ದುಬೈ: ಪಾಕಿಸ್ತಾನ ವಿರುದ್ಧ ಸೋಲುವ ಮುನ್ನ ಅಫ್ಘಾನಿಸ್ತಾನ್ ವೀರೋಚಿತ ಹೋರಾಟ ತೋರುವಲ್ಲಿ ಯಶಸ್ವಿಯಾಯಿತು.
ವಿಶ್ವದ ಅತ್ಯುತ್ತಮ ಸ್ಪಿನ್ನರ್ಗಳಲ್ಲೊಬ್ಬರೆನಿಸಿರುವ ರಷೀದ್ ಖಾನ್ ಟಿ20 ಕ್ರಿಕೆಟ್ನಲ್ಲಿ 100 ವಿಕೆಟ್ ಮೈಲಿಗಲ್ಲು ಮುಟ್ಟಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ವಿಕೆಟ್ ಕಿತ್ತ ವಿಶ್ವದ ನಾಲ್ಕನೇ ಬೌಲರ್ ಆಗಿದ್ದಾರೆ. ಅತಿ ಕಡಿಮೆ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ದಾಖಲೆ ನಿರ್ಮಿ ಸುವ ಮೂಲಕ ಶ್ರೀಲಂಕಾದ ದಂತಕಥೆ ಲಸಿತ್ ಮಾಲಿಂಗ ಅವರ ದಾಖಲೆ ಮುರಿದಿದ್ದಾರೆ. ಲಸಿತ್ ಮಾಲಿಂಗ ಅವರು 100 ವಿಕೆಟ್ ಮೈಲಿಗಲ್ಲು ಮುಟ್ಟಲು 76 ಪಂದ್ಯ ಬೇಕಾಗಿತ್ತು. ಆದರೆ ರಷೀದ್ ಕೇವಲ 54 ಇನಿಂಗ್ಸ್ನಲ್ಲೇ ಈ ಸಾಧನೆ ಮಾಡಿದ್ಧಾರೆ. ನೂರು ವಿಕೆಟ್ ಮೈಲಿಗಲ್ಲು ಮುಟ್ಟಿರುವ ಇತರ ಆಟಗಾರರಾದ ಟಿಮ್ ಸೌಥಿ ಮತ್ತು ಶಾಕಿಬ್ ಅಲ್ ಹಸನ್ ಅವರು 82 ಮತ್ತು 83 ಇನ್ನಿಂಗ್ಸ್ ಆಡಬೇಕಾಯಿತು.
ರಷೀದ್ ಖಾನ್ ಟಿ20 ಕ್ರಿಕೆಟ್ನಲ್ಲಿ ಸರಿಸಾಟಿ ಇಲ್ಲದ ಬೌಲರ್. ತಮ್ಮ 100 ವಿಕೆಟ್ಗಳನ್ನ ಇವರು 12 ರನ್ ಸರಾಸರಿಯಂತೆ ಪಡೆದುಕೊಂಡಿದ್ಧಾರೆ. ಇವರ ಬೌಲಿಂಗ್ ಎಕನಾಮಿ, ಅಂದರೆ ಪ್ರತೀ ಓವರ್ಗೆ ನೀಡಿರುವ ಸರಾಸರಿ ರನ್ ಕೇವಲ 6 ರನ್ಗಿಂತ ತುಸು ಹೆಚ್ಚು ಅಷ್ಟೇ.
ರಷೀದ್ ಖಾನ್ 17ನೇ ವಯಸ್ಸಿಗೆ ಅಫ್ಘಾನಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದವರು. ವಿಶ್ವದ ವಿವಿಧ ದೇಶಗಳಲ್ಲಿರುವ ಟ್ವೆಂಟಿ20 ಟೂರ್ನಿಗಳಲ್ಲಿ ರಷೀದ್ ಖಾನ್ ಅವರಿಗೆ ಬಹಳ ಬೇಡಿಕೆ ಇದೆ. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ನಾಲ್ಕು ಸೀಸನ್ ಆಡಿದ್ದಾರೆ. ಇಂಗ್ಲೆಂಡ್, ಪಾಕಿಸ್ತಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಸೌತ್ ಆಫ್ರಿಕಾದ ಟ್ವೆಂಟಿ20 ಟೂರ್ನಿಗಳಲ್ಲಿ ರಷೀದ್ ಖಾನ್ ಅವರು ಆಡುತ್ತಾ ಬಂದಿದ್ಧಾರೆ.
ವಿಶ್ವಕಪ್ಗೆ ಮುನ್ನ ಇಲ್ಲಿ ಐಪಿಎಲ್ನಲ್ಲಿ ಆಡಿದ್ದ ರಷೀದ್ ಖಾನ್, ದಿನಗಳೆದಂತೆ ಇಲ್ಲಿನ ಪಿಚ್ಗಳು ನಿಧಾನಗೊಳ್ಳುತ್ತಾ ಹೋಗುತ್ತವೆ. ತಮ್ಮ ಬೌಲಿಂಗ್ ಶೈಲಿಗೆ ಇವು ಸಹಕಾರಿ ಆಗುತ್ತವೆ ಎಂದು ಹೇಳಿಕೊಂಡಿದ್ದರು.