Thursday, 12th December 2024

ವೈಫಲ್ಯಕ್ಕೆ ಬೆಲೆ ತೆತ್ತ ಆರ್‌ಸಿಬಿ: ಕೋಲ್ಕತಾ ಮೇಲುಗೈ

ಅಬುಧಾಬಿ: ಬ್ಯಾಟ್ಸ್‌ಮನ್‌ಗಳ ವೈಫಲ್ಯಕ್ಕೆ ಬೆಲೆ ತೆತ್ತ ಆರ್‌ಸಿಬಿ ತಂಡ ಐಪಿಎಲ್-14ರ ಎರಡನೇ ಭಾಗದಲ್ಲಿ ಸೋಲಿನ ಆರಂಭ ಕಂಡಿದೆ.

ಸೋಮವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಬಳಗ 9 ವಿಕೆಟ್‌ಗಳಿಂದ ಕೆಕೆಆರ್ ತಂಡಕ್ಕೆ ಶರಣಾಯಿತು. ಪ್ಲೇಆಫ್ ಹಂತಕ್ಕೇರುವ ಅವಕಾಶ ಕ್ಷೀಣಿಸಿದ್ದರೂ ಸಮಾಧಾನಕರ ಗೆಲುವಿನೊಂದಿಗೆ ಕೆಕೆಆರ್ ಲೀಗ್‌ನಲ್ಲಿ ತನ್ನ ಹೋರಾಟ ಉಳಿಸಿಕೊಂಡಿತು.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 19 ಓವರ್‌ಗಳಲ್ಲಿ 92 ರನ್‌ಗಳಿಗೆ ಸರ್ವಪತನ ಕಂಡಿತು. ವರುಣ್ ಚಕ್ರವರ್ತಿ (13ಕ್ಕೆ 3), ಆಲ್ರೌಂಡರ್ ಆಂಡ್ರೆ ರಸೆಲ್ (9ಕ್ಕೆ 3) ಮಾರಕ ದಾಳಿಗೆ ನಲುಗಿ ಐಪಿಎಲ್‌ನಲ್ಲಿ 7ನೇ ಬಾರಿಗೆ 100 ರನ್‌ಗಿಂತ ಕಡಿಮೆ ಮೊತ್ತ ಪೇರಿಸಿತು. ಮೊತ್ತ ಬೆನ್ನಟ್ಟಿದ ಕೆಕೆಆರ್ 10 ಓವರ್‌ಗಳಲ್ಲಿ 1 ವಿಕೆಟ್‌ಗೆ 94 ರನ್‌ಗಳಿಸಿ ಗೆಲುವಿನ ದಡ ಸೇರಿತು. ಕೆಕೆಆರ್‌ ಪರ ಆರಂಭಕಾರ ಶುಭಮನ್‌ ಗಿಲ್‌(48), ವೆಂಕಟೇಶ್ವರ್‌ ಅಯ್ಯರ್‌ ಅಜೇಯ 41 ರನ್‌ ಗಳಿಸಿದರು. ಆರ್‌ಸಿಬಿ ಪರ ಚಹಲ್‌ ಒಂದು ವಿಕೆಟ್‌ ಉರುಳಿಸಿದರು.

ಆರ್‌ಸಿಬಿ ಒಂದೊಂದು ರನ್ನಿಗಾಗಿ ಪರದಾಡುತ್ತ ಹೋಯಿತು. ನಾಯಕ ವಿರಾಟ್‌ ಕೊಹ್ಲಿ ಕೇವಲ 5 ರನ್‌ ಮಾಡಿ ದ್ವಿತೀಯ ಓವರ್‌ನಲ್ಲೇ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. ಅಲ್ಲಿಂದಲೇ ತಂಡದ ಕುಸಿತ ಮೊದಲ್ಗೊಂಡಿತು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ.

