Monday, 25th November 2024

RCB IPL 2025 Squad: ಆರ್‌ಸಿಬಿ ಬಳಿ ಇನ್ನು ಎಷ್ಟು ಮೊತ್ತವಿದೆ? ಖರೀದಿಸಿದ ಆಟಗಾರರು ಯಾರು?

ಜೆಡ್ಡಾ(ಸೌದಿ ಅರೇಬಿಯಾ): ಭಾನುವಾರ ನಡೆದ ಐಪಿಎಲ್‌ ಮೆಗಾ ಹರಾಜಿನಲ್ಲಿ(IPL 2025 Auction) ಅಭಿಮಾನಿಗಳ ನಿರೀಕ್ಷೆಗಳನ್ನೆಲ್ಲಾ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು*RCB IPL 2025 Squad) ತಲೆಕೆಳಗೆ ಮಾಡಿತ್ತು. ಪ್ರಮುಖ ಆಟಗಾರರನ್ನು ಖರೀದಿ ಮಾಡದೆ ಅನಾನುಭವಿ ಆಟಗಾರರಿಗೆ ದುಬಾರಿ ಮೊತ್ತ ನೀಡಿ ಖರೀದಿ ಮಾಡಿತು. ಫ್ರಾಂಚೈಸಿ ವಿರುದ್ಧ ಸ್ವತಃ ಅಭಿಮಾನಿಗಳೇ ಟ್ರೋಲ್‌ ಮತ್ತು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಸೋಮವಾರ ನಡೆಯುವ ಹರಾಜಿನಲ್ಲಿ ಇನ್ನಾರನ್ನು ಖರೀದಿ ಮಾಡಲಿದೆಯೋ ಎಂದು ಕಾದು ನೋಡಬೇಕಿದೆ.

ಸದ್ಯ ಆರ್‌ಸಿಬಿ ಬಳಿ 30,65 ಕೋಟಿ ರೂ. ಮೊತ್ತವಿದೆ. ಭಾನುವಾರ ಖರೀದಿಸಿದ ಆಟಗಾರರೆಂದರೆ, ಜೋಶ್‌ ಹ್ಯಾಜಲ್‌ವುಡ್‌(12 ಕೋಟಿ), ಫಿಲ್‌ ಸಾಲ್ಟ್‌(11.50 ಕೋಟಿ), ಜಿತೇಶ್‌ ಶರ್ಮಾ(11 ಕೋಟಿ), ಲಿಯಾಮ್‌ ಲಿವಿಂಗ್‌ಸ್ಟೋನ್‌(8.75 ಕೋಟಿ), ರಸಿಕ್‌ ಸಲಾಂ(6 ಕೋಟಿ), ಸುಯಶ್‌ ಶರ್ಮ(2.60 ಕೋಟಿ). ಒಟ್ಟು ಆರ್‌ಸಿಬಿ ಬಳಿ 9 ಆಟಗಾರರಿದ್ದಾರೆ. ಹರಾಜಿನಲ್ಲಿ 6 ಆಟಗಾರರು ಮತ್ತು ರಿಟೇನ್‌ನಲ್ಲಿ 3 ಮಂದಿ.

ಐಪಿಎಲ್ ಮೆಗಾ ಹರಾಜಿನ ಮೊದಲ ದಿನ ಆರ್​ಸಿಬಿ ಒಟ್ಟು 6 ಆಟಗಾರರನ್ನು ಖರೀದಿಸಿತು. ಇದರಲ್ಲಿ ಮೂವರು ಆಟಗಾರರು ವಿದೇಶಿಗರಾದರೆ… ಉಳಿದ ಮೂವರು ಭಾರತೀಯ ಆಟಗಾರರಾಗಿದ್ದಾರೆ. ಬೇರೆ ತಂಡಗಳಿಗೆ ಹೊಲಿಸಿದರೆ, ಆರ್​ಸಿಬಿ ಯಾವುದೇ ಆಟಗಾರನಿಗೂ ದುಬಾರಿ ಬೆಲೆ ನೀಡಲಿಲ್ಲ.

ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ರಸಿಕ್‌ ಸಲಾಂ ಅವರನ್ನು 6 ಕೋಟಿ ನೀಡಿ ಖರೀದಿ ಮಾಡಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಯಾರೆಂದು ತಿಳಿಯದೇ ಇರುವ ಆಟಗಾರನಿಗೆ ಇಷ್ಟೊಂದು ಹಣ ನೀಡುವ ಬದಲು ಕನ್ನಡಿಗರಾದ ದೇವದತ್ತ ಪಡಿಕ್ಕಲ್‌,ಕೆಎಲ್ ರಾಹುಲ್, ಶ್ರೇಯಸ್‌ ಗೋಪಾಲ್‌, ಅಭಿನವ್‌ ಮನೋಹರ್‌ ಇವರಲ್ಲಿ ಒಬ್ಬರನ್ನು ಖರೀದಿ ಮಾಡಬಹುದಿತ್ತಲ್ಲ ಎಂದು ಫ್ರಾಂಚೈಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಕನ್ನಡಿಗ ಆಟಗಾರರನ್ನು ಖರೀದಿಸುವ ಮನಸ್ಸು ಕೂಡ ಮಾಡಲಿಲ್ಲ.

ಮೆಗಾ ಹರಾಜು ಪ್ರಕ್ರಿಯೆಯ ಮೊದಲನೇ ದಿನದ ಅಂತ್ಯಕ್ಕೆ ಭಾರತ ತಂಡದ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್ ರಿಷಭ್‌ ಪಂತ್ ಅವರು ಐಪಿಎಲ್‌ ಹರಾಜು ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಪಂತ್‌ ಅವರನ್ನು ಲಖನೌ ಸೂಪರ್‌ ಜಯಂಟ್ಸ್‌ 27 ಕೋಟಿ ರೂ. ಗಳಿಗೆ ಖರೀದಿಸಿತು. ಆ ಮೂಲಕ ಪಂತ್‌ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.

ಇದಕ್ಕೂ ಮುನ್ನ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್‌ ರೈಡರ್ಸ್‌ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್‌ ಕಿಂಗ್ಸ್‌ 26 ಕೋಟಿ ರೂ 75 ಲಕ್ಷ ರೂ. ಗಳಿಗೆ ಖರೀದಿಸಿದೆ. ಆದರೆ ವೆಂಕಟೇಶ್ ಅಯ್ಯರ್ ಅವರು ಅನಿರೀಕ್ಷಿತವಾಗಿ ದೊಡ್ಡ ಮೊತ್ತವನ್ನು ಪಡೆದಿದ್ದಾರೆ. ವೆಂಕಟೇಶ ಅಯ್ಯರ್‌ ಅವರನ್ನು ಕೆಕೆಆರ್‌, ಆರ್‌ಸಿಬಿ ಜೊತೆಗೆ ಬಿಡ್‌ ವಾರ್‌ ನಡೆಸುವ ಮೂಲಕ ಅಂತಿಮವಾಗಿ 23.75 ಕೋಟಿ ರೂ. ಗಳಿಗೆ ಖರೀದಿಸಿತು.