Thursday, 19th September 2024

R Ashwin : ವಿನೂತನ ದಾಖಲೆ ಬರೆದ ಆರ್. ಅಶ್ವಿನ್‌- ಜಡೇಜಾ ಜೋಡಿ

Ravichandran Ashwin

ಬೆಂಗಳೂರು: ರವಿಚಂದ್ರನ್ ಅಶ್ವಿನ್ (R Ashwin) ಮತ್ತು ರವೀಂದ್ರ ಜಡೇಜಾ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಮಿಂಚುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಪಂದ್ಯದ ಮೊದಲೆಡು ಸೆಷನ್‌ಗಳಲ್ಲಿ ಹಿನ್ನಡೆ ಅನುಭವಿಸಿದ್ದ ಭಾರತ ತಂಡಕ್ಕೆ ಅವರಿಬ್ಬರೂ ಮುನ್ನಡೆ ತಂದುಕೊಟ್ಟಿದ್ದಾರೆ. 144ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು 200 ರನ್ ಗಡಿ ದಾಟಲು ಹೆಣಗಾಡುತ್ತಿದ್ದಾಗ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೊತೆಯಾದರು. ಈ ಜೋಡಿ ತಮ್ಮ ಅಸಾಧಾರಣ ಬ್ಯಾಟಿಂಗ್ ಕೌಶಲದಿಂದ ಎದುರಾಳಿ ತಂಡವನ್ನು ಹಿಮ್ಮೆಟ್ಟಸಿದರು.

ಮೊದಲ ದಿನದಾಟದ ಅಂತ್ಯಕ್ಕೆ ಇಬ್ಬರೂ ಆಲ್ರೌಂಡರ್‌ಗಳು ಕ್ರೀಸ್‌ನಲ್ಲಿ ಅಜೇಯರಾಗಿ ಉಳಿದಿದ್ದರೆ. ಜಡೇಜಾ 117 ಎಸೆತಗಳಲ್ಲಿ ಅಜೇಯ 86 ರನ್ ಗಳಿಸಿದರೆ, ರವಿಚಂದ್ರನ್ ಅಶ್ವಿನ್ 112 ಎಸೆತಗಳಲ್ಲಿ 102 ರನ್ ಗಳಿಸಿ ಔಟಾಗದೆ ಉಳಿದರು.

ಅಶ್ವಿನ್‌- ಜಡೇಜಾ ಎಲೈಟ್ ಕ್ಲಬ್‌ಗೆ ಸೇರ್ಪಡೆ

ಅಶ್ವಿನ್ ಮತ್ತು ಜಡೇಜಾ ಇಬ್ಬರೂ ದಿನದ ಅಂತ್ಯದ ವೇಳೆಗೆ 37.4 ಓವರ್‌ಗಳನ್ನು ಆಡಿ ಅಜೇಯ 195 ರನ್‌ ಜೊತೆಯಾಟವನ್ನು ನೀಡಿದ್ದರು. ಈ ಜೊತೆಯಾಟದೊಂದಿಗೆ, ತವರಿನ ಟೆಸ್ಟ್‌ನಲ್ಲಿ7 ನೇ ವಿಕೆಟ್ ಅಥವಾ ಅದಕ್ಕಿಂತ ಕಡಿಮೆ ಜೊತೆಯಾಟದಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟಿಂಗ್ ಜೋಡಿಗಳ ಪಟ್ಟಿಯಲ್ಲಿ ಭಾರತದ ದಂತಕಥೆಗಳಾದ ಕಪಿಲ್ ದೇವ್ ಮತ್ತು ಸೈಯದ್ ಕಿರ್ಮಾನಿ ಅವರ ಸಾಲಿಗೆ ಸೇರಿದರು.

ಅಶ್ವಿನ್ ಮತ್ತು ಜಡೇಜಾ 14 ಟೆಸ್ಟ್ ಪಂದ್ಯಗಳಲ್ಲಿ ಈ ದಾಖಲೆಯನ್ನು ಪೂರ್ಣಗೊಳಿಸಿದ್ದಾರೆ. ಹೀಗಾಗಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ 100  ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಬಾರಿಗೆ ಶತಕದ ಜೊತೆಯಾಟವಾಡಿದ್ದು, ಈ ಜೋಡಿ 130 ರನ್ ಕಲೆಹಾಕಿತ್ತು.

ಕಪಿಲ್ ದೇವ್ ಮತ್ತು ಸೈಯದ್ ಕಿರ್ಮಾನಿ 14 ಟೆಸ್ಟ್ ಪಂದ್ಯಗಳಲ್ಲಿ 617 ರನ್ ಗಳಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಶ್ವಿನ್ ಮತ್ತು ಜಡೇಜಾ ಅವರಂತೆಯೇ, ಕಪಿಲ್ ದೇವ್ ಮತ್ತು ಸೈಯದ್ ಕಿರ್ಮಾನಿ ಕೂಡ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು.

ಸಾಧನೆಯ ಪಟ್ಟಿಯ ವಿವರ

ಕಪಿಲ್ ದೇವ್ ಮತ್ತು ಸೈಯದ್ ಕಿರ್ಮಾನಿ – 14 ಪಂದ್ಯಗಳಲ್ಲಿ 617 ರನ್
ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ – 14 ಪಂದ್ಯಗಳಲ್ಲಿ 500*
ಎಂಎಸ್ ಧೋನಿ ಮತ್ತು ವಿವಿಎಸ್ ಲಕ್ಷ್ಮಣ್ – 3 ಪಂದ್ಯಗಳಲ್ಲಿ 486 ರನ್
ಸೈಯದ್ ಕಿರ್ಮಾನಿ ಮತ್ತು ರವಿ ಶಾಸ್ತ್ರಿ – 8 ಪಂದ್ಯಗಳಲ್ಲಿ 462
ರವೀಂದ್ರ ಜಡೇಜಾ ಮತ್ತು ವೃದ್ಧಿಮಾನ್ ಸಹಾ – 9 ಪಂದ್ಯಗಳಲ್ಲಿ 421 ರನ್

ಇದನ್ನೂ ಓದಿ : KL Rahul : ಕೆ. ಎಲ್ ರಾಹುಲ್ ಬ್ಯಾಟಿಂಗ್‌ನಲ್ಲಿ ಫೇಲ್‌, ಟೆಸ್ಟ್‌ ತಂಡದ ಸ್ಥಾನಕ್ಕೆ ಕುತ್ತು?
ಇಬ್ಬರೂ ತಮ್ಮ ಸ್ಟ್ರೈಕ್ ರೇಟ್ 70ಕ್ಕಿಂತ ಹೆಚ್ಚು ಇಟ್ಟಿದ್ದು ಇದು ಇಬ್ಬರೂ ಬ್ಯಾಟರ್‌ಗಳ ಆಕ್ರಮಣಕಾರಿ ಉದ್ದೇಶವನ್ನು ತೋರಿಸುತ್ತದೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿದೆ. ಇದಕ್ಕೂ ಮುನ್ನ ಹಸನ್ ಮಹಮೂದ್ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನು ಕಾಡಿದ್ದರು. ಮಹಮೂದ್ 58ಕ್ಕೆ 4 ವಿಕೆಟ್ ಪಡೆದಿದ್ದಾರೆ.