Friday, 15th November 2024

Ranji Trophy: ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್‌ ಸಾಧನೆ ಮಾಡಿದ ಅನ್ಷುಲ್‌ ಕಾಂಬೋಜ್‌ ಯಾರು?

Who Is Anshul Kamboj?

ನವದೆಹಲಿ: ಹರಿಯಾಣ ಮತ್ತು ಕೇರಳ ನಡುವಣ 2024-25ರ ಸಾಲಿನ ರಣಜಿ ಟ್ರೋಫಿ (Ranji Trophy) ಪಂದ್ಯದ ಇನಿಂಗ್ಸ್‌ನಲ್ಲಿ ಅನ್ಷುಲ್‌ ಕಾಂಬೋಜ್‌ ಅವರು 10ವಿಕೆಟ್‌ ಸಾಧನೆ ಮಾಡಿದ್ದಾರೆ. ಆ ಮೂಲಕ 90 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿಯೇ ಏಕೈಕ ಇನಿಂಗ್ಸ್‌ನಲ್ಲಿ 10 ವಿಕೆಟ್‌ ಸಾಧನೆ ಮಾಡಿದ ಮೂರನೇ ಬೌಲರ್‌ ಎಂಬ ಕೀರ್ತಿಗೆ ಹರಿಯಾಣ ವೇಗಿ ಅನ್ಷುಲ್‌ ಕಾಂಬೋಜ್‌ ಪಾತ್ರರಾಗಿದ್ದಾರೆ.

ಈ ಹಿಂದೆ ಬಂಗಾಳ ತಂಡದ ಪ್ರೇಮಾಂಗ್ಸು (1957) ಅವರು ಅಸ್ಸಾಂ ವಿರುದ್ಧ ಈ ಸಾಧನೆ ಮಾಡಿದ್ದರು. ಇದಾದ ಬಳಿಕ 1985ರಲ್ಲಿ ರಾಜಸ್ಥಾನ್‌ ಹಾಗೂ ವಿದರ್ಭ ನಡುವಣ ಪಂದ್ಯದಲ್ಲಿ ಪ್ರದೀಪ್‌ ಸುಂದರಮ್‌ ಅವರು 10 ವಿಕೆಟ್‌ ಸಾಧನೆ ಮಾಡಿದ್ದರು. ಇದೀಗ ಈ ಎಲೈಟ್‌ ಲಿಸ್ಟ್‌ಗೆ ಹರಿಯಾಣ ಬೌಲರ್‌ ಸೇರ್ಪಡೆಯಾಗಿದ್ದಾರೆ.

ಅನ್ಷುಲ್‌ ಕಾಂಬೋಜ್‌ ಯಾರು?

ಕಳೆದ 2024 ರ ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ಅನ್ಷುಲ್‌ ಕಾಂಬೋಜ್‌ ಅವರು 16 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ ಎನಿಸಿಕೊಂಡಿದ್ದರು. ಆ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಅನ್ಷುಲ್‌ ದೊಡ್ಡ ಹೆಸರು ಮಾಡಿದ್ದಾರೆ. ಭಾರತ ಸಿ ಮತ್ತು ಭಾರತ ಬಿ ತಂಡಗಳ ನಡುವಣ ಪಂದ್ಯದಲ್ಲಿಯೂ ಅನ್ಷುಲ್‌ ಇನಿಂಗ್ಸ್‌ವೊಂದರಲ್ಲಿ 69 ರನ್‌ಗಳಿಗೆ 8 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ದುಲೀಪ್‌ ಟ್ರೋಫಿ ಇತಿಹಾಸದಲ್ಲಿಯೇ ನಾಲ್ಕನೇ ಅತ್ಯುತ್ತಮ ಬೌಲಿಂಗ್‌ ಸ್ಪೆಲ್‌ ಎಂಬ ದಾಖಲೆಗೆ ಅನ್ಷುಲ್‌ ಕಾಂಬೋಜ್‌ ಭಾಜನರಾಗಿದ್ದರು.

