Thursday, 12th December 2024

ಚೆನ್ನೈಗೆ ಸೋಲುಣಿಸಿದ ರಾಯಲ್ ಚಾಲೆಂಜರ್ಸ್, ಹರ್ಷಲ್ ಮ್ಯಾಜಿಕ್‌

ಪುಣೆ: ಆರಂಭಿಕ ಡೆವೊನ್ ಕಾನ್ವೇ(56 ರನ್) ಅರ್ಧಶತಕದ ಹೊರತಾ ಗಿಯೂ ಹರ್ಷಲ್ ಪಟೇಲ್(3-35) ಹಾಗೂ ಮ್ಯಾಕ್ಸ್‌ವೆಲ್(2-22)ದಾಳಿಗೆ ತತ್ತರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 14 ರನ್‌ಗಳ ಅಂತರದಿಂದ ಸೋಲನುಭವಿಸಿದೆ.

ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 174 ರನ್ ಗುರಿ ಪಡೆದ ಚೆನ್ನೈ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಚೆನ್ನೈ ಪರ ಮೊಯಿನ್ ಅಲಿ(34ರನ್), ಋತುರಾಜ್ ಗಾಯಕ್ವಾಡ್(28ರನ್) ಎರಡಂಕೆಯ ಸ್ಕೋರ್ ಗಳಿಸಿದರು. ಆರ್‌ಸಿಬಿ ಪರ ಹೇಝಲ್‌ವುಡ್(1-19), ಶಹಬಾಝ್ ಅಹ್ಮದ್(1-27) ಹಾಗೂ ವನಿಂದು ಹಸರಂಗ(1-31)ತಲಾ ಒಂದು ವಿಕೆಟ್‌ಗಳನ್ನು ಪಡೆದರು.

6ನೇ ಗೆಲುವು ದಾಖಲಿಸಿ 12 ಅಂಕ ಗಳಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡವು ನಾಯಕ ಎಫ್ ಡು ಪ್ಲೆಸಿಸ್(38 ರನ್) ಹಾಗೂ ವಿರಾಟ್ ಕೊಹ್ಲಿ(30 ರನ್) ಮೊದಲ ವಿಕೆಟ್‌ಗೆ ಗಳಿಸಿದ 62 ರನ್ ಜೊತೆಯಾಟ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್ ಲೋಮ್ರೋರ್(42 ರನ್) ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 173 ರನ್ ಗಳಿಸಿತು.

ಆರ್‌ಸಿಬಿಗೆ ಪ್ಲೆಸಿಸ್ ಹಾಗೂ ಕೊಹ್ಲಿ ಉತ್ತಮ ಆರಂಭವನ್ನೇ ನೀಡಿದರು. 8ನೇ ಓವರ್‌ನಲ್ಲಿ ಪ್ಲೆಸಿಸ್ ವಿಕೆಟ್ ಪಡೆದ ಮೊಯಿನ್ ಅಲಿ ಚೆನ್ನೈ ಮೊದಲ ಮೇಲುಗೈ ಒದಗಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್(3)ರನೌಟಾದರು. ಉತ್ತಮ ಮೊತ್ತ ಗಳಿಸುವ ವಿಶ್ವಾಸ ಮೂಡಿಸಿದ್ದ ಕೊಹ್ಲಿಯ ವರನ್ನು ಅಲಿ ಕ್ಲೀನ್‌ಬೌಲ್ಡ್ ಮಾಡಿದರು. ಆಗ ಆರ್‌ಸಿಬಿ 9.5ನೇ ಓವರ್‌ನಲ್ಲಿ 79 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು.

ಈ ವೇಳೆ ಆಸರೆಯಾದ ಮಹಿಪಾಲ್(42ರನ್) ಮೊದಲಿಗೆ ರಜತ್ ಪಾಟಿದಾರ್(21 ರನ್)ರೊಂದಿಗೆ 4ನೇ ವಿಕೆಟ್‌ಗೆ 44 ರನ್ ಹಾಗೂ ಕಾರ್ತಿಕ್(ಔಟಾಗದೆ 26) ಅವರೊಂದಿಗೆ 5ನೇ ವಿಕೆಟ್‌ಗೆ 32 ರನ್ ಸೇರಿಸಿದರು.