ಎಡಗೈ ಆಟಗಾರ ದೇವದತ್ತ ಪಡಿಕ್ಕಲ್‌ ಭರವಸೆ ಮೂಡಿಸಿದರೂ 22 ರನ್‌ ಮಾಡಿ ಫ‌ರ್ಗ್ಯುಸನ್‌ ಎಸೆತದಲ್ಲಿ ಕೀಪರ್‌ ಕಾರ್ತಿಕ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಈ ಅವಧಿಯಲ್ಲಿ ಆರ್‌ಸಿಬಿ ಆರಂಭಿಕರನ್ನು ಕಳೆದುಕೊಂಡು 41 ರನ್‌ ಮಾಡಿತ್ತು.

9ನೇ ಓವರ್‌ನಲ್ಲಿ ಆಯಂಡ್ರೆ ರಸೆಲ್‌ ಅವಳಿ ಆಘಾತವನ್ನಿಕ್ಕಿ ಆರ್‌ಸಿಬಿ ಸಂಕಟವನ್ನು ಬಿಗಡಾಯಿಸುವಂತೆ ಮಾಡಿದರು. ವನ್‌ಡೌನ್‌ನಲ್ಲಿ ಬಂದ ಕೀಪರ್‌ ಶ್ರೀಕರ್‌ ಭರತ್‌ (19 ಎಸೆತಗಳಿಂದ 16 ರನ್‌) ಡೀಪ್‌ ಮಿಡ್‌ ವಿಕೆಟ್‌ ಫೀಲ್ಡರ್‌ ಗಿಲ್‌ಗೆ ಕ್ಯಾಚ್‌ ನೀಡಿದರೆ, 4ನೇ ಎಸೆತದಲ್ಲಿ ಎಬಿ ಡಿ ವಿಲಿಯರ್ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದರು.

12ನೇ ಓವರ್‌ನ ಸತತ ಎಸೆತಗಳಲ್ಲಿ ಅವರು ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಮೊದಲ ಐಪಿಎಲ್‌ ಪಂದ್ಯವಾಡಿದ ವನಿಂದು ಹಸರಂಗ ವಿಕೆಟ್‌ ಹಾರಿಸಿದರು. ಹಸರಂಗ ಮೊದಲ ಎಸೆತದಲ್ಲೇ ಎಲ್‌ಬಿಡಬ್ಲ್ಯು ಆದರು. ಕೈಲ್‌ ಜಾಮೀಸನ್‌ ಲೆಗ್‌ ಬಿಫೋರ್‌ನಿಂದ ಪಾರಾಗುವುದರೊಂದಿಗೆ ಚಕ್ರವರ್ತಿಗೆ ಹ್ಯಾಟ್ರಿಕ್‌ ತಪ್ಪಿತು.

ಚಕ್ರವರ್ತಿ ತಮ್ಮ ಮುಂದಿನ ಓವರ್‌ನಲ್ಲಿ ಸಚಿನ್‌ ಬೇಬಿಗೆ ಪೆವಿಲಿಯನ್‌ ಹಾದಿ ತೋರಿಸಿದರು. 15 ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ 75ಕ್ಕೆ 7 ವಿಕೆಟ್‌ ಉದುರಿಸಿ ಕೊಂಡು ಒದ್ದಾಡುತ್ತಿತ್ತು. ಕೋಲ್ಕತಾ ಬೌಲರ್ ಸಂಪೂರ್ಣ ಮೇಲುಗೈ ಸಾಧಿಸಿದ್ದರು.

ಇದು ಐಪಿಎಲ್‌ನಲ್ಲಿ ದಾಖಲಾದ ಆರ್‌ಸಿಬಿಯ 6ನೇ ಕನಿಷ್ಠ ಮೊತ್ತ.  2017ರ ಕೋಲ್ಕತಾ ಪಂದ್ಯದಲ್ಲಿ 49ಕ್ಕೆ ಕುಸಿದದ್ದು. ಇದು ಐಪಿಎಲ್‌ನಲ್ಲಿ ಬೆಂಗಳೂರು ತಂಡದ ಅತೀ ಕಡಿಮೆ ಸ್ಕೋರ್‌ ಕೂಡ ಆಗಿದೆ. ಇದಕ್ಕೂ ಮುನ್ನ 2008ರ ಬೆಂಗಳೂರು ಪಂದ್ಯದಲ್ಲಿ 82 ರನ್ನಿಗೆ ಸರ್ವಪತನ ಕಂಡಿತ್ತು.