Anshul Kamboj: ಇನಿಂಗ್ಸ್‌ನ ಎಲ್ಲ 10 ವಿಕೆಟ್‌ ಕಿತ್ತ ಅನ್ಶುಲ್ ಕಾಂಬೋಜ್

ಕಳೆದ 2022ರಲ್ಲಿ ಹರಿಯಾಣ ತಂಡದ ಪರ ಅನ್ಷುಲ್‌ ಕಾಂಬೋಜ್‌ ಅವರು ಮೂರೂ ಸ್ವರೂಪಕ್ಕೆ ಪದಾರ್ಪಣೆ ಮಾಡಿದ್ದರು ಹಾಗೂ ಅಂದಿನಿಂದ ಅವರು ಅತ್ಯುತ್ತಮ ಸಾಧನೆಯತಗ್ತ ಹೆಜ್ಜೆ ಹಾಕುತ್ತಿದ್ದಾರೆ. ಕೇರಳ ವಿರುದ್ಧದ ಪಂದ್ಯ ಅನ್ಷುಲ್‌ ಪಾಲಿಗೆ 19ನೇ ಪ್ರಥಮ ದರ್ಜೆ ಪಂದ್ಯವಾಗಿದ್ದು, 24ರ ಸರಾಸರಿಯಲ್ಲಿ 54 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಕಳೆದ ವರ್ಷ ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಹರಿಯಾಣ ಪರ ಇವರು ಅದ್ಭತ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದರು. ಈ ಟೂರ್ನಿಯಲ್ಲಿ ಅನ್ಷುಲ್‌ ಕಾಂಬೋಜ್‌ ಆಡಿದ್ದ 10 ಪಂದ್ಯಗಳಿಂದ 17 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರ ಫಲವಾಗಿ ಅವರನ್ನು ಮುಂಬೈ ಇಂಡಿಯನ್ಸ್‌ ತಂಡ ಖರೀದಿಸಿತ್ತು. 20 ಲಕ್ಷ ರೂ. ಮೂಲ ಬೆಲೆಗೆ ಹಾರ್ದಿಕ್‌ ಪಾಂಡ್ಯ ಬಳಗದಲ್ಲಿ ಆಡಿದ್ದ ಅನ್ಷುಲ್‌ ಎರಡು ಐಪಿಎಲ್‌ ವಿಕೆಟ್‌ಗಳನ್ನು ಪಡೆದಿದ್ದರು.

ಮುಂಬರುವ ಐಪಿಎಲ್‌ ಟೂರ್ನಿಯಲ್ಲಿಯೂ ಅನ್ಷುಲ್‌ ಕಾಂಬೋಜ್‌ ಅವರು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಈ ತಿಂಗಳಾಂತ್ಯದಲ್ಲಿ ರೈಟ್‌ ಟು ಮ್ಯಾಷ್‌ ನಿಯಮದಡಿಯಲ್ಲಿ ಅನ್‌ಕ್ಯಾಪ್ಡ್‌ ಆಟಗಾರನನ್ನು ಪಡೆಯಬಹುದು. ಈ ನಿಯಮದಡಿ ಅನ್ಷುಲ್‌ ಅವರು ಮುಂಬೈಗೆ ಮರಳಿದರೂ ಅಚ್ಚರಿ ಇಲ್ಲ.

ಕಳೆದ ತಿಂಗಳು ನಡೆದಿದ್ದ 2024ರ ಎಮರ್ಜಿಂಗ್‌ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ಎ ತಂಡದ ಪರ 23ರ ಪ್ರಾಯದ ಬೌಲರ್‌ ಆಡಿದ್ದರು. ಇಲ್ಲಿ ಆಡಿದ್ದ ಮೂರು ಪಂದ್ಯಗಳಿಂದ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು.