತನ್‌ ಬಿಸ್ಟ್‌ 303-ನಾಗಾಲ್ಯಾಂಡ್‌ vs ಮಿಜೋರಾಂ

    ಗೋವಾ ತಂಡಕ್ಕೆ ಇನಿಂಗ್ಸ್‌ ಜಯ

    ಪ್ರಥಮ ಇನಿಂಗ್ಸ್‌ ಗೋವಾ ತಂಡ 727 ರನ್‌ಗಳಿಗೆ ಡಿಕ್ಲೆರ್‌ ಮಾಡಿಕೊಂಡ ಬಳಿಕ ಎದುರಾಳಿ ಅರುಣಾಚಲ ಪ್ರದೇಶ ತಂಡಕ್ಕೆ 644 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಅರುಣಾಚಲ ಪ್ರದೇಶ ತಂಡ, ಲಕ್ಷ್ಯ ಗರ್ಗ್‌ ಬೌಲಿಂಗ್‌ ದಾಳಿಗೆ ನಲುಗಿ 22.3 ಓವರ್‌ಗಳಲ್ಲಿ ಕೇವಲ 92 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಗೋವಾ ತಂಡ ಇನಿಂಗ್ಸ್‌ ಹಾಗೂ 551 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು.